ಕಾರ್ಕಳ : ಕರಿಕಲ್ಲ ಶಿಲ್ಪ ಶಿಲ್ಪಿಗಳ ತಾಯಿನಾಡು ಕಾರ್ಕಳ. ಕಲ್ಕುಡ – ಕಲ್ಲುರ್ಟೀಯ ನೆಲೆಬೀಡು ಕಾರಣಿಕದ ನಾಡಿಗೆ, ಪಡು ತಿರುಪತಿ ಖ್ಯಾತಿಯ ಶ್ರೀ ಶ್ರೀನಿವಾಸ ವೆಂಕಟರಮಣ ದೇವರ ಪಾವನ ಸನ್ನಿಧಿಗೆ, ಐತಿಹಾಸಿಕ ಅನಂತಶಯನ ದೇವಸ್ಥಾನ, ಕಾರಣಿಕದ ಮಾರಿಯಮ್ಮ ದೇಗುಲ, ತ್ಯಾಗಮಯಿ ಭಗವಾನ್ ಶ್ರೀ ಬಾಹುಬಲಿ ಬೆಟ್ಟದ ತಪ್ಪಲಿಗೆ ಆಗಮಿಸುತ್ತಿರುವ ನಾಥಪಂಥದ ಕ್ಷಾತ್ರ ತೇಜಸ್ಸಿನ, ಗೋರಖ್ ಪುರದ ಹಿಂದೂ ಹೃದಯ ಸಾಮ್ರಾಟನ ಆಗಮನ ಕಾರ್ಕಳ ಜನತೆಯಲ್ಲಿ ಹೊಸ ಸಂಚಲನ ಮೂಡಿಸಿದೆ.
ರಾಷ್ಟ್ರ ವಿರೋಧಿ ಭಯೋತ್ಪಾದಕರ ಎದೆಯಲ್ಲಿ ನಡುಕ ಹುಟ್ಟಿಸಿದ ಬುಲ್ಡೋಜರ್ ಬಾಬಾ ಎಂದೇ ಖ್ಯಾತಿಯ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರನ್ನು ಹತ್ತಿರದಿಂದ ನೋಡಿ ಕಣ್ತುಂಬಿಸಿಕೊಳ್ಳಲು ಮೇ 6ರಂದು ಶನಿವಾರ ಅಪರಾಹ್ನ 1:00 ಗಂಟೆಗೆ ಕಾರ್ಕಳ ನಗರದ ಅನಂತಶಯನ ವೃತ್ತದಿಂದ ಮುಖ್ಯರಸ್ತೆಯಲ್ಲಿ ಸಾಗಿ ಬರುವ ಬಿಜೆಪಿಯ ಬೃಹತ್ ರೋಡ್ ಶೋ, ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಗಾಂಧಿ ಮೈದಾನದವರೆಗೆ ಸಾಗಿ ಬರಲಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ 209 ಬೂತುಗಳಿಂದಲೂ ಬಿಜೆಪಿ ಕಾರ್ಯಕರ್ತರು, ಹಿತೈಷಿಗಳು ಮತ್ತು ಮತದಾರ ಬಂಧುಗಳು 25,000 ಕ್ಕಿಂತಲೂ ಹೆಚ್ಚಿನ ಸಂಖ್ಯೆಯಿಂದ ಯೋಗಿ ಆದಿತ್ಯನಾಥ ಅವರ ಬೃಹತ್ ರೋಡ್ ಶೋಗೆ ಹೆಜ್ಜೆ ಜೋಡಿಸಲಿರುವರೆಂದು ಕಾರ್ಕಳ ಬಿಜೆಪಿ ವಕ್ತಾರ ಸಾಣೂರು ನರಸಿಂಹ ಕಾಮತ್ ರವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.






































