ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಪಂಚಕಜ್ಜಾಯ ಬಗ್ಗೆ ಅಂತಾರಾಷ್ಟೀಯ ಚೆಫ್ ವಿಕಾಸ್ ಖನ್ನಾ ಮಾತು

ಕಾರ್ಕಳ : ಅಂತಾರಾಷ್ಟ್ರೀಯ ಚೆಫ್ ( ವಿಶ್ವ ಮಟ್ಟದ ಬಾಣಸಿಗ ) ವಿಕಾಸ್ ಖನ್ನಾ ಯಾರಿಗೆ ಗೊತ್ತಿಲ್ಲ ಹೇಳಿ ? ಪಂಜಾಬಿನಲ್ಲಿ ಹುಟ್ಟಿದ ಖನ್ನಾ 90ರ ದಶಕದಲ್ಲಿ ಮಣಿಪಾಲಕ್ಕೆ ಬಂದು ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಪಡೆದವರು. ನಂತರ ತನ್ನ ಸ್ವಂತ ಪ್ರತಿಭೆಯಿಂದ ಜಾಗತಿಕ ಮಟ್ಟಕ್ಕೆ ಬೆಳೆದವರು. ಮಾಸ್ಟರ್ ಚೆಫ್ ಇಂಡಿಯಾ ಸ್ಪರ್ಧೆಗೆ ತೀರ್ಪುಗಾರ ಆಗಿದ್ದವರು. ತದನಂತರ ಭಾರತದ ಸ್ಟಾರ್ ಹೊಟೇಲ್‌ಗಳಾದ ತಾಜ್, ವೆಲ್ ಕಮ್ ಗ್ರೂಪ್, ಲೀಲಾ ಗ್ರೂಪ್ ಜೊತೆಗೆ ಕೆಲಸ ಮಾಡಿದವರು.

ಅನಂತರ ಮುಂದೆ ಅಮೆರಿಕಾದಲ್ಲಿ ನೆಲೆಸಿದ ವಿಕಾಸ್ ಖನ್ನಾ ಹಲವು ರಾಷ್ಟ್ರಗಳಲ್ಲಿ ಸರಣಿ ಹೊಟೇಲ್ ಆರಂಭಿಸಿದರು. ಅಡುಗೆಯ ಪುಸ್ತಕಗಳನ್ನು ಬರೆದರು. ಅಡುಗೆಯ ಬಗ್ಗೆ ವೀಡಿಯೊಗಳನ್ನು ಮಾಡಿದರು. ಸಿನೆಮಾಗಳನ್ನು ಮಾಡಿದರು. ಹೀಗೆ ವಿಕಾಸ್ ಖನ್ನಾ ಅಡುಗೆ ಕ್ಷೇತ್ರದಲ್ಲಿ ಬಹಳ ದೊಡ್ಡ ಕ್ರಾಂತಿಯನ್ನೇ ಮಾಡಿದ ಹೆಸರು.

ಪಡುತಿರುಪತಿ ಕಾರ್ಕಳ ವೆಂಕಟರಮಣ ದೇವಸ್ಥಾನದ ಸಿಹಿ ಕಜ್ಜಾಯ
ವಿಕಾಸ್ ಖನ್ನಾ ಮಣಿಪಾಲದಲ್ಲಿ ಕಲಿಯುತ್ತಿದ್ದಾಗ ತಾನು ಇಡೀ ಕರ್ನಾಟಕ ಸುತ್ತುತ್ತಿದ್ದೆ, ಬೇರೆ ಬೇರೆ ಪ್ರದೇಶಗಳ ಖಾದ್ಯ ವೈವಿದ್ಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೆ ಎಂದು ಹೇಳುತ್ತಾರೆ. ಆಗ ಹಲವು ಬಾರಿ ಭೇಟಿ ಕೊಟ್ಟ ದೇವಸ್ಥಾನ ಪಡುತಿರುಪತಿ ಎಂದು ಕೀರ್ತಿ ಪಡೆದ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನ. ಅಲ್ಲಿ ಪ್ರಸಾದವಾಗಿ ದೊರೆಯುತ್ತಿದ್ದ ಸಿಹಿ ಕಜ್ಜಾಯ (ಪಂಚ ಕಜ್ಜಾಯದ) ರುಚಿಗೆ ಮಾರು ಹೋಗಿದ್ದೆ ಎನ್ನುತ್ತಾರೆ.

ಇದೀಗ ಅಂತಾರಾಷ್ಟ್ರೀಯ ಕೀರ್ತಿ ಪಡೆದ ಅನಂತರ ಅವರು ಅದನ್ನು ಮತ್ತೆ ನೆನಪು ಮಾಡಿಕೊಂಡು ಆ ಪಂಚಕಜ್ಜಾಯವನ್ನು ಮತ್ತೆ ತಯಾರಿಸುವ ಒಂದು ಪ್ರಯತ್ನವನ್ನು ನಡೆಸಿದ್ದು ಅದನ್ನು ಒಂದು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.

ಸ್ವೀಟ್ ಪೋವಾ ಎಂಬ ಅಮೃತ ಪ್ರಸಾದ
ಅದನ್ನು ಅವರು ‘ ಸ್ವೀಟ್ ಪೋವಾ’ ಎಂದು ಕರೆಯುತ್ತಾರೆ. ಅವಲಕ್ಕಿ, ತುಪ್ಪ, ಗೇರುಬೀಜ, ಏಲಕ್ಕಿ, ಬೆಲ್ಲ, ಒಣ ದ್ರಾಕ್ಷಿ, ತೆಂಗಿನ ತುರಿ ಇವುಗಳನ್ನು ಹದವಾಗಿ ಬೆರೆಸಿ ಅವರು ಆ ಸಿಹಿ ಕಜ್ಜಾಯವನ್ನು ಮಾಡುವುದನ್ನು ವಿಡಿಯೋದಲ್ಲಿ ಪ್ರಾತ್ಯಕ್ಷಿಕೆ ಮಾಡಿದ್ದಾರೆ. ಕೊನೆಗೆ ಅದನ್ನು ತುಂಬಾ ಪ್ರೀತಿಯಿಂದ ಬಾಳೆ ಎಲೆಯಲ್ಲಿ ಮಡಚಿ ಇಡುವ ತನಕ ಅವರು ನೀಡುವ ಸರಳ ಇಂಗ್ಲಿಷ್ ವಿವರಣೆಯು ತುಂಬಾ ಆಕರ್ಷಕ ಆಗಿದೆ.

‘ನಾನು ಎಷ್ಟೇ ಚೆನ್ನಾಗಿ ಮಾಡಿದರೂ ಅದು ವೆಂಕಟರಮಣ ದೇವಸ್ಥಾನದ ಪಾವಿತ್ರ್ಯತೆಯ ಪ್ರಸಾದಕ್ಕೆ ಸಾಟಿ ಆಗುವುದಿಲ್ಲ ಎಂದು ನನಗೆ ಖಂಡಿತ ಗೊತ್ತಿದೆ ‘ ಎಂದವರು ಹೇಳುತ್ತಾರೆ. ಹಾಗೆಯೇ ವೆಂಕಟರಮಣ ದೇವಸ್ಥಾನದ ಪಂಚಕಜ್ಜಾಯ ಪ್ರಸಾದದ ರುಚಿಯನ್ನು ಹೊಗಳಲು ನಮ್ಮಲ್ಲಿ ಶಬ್ದಗಳೇ ಇಲ್ಲ.







































































error: Content is protected !!
Scroll to Top