ಕಾರ್ಕಳ : ನಿಟ್ಟೆ ಗ್ರಾಮದ ಅತ್ತೂರು ಸಂತ ಲಾರೆನ್ಸ್ ಚರ್ಚ್ ಧರ್ಮಗುರು ಅವ್ಯಾಹತವಾಗಿ ಅಕ್ರಮ ಕಾಮಗಾರಿ ನಡೆಸುತ್ತಿದ್ದಾರೆ. ಕಾಮಗಾರಿ ನಡೆಸದಂತೆ ಹೈಕೋರ್ಟ್ ಹಾಗೂ ತಹಶೀಲ್ದಾರ್ ಕೋರ್ಟ್ ತಡೆಯಾಜ್ಞೆ ತಂದಿದ್ದರೂ ಆದೇಶ ಪಾಲನೆ ಮಾಡದೇ ಕಾಮಗಾರಿಯಾಗುತ್ತಿದ್ದು, ಕಾಮಗಾರಿ ಸ್ಥಗಿತಗೊಳಿಸುವಂತೆ ನಿಟ್ಟೆಯ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬುಧವಾರ ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಮನವಿ ಮಾಡಿರುತ್ತಾರೆ.
ಕಾಮಗಾರಿ ಸ್ಥಗಿತಗೊಳಿಸುವಲ್ಲಿ ಇಲಾಖಾ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ಮೂಡುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಮಗಾರಿ ಸ್ಥಗಿತ
ದೂರಿನ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತಗೊಂಡ ಕಂದಾಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಹೊಸದಾಗಿ ಚರಂಡಿ ಮೇಲ್ಬಾಗಕ್ಕೆ ಅಳವಡಿಸಿರುವ ಸಿಮೆಂಟ್ ಕಾಂಕ್ರೀಟ್ ಸ್ಲ್ಯಾಬ್ ತೆರವುಗೊಳಿಸಲಾಗಿದೆ. ತಹಶೀಲ್ದಾರ್ ಮಾರ್ಗದರ್ಶನದಲ್ಲಿ ಆರ್‌ಐ ಶಿವಪ್ರಸಾದ್, ನಿಟ್ಟೆ ಪಿಡಿಒ ಶೇಖರ್ ಪೂಜಾರಿ, ಗ್ರಾಮ ಕರಣಿಕ ಆನಂದ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸಿದರು.



























































