ತುಮಕೂರು : ವಿದ್ಯುತ್ ಶಾಕ್ ಹೊಡೆದು ನಾಲ್ವರು ಆಸ್ಪತ್ರೆಗೆ ದಾಖಲಾದ ಘಟನೆ ಕೊರಟಗೆರೆ ತಾಲೂಕಿನ ಚಿಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿನ 11 ಕೆವಿ ವಿದ್ಯುತ್ ಸಾಮರ್ಥ್ಯದ ತಂತಿ ತುಂಡಾದ ಪರಿಣಾಮ ಅವಘಡ ಸಂಭವಿಸಿದೆ. ಗ್ರಾಮದ 70 ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಮನೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಕಟ್ ಆಗಿ ಮನೆ ಮೇಲೆ ಬಿದ್ದು ಶಾರ್ಟ್ಸರ್ಕ್ಯೂಟ್ನಿಂದ ಒಂದೇ ಕುಟುಂಬದ ನಾಲ್ವರಿಗೆ ಗಾಯಗಳಾಗಿವೆ. ಮನೆಯಲ್ಲಿದ್ದ ಶಾರದಮ್ಮ(55), ಮಂಜುನಾಥ್(35), ವರಲಕ್ಷ್ಮೀ(30), ದರ್ಶನ್(12)ಗೆ ಸುಟ್ಟ ಗಾಯಗಳಾಗಿದ್ದು ನಾಲ್ವರಿಗೂ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಕಡಿದು ಬಿದ್ದು ಈ ಅವಘಡ ಸಂಭವಿಸಿದೆ.
ಗ್ರಾಮದ 70 ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ. ಮನೆಗಳಲ್ಲಿ ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ವೈರ್ಗಳು, ಮೀಟರ್, ಗೃಹೋಪಯೋಗಿ ವಸ್ತುಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿವೆ. ತಹಶೀಲ್ದಾರ್ ಮುನಿಸಾಮಿ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ನಾಲ್ವರ ಆರೋಗ್ಯ ವಿಚಾರಿಸಿದ್ದಾರೆ ಹಾಗೂ ಘಟನಾ ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯುತ್ ತಂತಿ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಸುಟ್ಟು ಕರಕಲಾದ ಗೃಹಪಯೋಗಿ ವಸ್ತುಗಳಿಗೆ ಶೀಘ್ರ ಪರಿಹಾರ ನೀಡುವುದಾಗಿ ಹಾನಿಗೊಳಗಾದ ಕುಟುಂಬಗಳಿಗೆ ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ.































