ಸೌರ ವಿದ್ಯುತ್‌ ಬಳಕೆಗೆ ಕೇಂದ್ರದಿಂದ ಉತ್ತೇಜನ

ಕಾರ್ಕಳ : ಜನರಿಗೆ ವಿದ್ಯುತ್‌ ಬಿಲ್‌ ಹೊರೆಯಾಗಬಾರದೆಂಬ ಉದ್ದೇಶದಿಂದ ಕೇಂದ್ರ ಸರಕಾರವು ಸೌರ ವಿದ್ಯುತ್‌ ಬಳಕೆಗೆ ಉತ್ತೇಜನ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪಿಎಂ ಸೂರ್ಯ ಘರ್‌ ಮುಫ್ತ್‌ ಬಿಜ್ಲಿ ಯೋಜನೆ ಫೆ. 13ರಿಂದ ಜಾರಿಗೆ ಬಂದಿದ್ದು, ಯೋಜನೆಯಲ್ಲಿ 1 ಕಿ. ವ್ಯಾ. ವಿದ್ಯುತ್‌ ಉತ್ಪಾದಿಸುವ ಸೌರ ವ್ಯವಸ್ಥೆಗೆ 30 ಸಾವಿರ ರೂ., 2 ಕಿ. ವ್ಯಾ. ಗೆ 60 ಸಾವಿರ ರೂ., 3 ಕಿ. ವ್ಯಾ. ವಿದ್ಯುತ್‌ ಉತ್ಪಾದನೆಗೆ 78 ಸಾವಿರ ರೂ. ಸಬ್ಸಿಡಿಯನ್ನು ಕೇಂದ್ರ ಸರಕಾರ ಘೋಷಿಸಿದೆ. ಜನರಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ಕೇಂದ್ರ ಸರಕಾರ ಯೋಜನೆ ರೂಪಿಸಿದ್ದು, ಮನೆ ಮೇಲೆಯೇ ಸೌರ ಘಟಕಗಳನ್ನು ಸ್ಥಾಪಿಸಿ ವಿದ್ಯುತ್‌ ಉತ್ಪಾದಿಸಬಹುದಾಗಿದೆ. ವಿದ್ಯುತ್‌ ಉತ್ಪಾದಿಸಿ, ಬಳಸಿದ ಅನಂತರ ಉಳಿಕೆ ವಿದ್ಯುತನ್ನು ಮೆಸ್ಕಾಂಗೆ ಮಾರಾಟ ಮಾಡಲು ಅವಕಾಶವಿದ್ದು ಇದರಿಂದ ಆದಾಯವನ್ನು ಗಳಿಸಬಹುದಾಗಿದೆ.

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಈ ಯೋಜನೆ 75 ಸಾವಿರ ಕೋಟಿ ರೂ. ಗಳಿಗೂ ಹೆಚ್ಚಿನ ಹೂಡಿಕೆ ಹೊಂದಿದ್ದು, ಸುಮಾರು 1 ಕೋಟಿ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆಯಲಿವೆ. ಸುಸ್ಥಿರ ಅಭಿವೃದ್ಧಿ ಹಾಗೂ ಜನರ ಕಲ್ಯಾಣ ಹೆಚ್ಚಿಸಲು ಯೋಜನೆ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಯೋಜನೆ ಕುರಿತು ಬಣ್ಣಿಸಿದ್ದಾರೆ.

ಅಗತ್ಯ ದಾಖಲೆ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಗುರುತಿನ ಚೀಟಿ, ವಿಳಾಸ ಪುರಾವೆ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ್, ಪಾಸ್‌ಪೋರ್ಟ್ ಅಳತೆಯ ಚಿತ್ರ, ವಿದ್ಯುತ್ ಬಿಲ್ ಬೇಕಾಗುವುದು.

ಅರ್ಜಿ ಸಲ್ಲಿಕೆ
ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್‌ ಬಿಜ್ಲಿ ಯೋಜನೆಗೆ http://pmsuryaghar.gov.in ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ವೆಬ್‌ಸೈಟ್‌ನ ಮುಖಪುಟಕ್ಕೆ ತೆರಳಿ ಅಲ್ಲಿ ಕ್ವಿಕ್‌ ಲಿಂಕ್‌ ಸೆಕ್ಷನ್‌ನಲ್ಲಿ ಅಪ್ಲೈ ಫಾರ್‌ ರೂಫ್‌ಟಾಪ್‌ ಸೋಲಾರ್‌ ಕ್ಲಿಕ್‌ ಮಾಡಬೇಕು. ಆಗ ಹೊಸ ಪುಟ ತೆರೆದುಕೊಳ್ಳುವುದು. ಅಲ್ಲಿ ಅರ್ಜಿದಾರರು ರಾಜ್ಯ, ಜಿಲ್ಲೆ, ವಿದ್ಯುತ್‌ ಸರಬರಾಜು ಕಂಪನಿ, ವಿದ್ಯುತ್‌ ಗ್ರಾಹಕರ ಸಂಖ್ಯೆ ನಮೂದಿಸಬೇಕು. ಬಳಿಕ ನೆಕ್ಸ್ಟ್‌ ಆಯ್ಕೆಯನ್ನು ಒತ್ತಿ ರಿಜಿಸ್ಟ್ರೇಶನ್‌ ಫಾರ್ಮ್‌ನಲ್ಲಿ ಕೇಳಿರುವ ಮಾಹಿತಿಯನ್ನು ತುಂಬಬೇಕು. ಮೊಬೈಲ್‌ ಸಂಖ್ಯೆ, ಇಮೇಲ್‌ ನಮೂದಿಸಿದ ಬಳಿಕ ಪೋರ್ಟಲ್‌ನಲ್ಲಿ ತಿಳಿಸಿದಂತೆ ದಾಖಲೆಗಳನ್ನು ಅಪ್‌ ಲೋಡ್‌ ಮಾಡಬೇಕು. ಸೋಲಾರ್‌ ರೂಫ್‌ಟಾಫ್‌ ಫಾರ್ಮ್‌ ಭರ್ತಿಗೊಂಡ ಬಳಿಕ ಕಾರ್ಯಸಾಧ್ಯತಾ ಅನುಮೋದನೆಗಾಗಿ ಕಾಯಬೇಕು. ಅನುಮೋದನೆ ಸಿಕ್ಕ ಬಳಿಕ ರೂಫ್‌ಟಾಪ್‌ ಸೋಲಾರ್‌ ಮಾರಾಟಗಾರರಲ್ಲಿ ಸೋಲಾರ್‌ ಪಡೆದು ಅಳವಡಿಸಬೇಕು. ಪ್ಲಾಂಟ್‌ ಸ್ಥಾಪನೆ ಬಳಿಕ ಅದರ ಮಾಹಿತಿಯನ್ನು ಸಬ್ಮಿಟ್‌ ಮಾಡಿ ನೆಟ್‌ ಮೀಟರ್‌ಗೆ ಅರ್ಜಿ ಸಲ್ಲಿಸಬೇಕು. ಪರಿಶೀಲನೆ ಬಳಿಕ ಪೋರ್ಟಲ್‌ನಲ್ಲಿ ಕಮಿಷನಿಂಗ್‌ ಪ್ರಮಾಣ ಪತ್ರ ದೊರೆಯಲಿದೆ. ಕಮಿಷನಿಂಗ್‌ ಪ್ರಮಾಣ ಪತ್ರ ಪಡೆದ ಮೇಲೆ ಪೋರ್ಟಾಲ್‌ನಲ್ಲಿ ಬ್ಯಾಂಕ್‌ ಖಾತೆಯ ವಿವರ, ರದ್ಧುಪಡಿಸಿದ ಚೆಕ್‌ ಅನ್ನು ಅಪ್‌ಲೋಡ್‌ ಮಾಡಬೇಕು. ಅದಾಗಿ 30 ದಿನಗಳ ಒಳಗೆ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಹಣ ಜಮೆಯಾಗಲಿದೆ.

150 ಯೂನಿಟ್‌ವರೆಗೆ ವಿದ್ಯುತ್‌ ಬಳಸುವ ಮನೆಗಳಿಗೆ 1 ರಿಂದ 2 ಕಿ. ವ್ಯಾ. ಘಟಕ ಸ್ಥಾಪನೆ ಮಾಡಬಹುದಾಗಿದೆ. ಈ ಘಟಕಕ್ಕೆ 30 ಸಾವಿರ ರೂ. ನಿಂದ 60 ಸಾವಿರದವರೆಗೆ ಸಬ್ಸಿಡಿ ದೊರೆಯುವುದು.
150 ರಿಂದ 300 ಯೂನಿಟ್‌ವರೆಗೆ ವಿದ್ಯುತ್‌ ಬಳಸುವ ಮನೆಗಳಿಗೆ 2 ರಿಂದ 3 ಕಿ. ವ್ಯಾ. ಘಟಕದ ಅಗತ್ಯವಿದೆ. ಅದಕ್ಕಾಗಿ 60 ಸಾವಿರ ರೂ. ನಿಂದ 78 ಸಾವಿರ ರೂ. ವರೆಗೂ ಸಬ್ಸಿಡಿ ಸಿಗಲಿದೆ.
300 ಯೂನಿಟ್‌ಗೂ ಹೆಚ್ಚು ವಿದ್ಯುತ್‌ ಬಳಸುವ ಮನೆಗಳಿಗೆ 3ಕ್ಕಿಂತ ಹೆಚ್ಚು ಕಿ. ವ್ಯಾ. ಘಟಕದ ಅಗತ್ಯವಿದೆ. ಅದಕ್ಕಾಗಿ 78 ಸಾವಿರ ರೂ. ಸಬ್ಸಿಡಿ ದೊರೆಯಲಿದೆ. 1 ಕಿ. ವ್ಯಾ.ನಿಂದ 10 ಕಿ. ವ್ಯಾ. ತನಕ ಸೋಲಾರ್‌ ಅಳವಡಿಸಿಕೊಳ್ಳಬಹುದಾಗಿದೆ. 1 ಕಿ.ವ್ಯಾ. ಅಳವಡಿಕೆಗೆ 40ರಿಂದ 50 ಸಾವಿರ ರೂ. 2 ಕಿ. ವ್ಯಾ. ಗೆ 1 ಲಕ್ಷ ರೂ., 3 ಕಿ.ವ್ಯಾ. 1 ಲಕ್ಷ 40 ಸಾವಿರ ರೂ. ಖರ್ಚಾಗಲಿದೆ.

ಮೆಸ್ಕಾಂ ಖರೀದಿ
ಉಳಿಕೆ ವಿದ್ಯುತ್‌ ಅನ್ನು ಮೆಸ್ಕಾಂ ಗ್ರಾಹಕರಿಂದ ನೇರವಾಗಿ ಪಡೆಯಲಿದೆ. ಸರಕಾರದ ಸಬ್ಸಿಡಿ ಪಡೆಯದ ಗ್ರಾಹಕರಿಗೆ ಯೂನಿಟ್‌ಗೆ 4.5 ರೂ., ಸಬ್ಸಿಡಿ ಪಡೆದವರಿಗೆ 2.97 ರೂ. ಪಾವತಿಸಿ ವಿದ್ಯುತ್‌ ಪಡೆಯಲಿದೆ.

ವಿದ್ಯುತ್‌ ಅಭಾವ ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜನತೆಗೆ ಹೊರೆಯಾಗದ ರೀತಿಯಲ್ಲಿ ಪಿಎಂ ಸೂರ್ಯ ಘರ್‌ ಮುಫ್ತ್‌ ಬಿಜ್ಲಿ ಯೋಜನೆ ರೂಪಿಸಿದೆ. ವಿದ್ಯುತ್‌ ಗ್ರಾಹಕರ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ಹೇರಿರುವ ದುಬಾರಿ ಬಿಲ್‌ ಬರೆಯಿಂದ ಕಂಗೆಡುವಂತೆ ಆಗಿದ್ದು, ಇಂತಹ ಸಂದರ್ಭ ಮೋದಿ ಸರಕಾರ ಅತ್ಯುತ್ತಮ ಜನಪರ ಯೋಜನೆ ಜಾರಿಗೊಳಿಸಿದೆ. ವಿದ್ಯುತ್‌ ಗ್ರಾಹಕರು ಈ ಒಂದು ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡಲ್ಲಿ ವಿದ್ಯುತ್‌ ಸಮಸ್ಯೆ ನೀಗಿಸುವುದರೊಂದಿಗೆ ಆದಾಯವನ್ನು ಪಡೆಯಬಹುದಾಗಿದೆ.
ವಿ. ಸುನಿಲ್‌ ಕುಮಾರ್‌
ಶಾಸಕರು, ಮಾಜಿ ಇಂಧನ ಸಚಿವರು.

ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ಒಟ್ಟು 67 ಸಾವಿರ ಗೃಹ ಬಳಕೆ ವಿದ್ಯುತ್‌ ಸಂಪರ್ಕವಿದೆ. 8,700 ವಾಣಿಜ್ಯ ಸಂಪರ್ಕವಿದೆ. ಬಹುತೇಕ ಮನೆಯವರು ಪಿಎಂ ಸೂರ್ಯ ಘರ್‌ ಯೋಜನೆ ಸದುಪಯೋಗಪಡಿಸಿಕೊಂಡಲ್ಲಿ ವಿದ್ಯುತ್‌ ಕೊರತೆ ನಿವಾರಣೆಯೊಂದಿಗೆ ಗಳಿಕೆಗೂ ಒಂದು ದಾರಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 1912ಗೆ ಸಂಪರ್ಕಿಸಬಹುದಾಗಿದೆ.































































































error: Content is protected !!
Scroll to Top