ವೈಜ್ಞಾನಿಕವಾಗಿಯೇ ವರದಿಯನ್ನು ಸಿದ್ಧಪಡಿಸಲಾಗಿದೆ – ಜಯಪ್ರಕಾಶ್ ಹೆಗ್ಡೆ
ಬೆಂಗಳೂರು: ದೊಡ್ಡಮಟ್ಟದ ಚರ್ಚೆಗೆ ಗ್ರಾಸವಾಗಿದ್ದ ಜಾತಿ ಗಣತಿ ವರದಿಯನ್ನು ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಫೆ. 29ರಂದು ಅಧಿಕೃತವಾಗಿ ಹಸ್ತಾಂತರ ಮಾಡಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ಜಯಪ್ರಕಾಶ್ ಹೆಗ್ಡೆ ಇದು ಹಿಂದುಳಿದ ವರ್ಗಗಳ ಆಯೋಗ ಸಿದ್ಧ ಮಾಡಿದ ವರದಿಯಾಗಿದೆ. ವೈಜ್ಞಾನಿಕವಾಗಿಯೇ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ವರದಿ ಕುರಿತಾದ ವಿವಾದ ಹಾಗೂ ಆಕ್ಷೇಪಗಳಿಗೆ ನಾನು ಉತ್ತರ ನೀಡುವುದಿಲ್ಲ. ಅದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರಿಂದ ಸಲ್ಲಿಕೆಯಾಗಿರುವ ಒಟ್ಟು 13 ಪ್ರತಿಗಳು ಹೊಂದಿರುವ ವರದಿಯಲ್ಲಿ ಇರುವ ಪ್ರಮುಖ ಅಂಶಗಳು ಇಲ್ಲಿವೆ.
-ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 ಸಮಗ್ರ ರಾಜ್ಯ ವರದಿ
-ಜಾತಿವಾರು ಜನಸಂಖ್ಯೆ ವಿವರ – 1 ಸಂಪುಟ
-ಜಾತಿ / ವರ್ಗಗಳ ಲಕ್ಷಣಗಳು( ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನ ಹೊರತು ಪಡಿಸಿ)
-ಜಾತಿ / ವರ್ಗಗಳ ಪ್ರಮುಖ ಲಕ್ಷಣಗಳು ( ಪರಿಶಿಷ್ಟ ಜಾತಿಗಳು)
-ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು ( ಪರಿಶಿಷ್ಟ ಪಂಗಡಗಳು)
-ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ ಅಂಶಗಳು (ಎರಡು ಸಿಡಿಗಳು)
-ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ 2015 ರ ದತ್ತಾಂಶಗಳ ಅಧ್ಯಯನ ವರದಿ 2024

2013 ರಿಂದ 2018ರವರೆಗಿನ ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದ ಅವಧಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯನ್ನು ಮಾಡಿಸಲಾಗಿತ್ತು. ಆದರೆ ಕಾರಣಂತರಗಳಿಂದ ಸರ್ಕಾರ ವರದಿ ಸ್ವೀಕರಿಸಿರಲಿಲ್ಲ. ಈ ಮಧ್ಯೆ ವರದಿ ಸೋರಿಕೆಯಾಗಿದ್ದು ಭಾರಿ ಸದ್ದು ಮಾಡಿತ್ತು. ಇದೀಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಿದ್ದಾರೆ. ಅಧಿಕಾರಕ್ಕೆ ಬಂದ್ಮೇಲೆ ಜಾತಿ ಗಣತಿ ವರದಿಯನ್ನ ಸ್ವೀಕಾರ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
154 ಕೋಟಿ ರೂ.
154 ಕೋಟಿ ರೂ. ವೆಚ್ಚದಲ್ಲಿ ಈ ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಲಾಗಿದೆ. ಕಾಂಗ್ರೆಸ್ ಸ್ವಪಕ್ಷೀಯ ನಾಯಕರು ಹಾಗೂ ಬಿಜೆಪಿ ನಾಯಕರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ವರದಿ ಸ್ವೀಕಾರ ಮಾಡಿದ್ದಾರೆ.







































