Wednesday, July 6, 2022
spot_img
Homeಸಂಪಾದಕೀಯಸಂಪಾದಕೀಯ : ವಂಶ ಪ್ರಭುತ್ವ - ರಾಜಕೀಯಕ್ಕಂಟಿದ ಶಾಪ

ಸಂಪಾದಕೀಯ : ವಂಶ ಪ್ರಭುತ್ವ – ರಾಜಕೀಯಕ್ಕಂಟಿದ ಶಾಪ

ಕಾಂಗ್ರೆಸ್ ಪಕ್ಷದ ವರಿಷ್ಠ ಚಿಂತನ ಸಭೆಯಲ್ಲಿ ‘ಒಂದು ಕುಟುಂಬ ಒಂದೇ ಹುದ್ದೆ’ ಎಂಬ ತೀರ್ಮಾನಕ್ಕೆ ಬರಲಾಗಿದೆ. ಅದನ್ನು ಹಾಗೆಯೇ ಪ್ರಕಟಿಸಿ ಅನುಷ್ಟಾನ ಮಾಡಿದರೆ ಅದೊಂದು ಚಾರಿತ್ರಿಕ ನಡೆಯಾಗುತ್ತಿತ್ತು. ಆದರೆ, ಆ ತೀರ್ಮಾನಕ್ಕೆ ಕೆಲವು ರಿಯಾಯಿತಿಗಳನ್ನು ಕೂಡ ಕೊಡಲಾಗಿದೆ. ಯಾವುದೇ ವ್ಯಕ್ತಿ ಪಕ್ಷಕ್ಕಾಗಿ ಐದು ವರ್ಷಗಳ ಸೇವೆ ಕೊಟ್ಟಿದ್ದರೆ ಅಂತಹ ಕುಟುಂಬಗಳಿಗೆ ಈ ನಿಯಮದಿಂದ ರಿಯಾಯಿತಿ ಕೊಡಲಾಗಿದೆ ! ಅಂದರೆ ಗಾಂಧಿ ಕುಟುಂಬ, ನೆಹರೂ ಕುಟುಂಬ ಸಲೀಸಾಗಿ ಈ ನಿಯಮದ ಹೊರಗೆ ಉಳಿಯುತ್ತವೆ.

ವಂಶಾಡಳಿತ – ಯಾವ ಪಕ್ಷವೂ ಹೊರತಲ್ಲ!
ವಂಶಾಡಳಿತಕ್ಕೆ ಕೇವಲ ಕಾಂಗ್ರೆಸ್ ಪಕ್ಷವನ್ನು ದೂರುವುದು ಸರಿ ಅಲ್ಲ. ಏಕೆಂದರೆ ಎಲ್ಲ ರಾಜಕೀಯ ಪಕ್ಷಗಳು ಇದರಿಂದ ಹೊರತಲ್ಲ. ಕಾಂಗ್ರೆಸ್ ಪಕ್ಷದ ಹೆಚ್ಚಿನ ನಾಯಕರು ಯಾವ ಮುಲಾಜು ಇಲ್ಲದೆ ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಅಧಿಕಾರದ ಕುರ್ಚಿಯಲ್ಲಿ ಕೂರಿಸಿದ್ದಾರೆ. ಒಂದೇ ಕುಟುಂಬದ ಮೂರು ಜನ ಪ್ರಧಾನಿ ಆಗಿದ್ದಾರೆ. ಅದೇ ಕುಟುಂಬದ ವ್ಯಕ್ತಿಗಳು ಇಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಗಾದಿಯಲ್ಲಿ ದಶಕಗಳಿಂದ ಅಧಿಕಾರ ಚಲಾಯಿಸುತ್ತಿದ್ದಾರೆ.
ಅದನ್ನೇ ಮಾದರಿಯಾಗಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ನೂರಾರು ಹಿರಿಯ ನಾಯಕರು ತಾವು ಅಧಿಕಾರದಲ್ಲಿ ಇರುವಾಗಲೇ ತಮ್ಮ ಹೆಂಡತಿ, ಮಕ್ಕಳು, ಸೊಸೆಯರು, ಮೊಮ್ಮಕ್ಕಳನ್ನು ಜಿ.ಪಂ. ಸದಸ್ಯರು, ಶಾಸಕ, ಸಚಿವರನ್ನಾಗಿ ಮಾಡಿದ್ದಾರೆ.

ಜೆಡಿಎಸ್ ಎಂಬ ಅಪ್ಪ ಮಕ್ಕಳ ಪಕ್ಷ
ಕರ್ನಾಟಕದ ಜೆಡಿಎಸ್ ಪಕ್ಷವನ್ನು ಜನರು ಅಪ್ಪ ಮಕ್ಕಳ ಪಕ್ಷ ಎಂದೇ ಕರೆಯುತ್ತಿದ್ದರು. ಈಗ ಅಜ್ಜ, ಅಪ್ಪ ಮತ್ತು ಮೊಮ್ಮಕ್ಕಳ ಪಕ್ಷ ಎಂದು ಕರೆಯಬಹುದು. ಸೊಸೆ ಕೂಡ ಎಂಎಲ್ಎ ಆಗಿ ಆಗಿದೆ. ಇನ್ನೊಬ್ಬ ಸೊಸೆ ಮುಂದಿನ ಚುನಾವಣೆಗೆ ರೆಡಿ ಆಗುತ್ತಿದ್ದಾರೆ. ಒಬ್ಬ ಮೊಮ್ಮಗ ಲೋಕಸಭೆಗೆ ಆಯ್ಕೆ ಆಗಿದ್ದರೆ ಇನ್ನೊಬ್ಬ ಮೊಮ್ಮಗ ಸೋತು ಇನ್ನೊಮ್ಮೆ ವಿಧಾನಸಭೆಯ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಇದು ದೇವೇಗೌಡರ ಒಂದು ಕುಟುಂಬದ ಕತೆ ಅಲ್ಲ. ಆ ಪಕ್ಷದಲ್ಲಿ ಇನ್ನೂ ಹಲವು ನಾಯಕರು ತಮ್ಮ ಮಕ್ಕಳನ್ನು ರಾಜಕೀಯದ ಪಡಸಾಲೆಗೆ ಕರೆತಂದು ಗೆಲ್ಲಿಸುತ್ತಾ ಇದ್ದಾರೆ.

ಬಿಜೆಪಿಯಲ್ಲಿ ಕೂಡ ಅದೇ ಧೃತರಾಷ್ಟ್ರ ಪ್ರೀತಿ ಇದೆ
ಒಂದು ಕಾಲದಲ್ಲಿ ಮೌಲ್ಯಾಧಾರಿತ ಪಕ್ಷ ಎಂದು ಕರೆದುಕೊಳ್ಳುತ್ತ ಬಂದ ಬಿಜೆಪಿ ವಂಶಪ್ರಭುತ್ವ ಸಾಧನೆಯಲ್ಲಿ ಭಾರೀ ಮುಂದಿದೆ. ಯಡಿಯೂರಪ್ಪ ಅವರ ಇಬ್ಬರು ಮಕ್ಕಳೂ ಅಧಿಕಾರದ ಜಾಗದಲ್ಲಿ ಕೂತಾಗಿದೆ. ಬಸವರಾಜ್ ಬೊಮ್ಮಾಯಿ ಕೂಡ ವಂಶ ಪ್ರಭುತ್ವದ ವಾರಸುದಾರ. ಈಶ್ವರಪ್ಪ ಮೊದಲಾದವರು ತಮ್ಮ ಮಕ್ಕಳನ್ನು ಕುರ್ಚಿಯಲ್ಲಿ ಕೂರಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಈಗ ಸಂಪುಟದಲ್ಲಿ ಇರುವ ಹಲವರು ವಂಶದ ವಾರಿಸುದಾರಿಕೆಯ ಮೂಲಕ ಅಧಿಕಾರ ಹಿಡಿದವರು. ಗಂಡನ ವಿಧಾನಸಭಾ ಕ್ಷೇತ್ರದಲ್ಲಿ ಹೆಂಡತಿ, ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿ ಅನುಕಂಪದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಕಾಯಕದಲ್ಲಿ ಎಲ್ಲ ಪಕ್ಷಗಳೂ ಸ್ಪರ್ಧೆಗೆ ಬಿದ್ದಂತೆ ಹೋರಾಟ ಮಾಡಿವೆ.

ಷರತ್ತು ಅನ್ವಯಿಸುತ್ತವೆ
ಬಿಜೆಪಿ ಪಕ್ಷದಲ್ಲಿ 75 ವರ್ಷಕ್ಕೆ ಅಧಿಕಾರ ನಿವೃತ್ತಿಯ ನಿಯಮವಿದೆ. ಆದರೆ, ಅಧಿಕಾರ ಬಿಟ್ಟು ಕೊಡುವ ಹೊತ್ತಿನಲ್ಲಿ ತನ್ನ ಮಗ, ಮಗಳು, ಸೊಸೆಗೆ ಅಧಿಕಾರ ನೀಡಬೇಕು ಎಂದು ಷರತ್ತು ಹಾಕಿದಾಗ ಹೈಕಮಾಂಡ್ ಒಪ್ಪಲೇ ಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ರಾಜಕೀಯದ ರುಚಿ ಹಿಡಿದ ವ್ಯಕ್ತಿಗಳಿಗೆ ಅಧಿಕಾರ ಇಲ್ಲದಿದ್ದರೆ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಾರೆ. ಏಕೆಂದರೆ ರಾಜಕೀಯವು ಇತ್ತೀಚಿನ ವರ್ಷಗಳಲ್ಲಿ ಐಷಾರಾಮಿ ಬದುಕು ಕಟ್ಟಿಕೊಡುತ್ತಿದೆ.

ಕಾರ್ಯಕರ್ತರ ಪಾಡು ಕೇಳುವವರೇ ಇಲ್ಲ !
ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಕಾರ್ಯಕರ್ತರನ್ನು ಚುನಾವಣೆಯ ಹೊತ್ತಿನಲ್ಲಿ ಉಪಯೋಗ ಮಾಡಿ ಎಸೆದು ಬಿಡುತ್ತವೆ. ಯುಸ್ ಆಂಡ್ ಥ್ರೋ ಪಾಲಿಸಿಯಲ್ಲಿ ಕಾರ್ಯಕರ್ತರೇ ಬಲಿ ಪಶು ಆಗುತ್ತಿದ್ದಾರೆ. ಆದರೆ, ಅಧಿಕಾರ ಗ್ರಹಣ ಬಂದಾಗ ತಮ್ಮ ವಾರಸುದಾರರನ್ನು ಎತ್ತರದ ಸ್ಥಾನದಲ್ಲಿ ಸ್ಥಾಪನೆ ಮಾಡಲು ಹೊರಡುವ ನಾಯಕರು ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ಈ ಬಗ್ಗೆ ನಿಷ್ಟಾವಂತ ಕಾರ್ಯಕರ್ತರಲ್ಲಿ ಕೂಡ ಆಕ್ರೋಶ ಇದೆ. ಆದರೆ ಈಗ ಯಾರೂ ಎದುರು ಮಾತಾಡುತ್ತಿಲ್ಲ. ಅದಕ್ಕಾಗಿ ಈಗ ಎಲ್ಲ ಪಕ್ಷಗಳೂ ಚುನಾವಣೆಗೆ ಪೇಮೆಂಟ್ ಕಾರ್ಯಕರ್ತರನ್ನು ಅವಲಂಬಿಸುವ ಅಗತ್ಯ ಇದೆ. ಅದರಿಂದ ಚುನಾವಣಾ ಭ್ರಷ್ಟಾಚಾರ ಹೆಚ್ಚುತ್ತಿದೆ.

ಹೀಗೊಂದು ವಾದ
ಅಮಿತಾಭ್ ಬಚ್ಚನ್ ಮಗ ದೊಡ್ಡ ಸ್ಟಾರ್ ಆಗಿದ್ದಾನೆ. ಸಚಿನ್ ಮಗ ಕ್ರಿಕೆಟರ್ ಆಗಿದ್ದಾನೆ. ಹಾಗಿರುವಾಗ ರಾಜಕಾರಣಿಗಳ ಮಕ್ಕಳು ರಾಜಕಾರಣಕ್ಕೆ ಬಂದರೆ ಏನು ತಪ್ಪು ? ಎಂದು ವಾದ ಮಾಡುವವರು ಇದ್ದಾರೆ. ಏನೂ ತಪ್ಪಿಲ್ಲ ! ಯೋಗ್ಯತೆ ಇದ್ದರೆ ಖಂಡಿತ ಆಗಬಹುದು. ಸಂಘಟನೆಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಅಧಿಕಾರಕ್ಕೆ ಬಂದರೆ ಯಾರ ಆಕ್ಷೇಪಣೆಯೂ ಇಲ್ಲ. ಆದರೆ, ಇಂತವರ ಮಗ ಎಂಬ ಕಾರಣಕ್ಕೆ, ಇಂತವರ ಮಗಳು ಎಂಬ ಕಾರಣಕ್ಕೆ ಅಧಿಕಾರಕ್ಕೆ ಬರುವುದು ಯೋಗ್ಯವಲ್ಲ. ಹಾಗೆಯೇ ಮಕ್ಕಳು ಅಧಿಕಾರಕ್ಕೆ ಬಂದಾಗ ಹಿರಿಯರು ರಾಜಕೀಯ ನಿವೃತ್ತಿ ಪಡೆಯುವುದು ಉನ್ನತ ಮಾದರಿ. ಅದಕ್ಕಿಂತ ಉನ್ನತ ಮಾದರಿ ಎಂದರೆ ಕಾರ್ಯಕರ್ತರಿಗೆ ಅಧಿಕಾರ ಕೊಟ್ಟು ಅವರನ್ನು ಬೆಳೆಸುವುದಾಗಿದೆ. ಎಲ್ಲ ಪಕ್ಷಗಳೂ ಈ ಬಗ್ಗೆ ತನ್ನ ಧೋರಣೆಗಳನ್ನು ಜನರ ಮುಂದಿಡುವುದು ಇಂದಿನ ಅಗತ್ಯ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!