ಪಾಕಿಸ್ಥಾನ್‌ ಪರ ಘೋಷಣೆ : ಎಫ್‌ಎಸ್‌ಎಲ್‌ ವರದಿಯಲ್ಲಿ ಹೊರಬಿತ್ತು ಸತ್ಯ

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜ ಎನ್ನುವುದು ಎಫ್​ಎಸ್​ಎಲ್​ ವರದಿಯಲ್ಲಿ ಸಾಬೀತಾಗಿದೆ. ನಾಸಿರ್ ಸಾಬ್ ಜಿಂದಾಬಾದ್ ಮತ್ತು ಪಾಕಿಸ್ಥಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಎಫ್‌ಎಸ್‌ಎಲ್‌​ನಲ್ಲಿ ಪರಿಶೀಲನೆ ವೇಳೆ ಆಡಿಯೋ ಮತ್ತು ವಿಡಿಯೋವನ್ನು ಎಡಿಟ್ ಮಾಡಿ ಸೇರಿಸಲಾಗಿಲ್ಲ. ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂದು ತಿಳಿದು ಬಂದಿದೆ. ಇದರಿಂದ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದ ಕಾಂಗ್ರೆಸ್‌ ನಾಯಕರಿಗೆ ಈಗ ಸಂಕಷ್ಟ ಎದುರಾಗಿದೆ.

ಎಫ್​ಎಸ್​ಎಲ್ ವರದಿ ಅನ್ವಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆ ವೇಳೆ ಕೆಲ ಅನುಮಾನಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಈಗಾಗಲೇ ವಶಕ್ಕೆ ಪಡೆದಿದ್ದ ಅನುಮಾನಿತ ವ್ಯಕ್ತಿಗಳ ವಾಯ್ಸ್ ರವಾನೆ ಮಾಡಲಾಗಿದೆ. ಅನುಮಾನಿತರ ಪೈಕಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಎಫ್​ಎಸ್​ಎಲ್​ನಿಂದ ವಾಯ್ಸ್ ಮ್ಯಾಚ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ವಾಯ್ಸ್ ಮ್ಯಾಚ್ ಆದ ಕೂಡಲೇ ಅಧಿಕೃತವಾಗಿ ಆರೋಪಿಯನ್ನು ಬಂಧಿಸಲು ತಯಾರಿ ನಡೆದಿದೆ.

ವಿಧಾನಸೌಧ ಠಾಣೆ ಪೊಲೀಸರು ಈವರೆಗೆ 7 ಮಂದಿಯ ವಿಚಾರಣೆ ನಡೆಸಿದ್ದಾರೆ. ಮೂವರ ವಾಯ್ಸ್ ಸ್ಯಾಂಪಲ್ ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ. ವಿಚಾರಣೆಗೆ ಒಳಪಟ್ಟ ಎಲ್ಲರೂ ಪಾಕ್ ಪರ ಘೋಷಣೆ ಕೂಗಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಪೊಲೀಸರು 26 ಮಂದಿಯ ಪಟ್ಟಿ ಮಾಡಿದ್ದು, ಇನ್ನೂ 19 ಜನರ ವಿಚಾರಣೆ ನಡೆಯುತ್ತಿದೆ.

ಈ ಹಿಂದೆ ಎಫ್​ಎಸ್​ಎಲ್ ವರದಿ ಬಂದರೂ ಸರ್ಕಾರ ವರದಿಯನ್ನು ಬಹಿರಂಗ ಪಡಿಸಿರಲಿಲ್ಲ. ಹೀಗಾಗಿ ಬಿಜೆಪಿ ಕಿಡಿಕಾರಿತ್ತು. ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ರು. ಎಫ್‌ಎಸ್‌ಎಲ್‌ ವರದಿಯಲ್ಲಿ ಪಾಕ್​ ಪರ ಘೋಷಣೆ ಕೂಗಿದ್ದು ಗೊತ್ತಾಗಿದೆ. ರಾತ್ರಿ ವರದಿ ಬಂದರೂ ರಾಜ್ಯ ಸರ್ಕಾರ ಇನ್ನೂ ಬಹಿರಂಗ ಪಡಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.



















































































error: Content is protected !!
Scroll to Top