ಅಜೆಕಾರು : ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಅಜೆಕಾರು, ಗ್ರಾಮ ಪಂಚಾಯತ್ ಮರ್ಣೆ, ಯುವವಾಹಿನಿ ಕಾರ್ಕಳ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂ. 21 ರಂದು ಅಜೆಕಾರಿನ ಶ್ರೀ ರಾಮ ಮಂದಿರದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಜರುಗಿತು. ಸಭಾಧ್ಯಕ್ಷತೆ ವಹಿಸಿದ್ದ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಅನುಷಾ ಶೆಟ್ಟಿ ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು.
ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷ ಅರುಣ್ ಪೂಜಾರಿ ಮಾಂಜ ಮಾತನಾಡಿ, ಆರ್ಥಿಕ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದಲ್ಲಿನ ಜನ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರಿಯಾದ ಚಿಕಿತ್ಸೆ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನೇತ್ರ ಚಿಕಿತ್ಸೆಯಂತಹ ಆರೋಗ್ಯ ಸಂಬಂಧಿತ ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸುವುದರಿಂದ ಜನರಿಗೆ ವರದಾನವಾಗಲಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡಲ್ಲಿ ಉಚಿತ ಶಿಬಿರದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭ ಮರ್ಣೆ ಗ್ರಾ. ಪಂ. ಅಧ್ಯಕ್ಷೆ ಜ್ಯೋತಿ ಪೂಜಾರಿ, ಅಜೆಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಅಧಿಕಾರಿ ಹಾಗೂ ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ. ವೃಂದ ಮತ್ತು ಡಾ. ಮೇಘನಾ ಉಪಸ್ಥಿತರಿದ್ದರು. ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು.




























































