ಕೆಲಸಗಾರ ಶಾಸಕ ಸುನಿಲ್ ಬೇಕೆ ಹೊರತು ಜಾತಿವಾದಿ ಶಾಸಕನಲ್ಲ – ವಿಕ್ರಮ್ ಹೆಗ್ಡೆ
ಕಾರ್ಕಳ : ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಅವರು ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಕಷ್ಟೇ ಒತ್ತು ನೀಡದೆ ಜನರ ನಾಡಿ ಮಿಡಿತ ಅರಿತು ಜನಸಾಮಾನ್ಯರ ಜೊತೆಗೆ ನಿಂತವರು. ಕಾರ್ಕಳ ಕ್ಷೇತ್ರಕ್ಕೆ ಇಂತಹ ಕೆಲಸಗಾರ ಶಾಸಕ ಬೇಕೆ ಹೊರತು ಜಾತಿವಾದಿ ಶಾಸಕ ಬೇಡ ಎಂದು ತಾ.ಪಂ. ಮಾಜಿ ಅಧ್ಯಕ್ಷ ವಿಕ್ರಮ ಹೆಗ್ಡೆ ಹೇಳಿದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರದ ನೀರೆ- ಬೈಲೂರು ಭಾಗದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಕಳ ಕ್ಷೇತ್ರವನ್ನು ಕಳೆದ 5 ವರ್ಷದ ಅವಧಿಯಲ್ಲಿ ಅವರು ಪ್ರಗತಿಯ ಉತ್ತುಂಗ ಶಿಖರಕ್ಕೆ ಏರಿಸಿದ್ದಾರೆ. ರಸ್ತೆ, ಕುಡಿಯುವ ನೀರು, ವಿದ್ಯುತ್, ಅಂತರ್ಜಲದಂತಹ ಅಭಿವೃದ್ಧಿಗೆ ಒತ್ತು ನೀಡಿದಷ್ಟೇ ಅಲ್ಲ. ಪ್ರತಿ ಸಾಮಾನ್ಯನ ಸುಖ-ಕಷ್ಟಗಳಲ್ಲಿ ಭಾಗಿಯಾಗಿದ್ದಾರೆ. 5 ವರ್ಷಗಳಲ್ಲಿ ನಿರಂತರವಾಗಿ ಕೆಲಸ ಮಾಡಿದ್ದಾರೆ. ಎರಡೆರಡು ಖಾತೆಯ ಜವಾಬ್ದಾರಿ ಇದ್ದರೂ ಕ್ಷೇತ್ರದ ಜನರ ಸಮಸ್ಯೆಗೆ ಸಮಯ ಮೀಸಲಿಟ್ಟ ಇಂತಹ ಶಾಸಕರೇ ನಮಗೆ ಮುಂದೆಯೂ ಶಾಸಕನಾಗಿ ಬರಬೇಕೆಂದು ವಿಕ್ರಮ್ ಹೆಗ್ಡೆ ಹೇಳಿದರು.
ಜಾತಿ ಧರ್ಮ ನೋಡದೇ ಕಾರ್ಯನಿರ್ವಹಿಸಿದವರು
ಜಾತಿ, ಮತ ಎನ್ನುವುದೆಲ್ಲ ಚುನಾವಣೆ ಸಂದರ್ಭ ಮಾತ್ರ ಬಳಕೆಯಾಗುತ್ತದೆ. ಆದರೆ ಸುನಿಲ ಅವರು ಜಾತಿ-ಧರ್ಮದ ಆಧಾರದಲ್ಲಿ ಎಂದೂ ಜನರನ್ನು ಕಂಡವರಲ್ಲ. ಕೊರೊನಾ ಸಂದರ್ಭ, ಕ್ವಾರಂಟೈನ್ ವ್ಯವಸ್ಥೆ ಆಸ್ಪತ್ರೆಗಳಲ್ಲಿ ಸಕಲ ವ್ಯವಸ್ಥೆ ಕಲ್ಪಿಸಿ ಎಲ್ಲ ಸಮುದಾಯದ ರಕ್ಷಣೆ ನಿಂತದ್ದು ಬಿಜೆಪಿ ಪಕ್ಷ ಮತ್ತು ಇಲ್ಲಿನ ಶಾಸಕರಾಗಿರುವ ಸುನಿಲ್ ಕುಮಾರ್. ಎಂದ ಅವರು ಕಾರ್ಕಳದಲ್ಲಿ 5 ವರುಷವೂ ಗಲಾಟೆ, ಗದ್ದಲಗಳಿಲ್ಲದೆ ಶಾಂತಿ ನೆಲೆಸಿರುವುದೆ ಅದಕ್ಕೆ ಸಾಕ್ಷಿ ಎಂದರು.

ಎಲ್ಲ ಸಮುದಾಯಕ್ಕೂ ಭವನ ನಿರ್ಮಾಣ
ಎಲ್ಲ ಜಾತಿ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದ ಶಾಸಕರಿದ್ದರೆ ಅದು ಸುನಿಲ್ ಕುಮಾರ್. ಹಾಗಾಗಿ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುವ, ಎಲ್ಲ ಜಾತಿಯನ್ನು ಪ್ರೀತಿಸುವ ಶಾಸಕ ಸುನಿಲರನ್ನೆ ಮತ್ತೆ ಗೆಲ್ಲಿಸೋಣ. ಜಾತಿವಾದಿಗಳನ್ನು ದೂರವಿಡೋಣ ಎಂದರು.
ಜಿ.ಪಂ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಮಾತನಾಡಿ, ಬಿಜೆಪಿ ಒಂದು ಜಾತಿಗೆ ಮೀಸಲಿಟ್ಟ ಪಕ್ಷ ಅಲ್ಲ. ಎಲ್ಲರನ್ನು ಸಮಾನವಾಗಿ ಕಾಣುವ ಪಕ್ಷ. ಪಕ್ಷ ಸಿದ್ಧಾಂತದಂತೆ ನಡೆಯುವ ಸುನಿಲ್ ಕುಮಾರ್ ಅವರನ್ನು ಮತ್ತೊಮ್ನೆ ಶಾಸಕರಾಗಿ ಆರಿಸುವುದು ನಮ್ಮ ಕರ್ತವ್ಯ ಎಂದರು. ಪ್ರಮುಖರಾದ ರವೀಂದ್ರ ನಾಯಕ್, ಮಾಲಿನಿ ಶೆಟ್ಟಿ, ಜಗದೀಶ ಪೂಜಾರಿ, ಸಂತೋಷ್ ವಾಗ್ಲೆ, ಪ್ರಶಾಂತ್ ಶೆಟ್ಟಿ ಸಹಿತ ಹಲವು ಮಂದಿ ಗಣ್ಯರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.


































