ಪ್ರಮೋದ್ ಮುತಾಲಿಕ್ ಪರ ಚುನಾವಣಾ ಪ್ರಚಾರ ಸಭೆ
ಕಾರ್ಕಳ: ಕಾರ್ಕಳ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿರುವ ಶ್ರೀ ರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಪರವಾಗಿ ಪ್ರಚಾರ ಮಾಡಲು ಇಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಆಗಮಿಸುತ್ತಿದ್ದಾರೆ.
ಸಂಜೆ 5 ಗಂಟೆಗೆ ಬೈಲೂರು ಬಸ್ ನಿಲ್ದಾಣದ ಬಳಿ ಪ್ರಜಾ ವಿಜಯ ಹೆಸರಿನಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆ ನಡೆಯಲಿದ್ದು, ಇದರಲ್ಲಿ ಸಾತ್ಯಕಿ ಸಾವರ್ಕರ್ ಭಾಗವಹಿಸಲಿದ್ದಾರೆ. ಪ್ರಮೋದ್ ಮುತಾಲಿಕ್ ಸೇರಿ ಹಲವು ನಾಯಕರು ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಯಾರು ಸಾತ್ಯಕಿ ಸಾವರ್ಕರ್?

ವೀರ ಸಾವರ್ಕರ್ ಅವರ ಸಹೋದರ ನಾರಾಯಣ ದಾಮೋದರ ಸಾವರ್ಕರ್ ಅವರ ಪುತ್ರ ಅಶೋಕ್ ಸಾವರ್ಕರ್ ಅವರ ಮಗ ಸಾತ್ಯಕಿ ಸಾವರ್ಕರ್. ಅಶೋಕ್ ಸಾವರ್ಕರ್ 2003ರಲ್ಲಿ ತೀರಿಕೊಂಡಿದ್ದಾರೆ. ಅವರ ಪತ್ನಿ ಅಂದರೆ ಸಾತ್ಯಕಿಯ ತಾಯಿ ಹಿಮಾನಿ ಸಾವರ್ಕರ್, ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ್ ಗೋಡ್ಸೆಯ ಪುತ್ರಿ. ಹಿಮಾನಿ ಸಾವರ್ಕರ್ ಅವರೂ 2015ರಲ್ಲಿ ತೀರಿಕೊಂಡಿದ್ದಾರೆ. ಹಿಮಾನಿ ಅಭಿನವ ಭಾರತ ಸಂಘಟನೆಯ ಅಧ್ಯಕ್ಷೆಯಾಗಿದ್ದರು. 2008ರಲ್ಲಿ ಮಾಲೇಗಾಂವ್‌ನಲ್ಲಿ ಸಂಭವಿಸಿದ ಬಾಂಬ್‌ಸ್ಫೋಟದಲ್ಲಿ ಈ ಸಂಘಟನೆಯ ಕೈವಾಡ ಶಂಕಿಸಲಾಗಿತ್ತು. ಐಟಿ ಇಂಜಿನಿಯರ್ ಆಗಿರುವ ಸಾತ್ಯಕಿ ಸಾವರ್ಕರ್ ಪುಣೆಯಲ್ಲಿ ಉದ್ಯೋಗದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಅವರು ಈಗಾಗಲೇ ಹಿಂದು ಹೋರಾಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಲಂಡನ್‌ನಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದಲ್ಲಿ ವೀರ ಸಾವರ್ಕರ್ ಅವರನ್ನು ಅವಾಮನಿಸಿದ್ದನ್ನು ಪ್ರತಿಭಟಿಸಿ ರಾಹುಲ್ ವಿರುದ್ಧ ಇತ್ತೀಚೆಗೆ ಮಾನನಷ್ಟ ಮೊಕದ್ದಮೆ ಹೂಡಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ.





















