ಧಾರ್ಮಿಕ ಲೋಕ ಬೆಳಗಿದ ಸೂರ್ಯ ಅಸ್ತಂಗತ

ಚಾರುಕೀರ್ತಿ ಭಟ್ಟಾರಕ ಶ್ರೀಗಳಿಗೆ ನುಡಿನಮನ

ಜಗತ್ತನ್ನೇ ಬೆಳಗುತ್ತಿರುವ ಸೂರ್ಯ ನಮ್ಮಂತಹ ಅಸಂಖ್ಯಾತ ಭಾವುಕ ಮನಸ್ಸಿಗೆ ಕತ್ತಲೆ ತುಂಬಿಬಿಟ್ಟ. ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಪರಮ ಪೂಜ್ಯ ಭಟ್ಟಾರಕರು ನಮ್ಮನ್ನು ಅಗಲಿದ್ದಾರೆ ಎನ್ನುವ ಸುದ್ದಿಯನ್ನು ಬುದ್ಧಿ ಸ್ವೀಕರಿಸಿದರೂ ಮನಸ್ಸು ನಿರಾಕರಿಸುತ್ತಿದೆ.
ಶ್ರವಣ ಬೆಳಗೊಳದ ಬಂಡೆ ಬಂಡೆಯೂ ಇಂದು ಸ್ವಾಮೀಜಿಯ ಅಗಲಿಕೆಯ ನೋವನ್ನು ಅನುಭವಿಸುತ್ತಿದೆ ಎಂದರೆ ಅತಿಶಯೋಕ್ತಿ ಖಂಡಿತ ಅಲ್ಲ. ಏಕೆಂದರೆ ಲೋಕ ವಿಖ್ಯಾತ ಭಗವಾನ್ ಬಾಹುಬಲಿಯ ಕ್ಷೇತ್ರವನ್ನು ಇಷ್ಟು ಸಮರ್ಪಕವಾಗಿ, ಸರ್ವಜನ ಭಕ್ತಿಯಿಂದ ನಡೆದುಕೊಳ್ಳುವ ಶ್ರೀ ಮಠದ ಸ್ವಾಮೀಜಿ ಆಗುವುದು ಸುಲಭದ ಮಾತೂ ಅಲ್ಲ. ಪೂಜ್ಯ ಚಾರುಕೀರ್ತಿ ಭಟ್ಟಾರಕರನ್ನು ಧರ್ಮಾತೀತವಾಗಿ ಜನ ಪ್ರೀತಿಸುತ್ತಿದ್ದರು, ಭಕ್ತಿ ತೋರಿಸುತ್ತಿದ್ದರು. “ಇವರು ನಮ್ಮ ಸ್ವಾಮೀಜಿಗಳು” ಎಂದು ಅಭಿಮಾನ ಪೂರ್ವಕವಾಗಿ ಗೌರವಿಸುತ್ತಿದ್ದರು.
ಜಗತ್ತಿನ ಮೂಲೆ ಮೂಲೆಗಳಲ್ಲಿ ಅಸಂಖ್ಯಾತ ಭಕ್ತರ ಗೌರವಕ್ಕೆ ಪಾತ್ರರಾಗಿದ್ದ ಸ್ವಾಮೀಜಿಗಳು ಬರಿಯ ಒಬ್ಬ ಮಠಾಧಿಪತಿಗಳಾಗಿರಲಿಲ್ಲ, ಅವರು ಬಹುಶ್ರುತ, ಬಹುಭಾಷಾ ವಿದ್ವಾಂಸರಾಗಿದ್ದವರು. ಇವತ್ತು “ಧವಲಾ, ಜಯಧವಲಾ, ಮಹಾಧವಲಾ” ಕನ್ನಡಿಗರ ಕೈಯ್ಯಲ್ಲಿ ಬರಲು ಹಲವಾರು ವರ್ಷಗಳ ಕಾಲ ತಪಸ್ಸಿನಂತೆ ದುಡಿದವರು. ನಾಡಿನ ಮೂಲೆ ಮೂಲೆಯಲ್ಲಿ ಇರುವ ವಿದ್ವಾಂಸರ ಸಹಾಯದಿಂದ ಅಂತಹ ಮಹತ್ತರವೂ, ಬೃಹತ್ತರವೂ ಆಗಿದ್ದ ‘ಧವಲಾ’ ಕನ್ನಡಿಗರ ಪುಣ್ಯದಿಂದ ಇಂದು ನಮ್ಮ ಮನೆ ಮನೆಗಳಲ್ಲಿ ಇದೆ. ತಮ್ಮ ಬಾಳಿನ ಉದ್ದಕ್ಕೂ ಅವರು ಶ್ರಮಣ ಪರಂಪರೆಯ ಶ್ರೇಷ್ಠ ಭಟ್ಟಾರಕರಾಗಿ ಜೀವಿಸಿದ್ದವರು. ಜಗತ್ತೇ ಆಶ್ಚರ್ಯ ಪಡುವ ಹಾಗೆ ನಾಲ್ಕು ಮಸ್ತಕಾಭಿಷೇಕವನ್ನು ಯಾವ ಲೋಪವೂ ಬರದಂತೆ ಯಶಸ್ವಿಯಾಗಿ ಮುನ್ನಡೆಸಿದವರು. ತನ್ನ ಅಸ್ತಿತ್ವವನ್ನು ಕಳೆದುಕೊಂಡು ಬಿಡಬಹುದು ಎಂಬ ಅಪಾಯದ ಅಂಚಿನಲ್ಲಿದ್ದ ಪ್ರಾಕೃತ ಭಾಷೆಯನ್ನು ಉಳಿಸಲಿಕ್ಕಾಗಿ ಒಂದು ವಿಶ್ವವಿದ್ಯಾಲಯ ಕಟ್ಟಿ ಬೆಳೆಸಿದರು. ಅವರು ಮಠಾಧಿಪತಿಗಳಾಗಿದ್ದರೂ ವಸ್ತ್ರ ತೊಟ್ಟ ದಿಗಂಬರ ಯತಿಯ ಹಾಗೆ ಬಾಳಿದವರು.
ನಾನು ಪೂಜ್ಯರನ್ನು ಕ್ಷುಲ್ಲಕ ದೀಕ್ಷಾಬದ್ಧರಾಗಿದ್ದ ದಿನಗಳಿಂದಲೂ ನೋಡಿರುವೆ. ಅವರ ಹಿಂದಿನ ಪೀಠಾಧಿಪತಿಗಳು ಅಗಲಿದ ಸಂದರ್ಭದಲ್ಲಿ ತಮ್ಮ ಗುರುವನ್ನು ಕಳೆದುಕೊಂಡ ನೋವಿನಲ್ಲಿ ಪೂಜ್ಯರು ಬಿಕ್ಕಿ ಬಿಕ್ಕಿ ಗೋಳಾಡಿದ ಕ್ಷಣಕ್ಕೂ ನಾನು ಸಾಕ್ಷಿಯಾಗಿದ್ದೆ. ಪಟ್ಟಕ್ಕೆ ಬಂದ ಹೊಸತರಲ್ಲಿ ನಮ್ಮ ವಯೋಮಾನದ ಹುಡುಗರನ್ನು ಸೇರಿಸಿಕೊಂಡು ಸಂಜೆಯ ಹೊತ್ತು ಭಜನೆ ನಡೆಸಿಕೊಡುತ್ತಿದ್ದರು. ಅವರ ಧ್ವನಿ ಮಾಧುರ್ಯ ನಿಜಕ್ಕೂ ವಿಸ್ಮಯ ಹುಟ್ಟಿಸುವ ಹಾಗಿತ್ತು. ಆ ದಿನಗಳಲ್ಲಿ ಅವರು ನಮಗೆಲ್ಲಾ ಕಲಿಸುತ್ತಿದ್ದ ಭಜನೆಗಳು ಇಂದಿಗೂ ನನ್ನ ನೆನಪಿನಲ್ಲಿ ಉಳಿದಿದೆ.
ಈ ನಡುವೆ ಒಂದು ಸಂದರ್ಭ ನನ್ನನ್ನು ಪದೇ ಪದೆ ಕಾಡುತ್ತದೆ. ಇವತ್ತಿನ ಮೂಡುಬಿದಿರೆ ಭಟ್ಟಾರಕರು ಪೀಠಕ್ಕೆ ಏರುವ ಸಮಯದಲ್ಲಿ ಅದರ ಪೂರ್ಣ ಜವಾಬ್ದಾರಿ ಹೊತ್ತು ಅದನ್ನು ನಡೆಸಿಕೊಟ್ಟವರು ಪೂಜ್ಯ ಭಟ್ಟಾರಕರು. ಆ ದಿನಗಳಲ್ಲಿ ಅವರ ಸಾಂಗತ್ಯದಲ್ಲಿ ಒಂದಷ್ಟು ಕಾಲ ಕಳೆಯುವ ಪುಣ್ಯವೂ ನನ್ನದಾಗಿತ್ತು. ಆ ಸಮಯದಲ್ಲಿ ಅವರು ನಲ್ಲೂರಿನ ಬಸದಿಯಲ್ಲಿ ತಮ್ಮ ಚಾತುರ್ಮಾಸಕ್ಕಾಗಿ ನೆಲೆ ನಿಂತವರು. ಆಗ ಅವರೊಡನೆ ಒಂದಷ್ಟು ಧರ್ಮ ಚರ್ಚೆಗಳನ್ನು ನಡೆಸುವ ಸದವಕಾಶವೂ ನನ್ನ ಪಾಲಿಗೆ ಬಂದಿತ್ತು. ಆಗ ಅವರು “ಅಜಿತ್ ಪ್ರಸಾದ್, ಪ್ರತಿನಿತ್ಯ ಸಂಜೆ ಒಂದಷ್ಟು ಸಮಯ ನಿಮಗಾಗಿ ಕೊಡುವೆ. ನಿಮಗೆ ‘ತತ್ತ್ವಾರ್ಥಸೂತ್ರ’ ಹೇಳಿಕೊಡುವೆ” ಎಂದರು. ಆದರೆ ಪ್ರತಿನಿತ್ಯ ಮೂಡುಬಿದಿರೆಯಿಂದ ನಲ್ಲೂರಿಗೆ ಹೋಗಿಬರಲು ನಾನು ಹಿಂದೆಟು ಹಾಕಿದೆ. ಪರಿಣಾಮವಾಗಿ ಜೀವನ ನನಗೆ ಒದಗಿಸಿಕೊಟ್ಟಿದ್ದ ಒಂದು ಅಪರೂಪದ ಚಿನ್ನದ ಅವಕಾಶವನ್ನು ಕಳೆದುಕೊಂಡೆ.
ಪೂಜ್ಯ ಸ್ವಾಮೀಜಿಗಳ ಮಾತು ಎಂದರೆ ಅದರಲ್ಲಿ ಹರಳುಗಟ್ಟಿದ ತತ್ತ್ವಗಳು, ಜೀವನಾನುಭವಗಳು ತುಂಬಿರುತ್ತಿದ್ದವು. ನನ್ನ ಅಮ್ಮ ಶಾಂತಮ್ಮನವರು ( ಧಾರಿಣಿದೇವಿ) ಪೂಜ್ಯರ ಇಂತಹ ಅನುಭವಾಮೃತಗಳ ಹರಳುಗಟ್ಟಿದ ಮಾತುಗಳನ್ನೇ ಸಂಗ್ರಹಿಸಿ ಅವುಗಳನ್ನು ಮೂರು ಕೃತಿಗಳ ರೂಪದಲ್ಲಿ “ಚಾರುಶ್ರೀ ನುಡಿಗಳು” ಎಂಬುದಾಗಿ ಸಂಗ್ರಹಿಸಿಕೊಟ್ಟಿದ್ದಾರೆ. ಪೂಜ್ಯ ಸ್ವಾಮಿಜಿಗಳ ನೆನಪು ಬಗೆದಷ್ಟೂ ಬತ್ತದ ಗಣಿ ಇದ್ದಂತೆ. ಪೂಜ್ಯ ಸ್ವಾಮಿಜಿಗಳ ಆಯ್ಮನಿಗೆ ಸದ್ಗತಿ ಒದಗಿಬರಲಿ.
ಪ್ರೊ | ಎಸ್.ಪಿ. ಅಜಿತ್ ಪ್ರಸಾದ್, ಮೂಡುಬಿದಿರೆ































































































error: Content is protected !!
Scroll to Top