ಸಚಿವನನ್ನೇ ಸೋಲಿಸಿದ ಕೈ ಶಾಸಕನ ಮೇಲೆ ಸ್ಕೆಚ್‌

ಸೋಲಿನ ಹತಾಶೆಯಿಂದ ಮಚ್ಚು ಬೀಸಲು ಯತ್ನ

ಬಳ್ಳಾರಿ : ರಾಜಕೀಯ ಗುರುವಿನ ವಿರುದ್ದ ಶಿಷ್ಯ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೆ ಕೈ ಶಾಸಕನ ಹತ್ಯೆಗೆ ಸಂಚು ರೆಡಿಯಾಗಿದೆ. ಸಚಿವ ಶ್ರೀರಾಮುಲುರನ್ನ ಸೋಲಿಸಿದ ಕೈ ಶಾಸಕ ಸಂಭ್ರಮದಲ್ಲಿದ್ದಾಗಲೇ ಆತನಿಹೆ ಸ್ಕೆಚ್‌ ರೆಡಿಯಾಗಿತ್ತು. ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಶಾಸಕ ಮೆರವಣಿಗೆಯಲ್ಲಿದ್ದಾಗಲೇ ಮಚ್ಚು ಬೀಸಲು ಬಂದವರಿಂದ ಕೈ ಶಾಸಕ ಜಸ್ಟ್ ಮಿಸ್ ಆಗಿದ್ದಾರೆ.

ಗಣಿ ನಾಡು ಬಳ್ಳಾರಿ, ಸೇಡು, ದ್ವೇಷ, ಹಣದ ಹೊಳೆಯಲ್ಲೆ ನಡೆಯುವ ರಾಜಕಾರಣ. ಬಳ್ಳಾರಿಯ ರಾಜಕಾರಣವೇ ಹಂಗೆ ಆಂಧ್ರಪ್ರದೇಶದ ರಕ್ತ ರಾಜಕಾರಣ, ರಾಯಲಸೀಮಾದ ಫ್ರಾಂಕ್ಷನಿಸಂ ನೆರಳು ಬಳ್ಳಾರಿಯ ರಾಜಕಾರಣದಲ್ಲಿದೆ. ಜಿದ್ದು, ಪೈಪೋಟಿ, ಸೇಡಿಗೆ ಸೇಡು ಅಂತಾನೇ ಕಣಕ್ಕೆ ಇಳಿಯುವ ರಣಕಲಿಗಳು ಗೆಲುವಿಗಾಗಿ ಏನಾದರೂ ಮಾಡುತ್ತಾರೆ. ಅದೇ ರೀತಿ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಈ ಭಾರಿಯ ಚುನಾವಣೆ ತೀವ್ರ ಪ್ರತಿಷ್ಠೆ ಪೈಪೋಟಿಗೆ ಕಾರಣವಾಗಿತ್ತು. ರಾಜಕೀಯ ಗುರುವಿನ ವಿರುದ್ದ ಶಿಷ್ಯ ಸ್ಪರ್ಧೆ ಮಾಡಿದ್ದು, ಸಾಕಷ್ಟು ಕುತೂಹಲದ ಹಣಾಹಣಿಗೆ ಕಾರಣವಾಗಿತ್ತು. ಬಿಜೆಪಿ ಅಭ್ಯರ್ಥಿ, ಸಚಿವ ಶ್ರೀರಾಮುಲು ವಿರುದ್ದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ ನಾಗೇಂದ್ರ ಅವರು ಭರ್ಜರಿ ಗೆಲುವು ಸಾಧಿಸಿ ಗ್ರಾಮೀಣ ಕ್ಷೇತ್ರದಿಂದ ಸತತವಾಗಿ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದ್ರೆ, ಗೆಲುವಿನ ನಂತರ ಸಂಭ್ರಮದಲ್ಲಿದ್ದಾಗಲೇ ಶಾಸಕನಿಗೆ ಸ್ಕೇಚ್ ಹಾಕಿದ್ರಾ? ಹೌದು ಬೈಕ್​ನಲ್ಲಿ ಮಚ್ಚಿನೊಂದಿಗೆ ಆಗಮಿಸಿದ ಅವರಿಬ್ಬರಿಂದ ಕಾಂಗ್ರೆಸ್ ಶಾಸಕ ನಾಗೇಂದ್ರ ಜಸ್ಟ್ ಮಿಸ್ ಆಗಿದ್ದಾರೆ.

ಶಾಸಕ ನಾಗೇಂದ್ರಗೆ ಮಚ್ಚು ತೋರಿಸಿ, ಜೀವ ಬೆದರಿಕೆಯೊಡ್ಡುವ ಮುನ್ನ ನಡೆದಿದ್ದು ಮಾತ್ರ ಸೇಡಿನ ರಾಜಕಾರಣ. ಹೌದು, ಬಳ್ಳಾರಿ ಗ್ರಾಮೀಣ ಕ್ಷೇತ್ರ ಸಚಿವ ಶ್ರೀರಾಮುಲು ಸ್ವಕ್ಷೇತ್ರ. ಹಿಂದೆ ನಾಲ್ಕು ಭಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಶ್ರೀರಾಮುಲು ಗೆಲುವು ಸಾಧಿಸಿದ್ದರು. ಆದ್ರೆ, ಕಳೆದಬಾರಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ದಿಸಿದ್ದ ಶ್ರೀರಾಮುಲು ಈ ಬಾರಿ ಮತ್ತೆ ಗ್ರಾಮೀಣ ಕ್ಷೇತ್ರ ಆಯ್ಕೆ ಮಾಡಿಕೊಂಡು ಕಾಂಗ್ರೆಸ್​ ಶಾಸಕ ನಾಗೇಂದ್ರ ವಿರುದ್ದ ತೊಡೆತಟ್ಟಿಯೇ ಕಣಕ್ಕೆ ಇಳಿದಿದ್ರು. ಚುನಾವಣೆ ಪ್ರಚಾರದ ವೇಳೆ ಸಚಿವ ಶ್ರೀರಾಮುಲು, ಶಾಸಕ ನಾಗೇಂದ್ರ ಪರಸ್ಪರ ಸವಾಲು, ಪ್ರತಿ ಸವಾಲು ಹಾಕುತ್ತಾನೇ ಪ್ರಚಾರ ಮಾಡಿದ್ದರು.

ಮಚ್ಚಿನಿಂದ ಅಟ್ಯಾಕ್​
ಬಳ್ಳಾರಿಯ ದೇವಿನಗರದ ವಿಷ್ಣು ವೆಂಕಟೇಶ ಮತ್ತು ಬಸನವಕುಂಟೆ ಪ್ರದೇಶದ ರಮೇಶ ಮೊನ್ನೆ ಎಂಬುವವರು ಶಾಸಕ ನಾಗೇಂದ್ರ ಮೇಲೆ ಮಚ್ಚಿನಿಂದ ಅಟ್ಯಾಕ್ ಮಾಡಲು ಯತ್ನ ಮಾಡಿದ್ದಾರೆ. ಗೆಲುವಿನ ನಂತರ ವಿಜಯೋತ್ಸವದೊಂದಿಗೆ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬರತ್ತಿದ್ದ ಶಾಸಕ ನಾಗೇಂದ್ರ ವಿರುದ್ದ ಬೈಕ್​ನಲ್ಲಿ ಆಗಮಿಸಿದ ಇವರಿಬ್ಬರು ಮಚ್ಚು ತೋರಿಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಸೋಲಿನ ಹತಾಶೆಯಿಂದ ಮದ್ಯಾಹ್ನದಿಂದಲೇ ಎಣ್ಣೆ ಹಾಕಿದ್ದ ಇವರಿಬ್ಬರು ಶಾಸಕ ನಾಗೇಂದ್ರಗೆ ಸ್ಕೇಚ್ ಹಾಕಿ ಬೆದರಿಕೆಯೊಡ್ಡಿದ್ದರು.

ಜೀವ ಬೆದರಿಕೆ ಹಾಕಿದವರು ಕಂಬಿಪಾಲು
ಬಳ್ಳಾರಿ ನಗರ ಶಾಸಕರಾಗಿದ್ದ ಜಿ ಸೋಮಶೇಖರೆಡ್ಡಿ ಬೆಂಬಲಿಗನಾದ ರಮೇಶ ಹಾಗೂ ಮಾಜಿ ಶಾಸಕ ಸುರೇಶ ಬಾಬು ಬೆಂಬಲಿಗನಾದ ವಿಷ್ಣು ವೆಂಕಟೇಶ ಇಬ್ಬರು ಬಿಜೆಪಿಯ ಸೋಲಿನಿಂದ ಹತಾಶರಾಗಿ ಶಾಸಕ ನಾಗೇಂದ್ರಗೆ ಬೆದರಿಕೆಯೊಡ್ಡಿದ್ದಾರೆ. ಭರ್ಜರಿ ಗೆಲುವಿನಲ್ಲಿದ್ದ ಕಾಂಗ್ರೆಸ್​ ಶಾಸಕ ನಾಗೇಂದ್ರ ಮೆರವಣಿಗೆಯಲ್ಲಿ ಬರುತ್ತಿದ್ದಂತೆ ಬಳ್ಳಾರಿಯ ಎಸ್‌ಪಿ ಸರ್ಕಲ್ ಬಳಿಗೆ ಬೈಕ್​ನಲ್ಲಿ ಬಂದ ವಿಷ್ಣು ವೆಂಕಟೇಶ, ರಮೇಶ ಇಬ್ಬರು ಶಾಸಕ ನಾಗೇಂದ್ರ ಬಳಿ ಮಾತನಾಡುವ ನೆಪದಲ್ಲಿ ಮಚ್ಚಿನೊಂದಿಗೆ ಎದುರಾಗಿದ್ದಾರೆ. ಈ ವೇಳೆ ಇಬ್ಬರ ಬಳಿ ಮಾರಾಕಾಸ್ತ್ರಗಳು ಕಾಣುತ್ತಿದ್ದಂತೆ ಶಾಸಕ ನಾಗೇಂದ್ರ ಜೊತೆಗಿದ್ದ ಬೌನ್ಸ್​ರ್ಸ್​ಗಳು ಇಬ್ಬರನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಒದೆ ನೀಡಿದ್ದಾರೆ.

ಆಗ ಮಧ್ಯ ಪ್ರವೇಶಿಸಿದ ಶಾಸಕ ನಾಗೇಂದ್ರ ಮಚ್ಚು ತಗೆದುಕೊಂಡು ಬಂದವರನ್ನ ಹಿಡಿದು ವಿಚಾರಣೆ ನಡೆಸಿ, ಬೆಂಬಲಿಗರು ಹಲ್ಲೆ ಮಾಡದಂತೆ ತಿಳಿ ಹೇಳಿ ಬಿಡಿಸಿ ಕಳುಹಿಸಿದ್ದಾರೆ. ಆದ್ರೆ, ನಿಷೇದಾಜ್ಞೆ ದಿನದಂದು ಮಾರಾಕಾಸ್ತ್ರಗಳೊಂದಿಗೆ ಶಾಸಕ ನಾಗೇಂದ್ರಗೆ ಜೀವಬೆದರಿಕೆಯೊಡ್ಡಿದ ಹಿನ್ನಲೆಯಲ್ಲಿ ಇಬ್ಬರನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಇಬ್ಬರು ಸೋಲಿನ ಹತಾಶೆಯಿಂದ ಬೆದರಿಕೆಯೊಡ್ಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಶಾಸಕ ನಾಗೇಂದ್ರಗೆ ಜೀವ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ದ ಐಪಿಸಿ 504 ಮತ್ತು 506 ಸೆಕ್ಷನ್ ಅಡಿಯಲ್ಲಿ ಜೀವ ಬೆದರಿಕೆ ಪ್ರಕರಣವನ್ನ ದಾಖಲಿಸಿ ಆರೋಪಿಗಳನ್ನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಬಿಗಿ ಭದ್ರತೆ
ಜಿಲ್ಲೆಯ ಐವರು ನೂತನ ಶಾಸಕರಿಗೆ ಪೊಲೀಸ್ ಇಲಾಖೆ ಮತಷ್ಟು ಬಿಗಿ ಭದ್ರತೆ ನೀಡಿದೆ. ಎಸ್ಕಾರ್ಟ್​ನೊಂದಿಗೆ ಗನ್ ಮ್ಯಾನ್ ನೀಡಲು ನಿರ್ಧರಿಸಿದೆ. ಶಾಸಕರಿಗೆ ಬೆದರಿಕೆ ಕುರಿತು ಮನವಿ ಮೇರೆಗೆ ಇನ್ನಷ್ಟು ಭದ್ರತೆ ಕಲ್ಪಿಸಲು ಪೊಲೀಸ್​ ಇಲಾಖೆ ಮುಂದಾಗಿದೆ. ಬಳ್ಳಾರಿ ರಾಜಕಾರಣ ಹಗೆತನ. ದ್ವೇಷ. ಹಣ ಬಲದ ರಾಜಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಕಾಂಗ್ರೆಸ್​ ಶಾಸಕ ನಾಗೇಂದ್ರ ಗೆಲುವು ಇದೀಗ ವಿರೋಧಿಗಳಿಗೆ ಸಹಿಸಲಾಗಿಲ್ಲ. ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಬಳ್ಳಾರಿಯಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ ಅನ್ನೋದಕ್ಕೆ ಈ ಘಟನೆ ಇದೀಗ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸುತ್ತಾ. ಆಂಧ್ರದ ರಕ್ತ ರಾಜಕಾರಣ ಬಳ್ಳಾರಿಯಲ್ಲೂ ಮರುಕಳಿಸದಂತೆ ಸರ್ಕಾರ ಮತ್ತು ಪೊಲೀಸ್​ ಇಲಾಖೆ ಇದಕ್ಕೆಲ್ಲಾ ಕಡಿವಾಣ ಹಾಕಲೇಬೇಕಾಗಿದೆ.































































































error: Content is protected !!
Scroll to Top