ಅಧಿಕಾರಿಗಳ ವಿರುದ್ಧ ಪ್ರಯಾಣಿಕರ ಆಕ್ರೋಶ
ಮಂಗಳೂರು: ದುಬೈಗೆ ತೆರಳಬೇಕಿದ್ದ ವಿಮಾನ ಸಂಚಾರ ವಿಳಂಬವಾಗಿ ಪ್ರಯಾಣಿಕರು ಇಡೀ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರದಾಡಿದ ಘಟನೆ ಜು. 10ರ ತಡರಾತ್ರಿ ಸಂಭವಿಸಿದೆ. ಯಾವುದೇ ಮುನ್ಸೂಚನೆ ಇಲ್ಲದೆ ವಿಮಾನ ವಿಳಂಬವಾದ ಕಾರಣ ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಆಕ್ರೋಶಗೊಂಡು ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ರಾತ್ರಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆಯನ್ನೂ ಅಧಿಕಾರಿಗಳು ಮಾಡಿಕೊಟ್ಟಿಲ್ಲ ಎನ್ನಲಾಗಿದೆ.
ಸೋಮವಾರ ರಾತ್ರಿ 11ಕ್ಕೆ ಏರ್ ಇಂಡಿಯಾ ಎಕ್ಸೆಪ್ರೆಸ್ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು. ಆದರೆ ವಿಮಾನ ಇಂಜಿನ್ ಕೆಟ್ಟಿರುವ ನೆಪವೊಡ್ಡಿ ಹಾರಾಟ ವಿಳಂಬವಾಗಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ರಾತ್ರಿಯಿಡೀ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಉಳಿಯಬೇಕಾದ ಪರಿಸ್ಥಿತಿ ಉಂಟಾಯಿತು.




































































