ನೀನು ಹೊಡೆದ ಹಾಗೆ ಮಾಡು, ನಾನು ಬಿದ್ದ ಹಾಗೆ ಮಾಡ್ತೇನೆ.ಇದು ಕರ್ನಾಟಕ ರಾಜಕಾರಣದ ಒಂದು ವಾಕ್ಯದ ಶರಾ ಅಂದ್ರೂ ತಪ್ಪಿಲ್ಲ! ಎರಡು ದಿನಗಳ ಅವಧಿಯಲ್ಲಿ ನಡೆದ ನಾಟಕೀಯ ವಿದ್ಯಮಾನವನ್ನು ಗಮನಿಸಿದಾಗ ಎಲ್ಲವೂ ಪೂರ್ವ ಯೋಜಿತ ಮತ್ತು ಬಿಜೆಪಿ ಹೈಕಮಾಂಡ್ ಸ್ಕ್ರಿಪ್ಟೆಡ್ ಎನ್ನುವುದು ಯಾರಿಗಾದರೂ ಅರ್ಥ ಆಗಬೇಕು. ಇದಕ್ಕೆ ತುಂಬಾ ದೊಡ್ಡ ರಾಜನೀತಿ ಶಾಸ್ತ್ರದ ಜ್ಞಾನ ಬೇಕಾಗಿಲ್ಲ.
ಎರಡು ತಿಂಗಳ ಹಿಂದೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ದಿಲ್ಲಿಗೆ ಕರೆಸಿ ರಾಜೀನಾಮೆ ಕೊಡುವಂತೆ ಕೇಳಿಕೊಂಡಿತು. ಅದಕ್ಕೆ ಅವರು ಕೊಟ್ಟ ಕಾರಣ ನಿಮಗೆ ವಯಸ್ಸಾಗಿದೆ. ನಮ್ಮ ಪಕ್ಷದ ಪಾಲಿಸಿ ಪ್ರಕಾರ 75 ದಾಟಿದ ನಂತರ ಅಧಿಕಾರ ಸ್ಥಾನ ಪಡೆಯಲು ಸಾಧ್ಯ ಇಲ್ಲ ಅಂದಿದ್ದರು. ಯಡ್ಡಿಯೂರಪ್ಪ ಅದಕ್ಕೆ ಒಪ್ಪಿದ್ದರು ಮತ್ತು ಒಂದೆರಡು ಶರ್ತಗಳನ್ನು
ಮುಂದಿಟ್ಟರು. ಅದರಲ್ಲಿ ಒಂದು ಶರ್ತ ಎಂದರೆ ತನಗೆ ಆಪ್ತರಾದ ತನ್ನದೇ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡುವುದು. ಎರಡನೆಯದ್ದು ತನ್ನ ಇಬ್ಬರು ಮಕ್ಕಳಿಗೂ ರಾಜಕೀಯ ಭವಿಷ್ಯ ರೂಪಿಸುವುದು. ಮೂರನೆಯದು ಒಂದು ದೊಡ್ಡ ವೇದಿಕೆ, ಒಂದು ಭಾರೀ ಪ್ರಚಾರ, ಒಂದಿಷ್ಟು ಕಣ್ಣೀರು.. ಹೀಗೆ ಒಂದು ಮೆಲೋಡ್ರಾಮಾ ಸೃಷ್ಟಿ ಮಾಡಿ ತನ್ನ ಮಾಸ್ ಹೀರೋ ಪಟ್ಟವನ್ನು ಗಟ್ಟಿ ಮಾಡುವುದು.
ಯಡಿಯೂರಪ್ಪ ಎಲ್ಲಾ ಕಡೆ ಗೆದ್ದಿದ್ದಾರೆ. ಹೈಕಮಾಂಡ್ ಕೂಡ ಗೆದ್ದಿದೆ. ಕೋಲು ಮುರಿಯಬಾರದು, ಹಾವು ಸಾಯಬಾರದು ಎನ್ನುವುದು ಹೈಕಮಾಂಡ್ ಮರ್ಜಿ. ಈ ತಂತ್ರಗಾರಿಕೆ ಕೆಲವು ಹಿರಿಯ ನಾಯಕರಿಗೆ ಗೊತ್ತಿತ್ತು. ಅದಕ್ಕೆ ಪೂರಕವಾಗಿ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೊ ಲೀಕ್ ಆದದ್ದು, ಅದು ತನ್ನದಲ್ಲ ಎಂದು ಅವರು ಹೆಗಲು ಮುಟ್ಟಿಕೊಂಡದ್ದು ನಡೆಯಿತು. ನಳಿನ್, ಅರುಣ್ ಶೌರಿ ಮೊದಲಾದವರು ಯಡಿಯೂರಪ್ಪ ಮುಂದೆ ಎರಡು ವರ್ಷ ಸಿಎಂ ಆಗಿ ಇರುತ್ತಾರೆ ಅಂದಿದ್ದರು. ಸ್ವತಃ ಯಡಿಯೂರಪ್ಪ ಹಾಗೆಯೇ ಹೇಳುತ್ತಾ ಬಂದಿದ್ದರು. ಇದರ ಉದ್ದೇಶ ಮಾಧ್ಯಮಗಳನ್ನು ದಾರಿ ತಪ್ಪಿಸುತ್ತ ಹೋಗುವುದು ಆಗಿತ್ತು. ಅದರಲ್ಲಿ ಕೂಡ ಬಿಜೆಪಿ ಯಶಸ್ವಿ ಆಯಿತು.
ಸರಿ ಆಗಿ ಒಂದು ತಿಂಗಳ ಹಿಂದೆ ಯಡಿಯೂರಪ್ಪ ಪ್ರೆಸ್ ಮುಂದೆ ಹೈಕಮಾಂಡ್ ಹೇಳಿದರೆ ನಿರ್ಗಮಿಸಲು ಸಿದ್ಧ ಎಂಬ ಹೇಳಿಕೆ ಕೊಟ್ಟಿದ್ದರು. ನಮ್ಮ ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ ಎಂದು ಕೂಡ ಹೇಳಿದ್ದರು. ಆಗಲೇ ಅವರು ಮಾನಸಿಕವಾಗಿ ನಿರ್ಗಮನಕ್ಕೆ ಸಿದ್ಧತೆ ಮಾಡಿದ್ದರು. ಯತ್ನಾಳ್, ಯೋಗೇಶ್ವರ್, ಈಶ್ವರಪ್ಪ ಅಂತವರು ಇಡೀ ಎರಡು ತಿಂಗಳ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಪಕ್ಷದ ವರ್ಚಸ್ಸಿಗೆ ಧಕ್ಕೆ ಮಾಡುತ್ತ ಬಂದಿದ್ದರು. ಮನಸು ಮಾಡಿದರೆ ಹೈಕಮಾಂಡ್ ಅವರ ಬಾಯಿ ಮುಚ್ಚಿಸಬಹುದಿತ್ತು. ಆದರೆ ಹೈಕಮಾಂಡ್ ಅದನ್ನು ಮಾಡಲಿಲ್ಲ. ಅದರಿಂದ ಯಡಿಯೂರಪ್ಪ ನಿರ್ಗಮನದ ಬಗ್ಗೆ ಜನರು ಮಾನಸಿಕವಾಗಿ ಸಿದ್ಧರಾದರು. ಹಲವು ನಾಯಕರ ಹೆಸರು ಸಿಎಂ ಹುದ್ದೆಗೆ ಮಾಧ್ಯಮದಲ್ಲಿ ಹರಿದಾಡಿತು. ಯಡಿಯೂರಪ್ಪ ಪರವಾಗಿ ಮಠಾಧಿಪತಿಗಳು ಬಲ ಪ್ರದರ್ಶನ ಮಾಡಿ ರಸ್ತೆಗಿಳಿದದ್ದು ಪರೋಕ್ಷವಾಗಿ ಲಿಂಗಾಯತ ಸಮುದಾಯ ಬಿಜೆಪಿಯ ಪರವಾಗಿ ಇದೆ ಎಂದು ಬಿಂಬಿಸುವ ಕೆಲಸ ಮಾಡಿತು. ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಅತ್ಯಂತ ಆಪ್ತರು. ಅವರದ್ದೇ ಸಮುದಾಯದವರು. ಯಡಿಯೂರಪ್ಪ ಅವರ ಮಾತುಗಳನ್ನು ತುಂಬಾ ಚೆನ್ನಾಗಿ ಕೇಳುವವರು. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಟ್ಟ ಹಾಗೆ ಕೂಡ ಹಾಗೆ ಆಯ್ತು. ಯಡಿಯೂರಪ್ಪ ಅವರ ಮಾತುಗಳು ಪಕ್ಷದಲ್ಲಿ, ಸರಕಾರದಲ್ಲಿ ಮುಂದಿನ ಒಂದೆರಡು ವರ್ಷ ಖಂಡಿತ ನಡೆಯುತ್ತದೆ. ಅವರ ಇಬ್ಬರು ಮಕ್ಕಳಿಗೂ ಅವರು ಇಷ್ಟ ಪಡುವ ಆಯಕಟ್ಟಿನ ಜಾಗದಲ್ಲಿ ಸ್ಥಾನ ದೊರೆಯುತ್ತದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಯಡಿಯೂರಪ್ಪ ಅವರು ಬಿಜೆಪಿಯ ಮಾಸ್ ಲೀಡರ್ ಆಗಿ ಮೂಡಿಬರುತ್ತಾರೆ. ಅದರಿಂದ ಲಾಭ ಆಗುವುದು ಬಿಜೆಪಿಗೆ ಖಂಡಿತ. ಹೀಗೆ ಹಲವು ಕಲ್ಲುಗಳಿಂದ ಹಣ್ಣು ಉದುರುವುದು ಖಂಡಿತ. ಹೈಕಮಾಂಡಿಗೆ ಬೇಕಾದದ್ದು ಅದೇ ಅಲ್ಲವೇ!
ಬಹಳ ಉತ್ತಮವಾದ ಅನಾಲಿಟಿಕಲ್ ಬರಹ… ಎಲ್ಲಾ ವಿಷಯಗಳನ್ನು ವಿವರವಾಗಿ ಕಟ್ಟಿಕೊಟ್ಟಿದೆ. ಧನ್ಯವಾದಗಳು