ಕಾರ್ಕಳದ ಕೀರ್ತಿ ಮತ್ತಷ್ಟು ಬೆಳಗಿದ ಸುನಿಲ್ ಕಾರ್ಯವನ್ನು ಜನತೆ ಎಂದಿಗೂ ಮರೆಯಲಾರರು
ಕಾರ್ಕಳ : ಕಾರ್ಕಳ ಕಾಂಗ್ರೆಸ್ ಸಮಾವೇಶದಲ್ಲಿ ಪವರ್ ಟಿವಿಯ ಎಂಡಿ ರಾಕೇಶ್ ಶೆಟ್ಟಿ ಸಚಿವ ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯವೆಂದು ಹಿಂದು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರತ್ನಾಕರ್ ಅಮೀನ್ ತಿಳಿಸಿದ್ದಾರೆ.
ಸ್ವರ್ಣ ಕಾರ್ಕಳ – ಸ್ವಚ್ಛ ಕಾರ್ಕಳದ ಪರಿಕಲ್ಪನೆಯೊಂದಿಗೆ ಕಾರ್ಕಳ ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿರುವ ಸುನಿಲ್ ಕುಮಾರ್ ಕೊರೋನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಬಗೆ ಎಂದೆಂದಿಗೂ ಸ್ಮರಣೀಯ. ತನ್ನ ಪ್ರಾಣಾಪಾಯವನ್ನು ಲೆಕ್ಕಿಸದೇ ಜನತೆಯೊಂದಿಗೆ ಬೆರೆತು ಧೈರ್ಯ ತುಂಬಿದ್ದ ಸುನಿಲ್ ಕುಮಾರ್ ಕಾರ್ಕಳ ಉತ್ಸವದ ಮೂಲಕ ಕೊರೊನಾ ಕರಿಛಾಯೆ ಹೋಗಲಾಡಿಸಿ ಜನತೆಯಲ್ಲಿ ಹೊಸ ಚೈತನ್ಯ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಕಾರ್ಕಳದ ಹೆಸರು ರಾಜ್ಯ ದೇಶದಾದ್ಯಂತ ಪಸರಿಸಿದರು.
ತುಳುನಾಡ ಸೃಷ್ಟಿಕರ್ತ ಪರಶುರಾಮನ ಹೆಸರಲ್ಲಿ ಥೀಮ್ ಪಾರ್ಕ್ ನಿರ್ಮಾಣದೊಂದಿಗೆ ಕಾರ್ಕಳವನ್ನು ಮತ್ತಷ್ಟು ಬೆಳಗಿದರು. ಪ್ರವಾಸಿ ತಾಣವಾಗಿ ಬೆಳೆಸಿದರು. ಆರೋಗ್ಯ, ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ, ಕೈಗಾರಿಕೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕಾರ್ಕಳವನ್ನು ಅಭಿವೃದ್ಧಿ ಪಡಿಸುವ ಮೂಲಕ ಮಾದರಿ ತಾಲೂಕನ್ನಾಗಿ ಪರಿವರ್ತಿಸುವಲ್ಲಿ ಸುನಿಲ್ ಕುಮಾರ್ ಅವರ ಕಾರ್ಯತತ್ಪರತೆ ಶ್ಲಾಘನೀಯ. ಅವರ ಕೆಲಸ ಕಾರ್ಯಗಳನ್ನು ಕಾರ್ಕಳದ ಜನತೆ ಎಂದಿಗೂ ಮರೆಯಲಾರರು. ಕಾರ್ಕಳದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಏರಿಸಿದ ಸುನಿಲ್ ಕುಮಾರ್ ಬಗ್ಗೆ ರಾಕೇಶ್ ಶೆಟ್ಟಿ ಸುಳ್ಳು ಆರೋಪ, ಬಣ್ಣ ಬಣ್ಣದ ಮಾತುಗಳು ಮತ್ತು ಅವರ ವಿರುದ್ಧ ಮಾಡಿರುವ ವೈಯಕ್ತಿಕ ನಿಂದನೆ ಖಂಡನೀಯ ಎಂದು ರತ್ನಾಕರ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಜರಂಗದಳ ನಿಷೇಧ ಹಿಂದು ವಿರೋಧಿ ನೀತಿ
ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧದ ಬಗ್ಗೆ ಉಲ್ಲೇಖಿಸಿರುತ್ತಾರೆ. ಇದೊಂದು ಹಿಂದು ವಿರೋಧಿ ನೀತಿಯಾಗಿದ್ದು, ಕಾಂಗ್ರೆಸ್ ನಾಯಕರು ಹಿಂದು ಸಮಾಜದ ಜನತೆಯ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಬಜರಂಗ ದಳವು ಹಿಂದು ಧರ್ಮದ ಹಿತರಕ್ಷಣೆಗಾಗಿ ಅಸ್ತಿತ್ವದಲ್ಲಿದ್ದು ಧರ್ಮ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತ ಸಮಾಜದಲ್ಲಿ ಸುಸ್ಥಿರತೆಯನ್ನು ಕಾಪಾಡುತ್ತಿದೆ. ಆದರೆ, ಇನ್ನೊಂದು ಧರ್ಮದ ಓಲೈಕೆಗಾಗಿ ಧರ್ಮ ರಕ್ಷಣೆಯಲ್ಲಿ ನಿರತವಾಗಿರುವ ಬಜರಂಗದಳವನ್ನು ನಿಷೇಧಿಸಲು ಮುಂದಾಗಿರುವುದು ಸರಿಯಲ್ಲ. ಇದನ್ನು ತೀವ್ರವಾಗಿ ವಿರೋಧಿಸುತ್ತೇನೆ ಎಂದು ರತ್ನಾಕರ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




































