ಮಸೂದೆ ಹಿಂದೆ ಲೋಕಸಭಾ ಚುನಾವಣೆ ಚಿಂತನೆ ಅಡಗಿದೆ
ಕಾರ್ಕಳ : ಸಂವಿಧಾನದ 108ನೇ ತಿದ್ದುಪಡಿಯೊಂದಿಗೆ 2008ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಜಾರಿಗೊಳಿಸಲುದ್ದೇಶಿಸಿ ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಧಾನಿ ಮೋದಿ ಸರಕಾರ ಮತ್ತೆ ಲೋಕಸಭೆಯಲ್ಲಿ ಮಂಡಿಸಿ ಅನುಷ್ಠಾನಕ್ಕೆ ತರುತ್ತಿರುವುದು ಸ್ವಾಗತಾರ್ಹ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಮಸೂದೆ ಅನುಷ್ಠಾನದೊಂದಿಗೆ ಮುಂದಿನ ದಿನಗಳಲ್ಲಿ 543 ಸದಸ್ಯತ್ವ ಬಲದ ಲೋಕಸಭೆಯಲ್ಲಿ 181 ಮಹಿಳಾ ಸದಸ್ಯರು ಸ್ಥಾನ ಪಡೆಯಲಿದ್ದಾರೆ. ಆದಾಗ್ಯೂ ಹಿಂದುಳಿದ ವರ್ಗ ಮತ್ತು ಎಸ್ಸಿ ಎಸ್ಟಿಗಳಿಗೆ ಈ ಮೀಸಲಾತಿಯಡಿ ಒಳಮೀಸಲಾತಿ ಘೋಷಿಸದಿರು ವುದು ನಿರಾಸೆ ಉಂಟು ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಕಟನೆಯಲ್ಲಿ ತಿಳಿಸಿದೆ.
ವಿಷಾದನೀಯ
ಜನಗಣತಿ ಮತ್ತು ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯ ಹೊರತಾಗಿ ಮಸೂದೆ ಜಾರಿ ಕೇವಲ ಹೆಸರಿಗೆ ಮಾತ್ರವಷ್ಟೆ ಉಳಿದುಕೊಳ್ಳಲಿದೆ. ರಾಜ್ಯ ಸಭೆ ಮತ್ತು ವಿಧಾನ ಪರಿಷತ್ ಸದಸ್ಯತ್ವಕ್ಕೂ ಮಸೂದೆ ಅನ್ವಯವಾಗಬೇಕಾದುದು ಇಂದಿನ ಆದ್ಯತೆಯಾಗಿದೆ ಎಂದಿರುವ ಕಾಂಗ್ರೆಸ್ ಈಗಾಗಲೇ ಮಂಡನೆಯಾಗಿರುವ ಮಸೂದೆಯಲ್ಲಿ ಈ ಬಗ್ಗೆ ಸ್ಷಷ್ಟತೆ ಇಲ್ಲದಿರುವುದು ವಿಷಾದನೀಯ ಎಂದಿದೆ.
ರಾಜೀವ್ ಪ್ರಧಾನಿಯಾಗಿದ್ದಾಗ ಶೇ. 33 ಜಾರಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆಡಳಿತದ ಅವಧಿಯಲ್ಲಿ 1989ರಲ್ಲಿ ಲೋಕಸಭೆಯಲ್ಲಿ ಮಂಡಿಸಿದ್ದ ನಗರಾಡಳಿತ ಮತ್ತು ಗ್ರಾಮ ಪಂಚಾಯತ್‌ಗಳಿಗೆ ಮೂರನೆ ಒಂದು ಮಹಿಳಾ ಮೀಸಲಾತಿ ಮಸೂದೆ ಇಂದಿನ 33 ಶೇ. ಮಹಿಳಾ ಮೀಸಲಾತಿ ಮಸೂದೆಯ ಹಿಂದಿನ ಶಕ್ತಿಯಾಗಿದೆ. ಅಂದು ಈ ಮಸೂದೆ ಮಂಡನೆಯ ಸಂದರ್ಭ ರಾಜ್ಯ ಸಭೆಯಲ್ಲಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಇದೀಗ 34 ವರ್ಷಗಳ ಬಳಿಕ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ 33 ಶೇ. ಮಹಿಳಾ ಮೀಸಲಾತಿ ಮಸೂದೆಯನ್ನು ಬಿಜೆಪಿ ಆಡಳಿತದ ರಾಜ್ಯಗಳ ಅಸಂತುಷ್ಠಿಯ ನಡುವೆಯೂ ತನ್ನ ಆಡಳಿತದ ಅವಧಿಯಲ್ಲಿ ಜಾರಿಗೊಳಿಸುತ್ತಿರುವುದರ ಹಿಂದೆ 2024ರ ಲೋಕಸಭಾ ಚುನಾವಣೆಯ ಚಿಂತನೆ ಅಡಗಿದೆ. ಅದರೊಂದಿಗೆ ದೇಶವ್ಯಾಪಿ ಜನಾಕರ್ಷಣೆಗೊಳ್ಳುತ್ತಿರುವ ರಾಜ್ಯದ ಸಿದ್ಧರಾಮಯ್ಯ ಸರಕಾರದ ಶಕ್ತಿ, ಗೃಹಲಕ್ಷ್ಮಿ ಮೊದಲಾದ ಪಂಚ ಗ್ಯಾರಂಟಿ ಯೋಜನೆಗಳ ಭಯವೂ ಅಡಗಿದೆ ಎಂದು ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.