Tuesday, July 5, 2022
spot_img
Homeಅಂಕಣ2021ರ ವರ್ಷವನ್ನು ಹೆಚ್ಚು ಭರವಸೆಯಿಂದ ಸ್ವಾಗತಿಸುವ

2021ರ ವರ್ಷವನ್ನು ಹೆಚ್ಚು ಭರವಸೆಯಿಂದ ಸ್ವಾಗತಿಸುವ

   2020 ಭಾರತದ ಸೂಪರ್ ಪವರ್ ವರ್ಷ ಆಗುತ್ತದೆ ಎಂದಿದ್ದರು ಕಲಾಂ ಸರ್. ಅದು  ಒಂದು ಅದ್ಭುತವಾದ ಪರಿಕಲ್ಪನೆ. ಕಲಾಂ ಸರ್ ಒಂದೇ ವರ್ಷದಲ್ಲಿ ಇಡೀ ಭಾರತ ಬದಲಾಗುತ್ತದೆ ಎಂದು ಎಲ್ಲಿಯೂ ಹೇಳಿರಲಿಲ್ಲ. ವಿಜ್ಞಾನ, ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಭಾರತವು ಈ ಇಪ್ಪತ್ತರ ದಶಕದಲ್ಲಿ  ದಾಪುಗಾಲು ಹಾಕುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈ ಅಂಶವನ್ನು ಗಮನಿಸಿದಾಗ ಅವರ ಭವಿಷ್ಯ ನಿಜವಾಗಿದೆ. ಭಾರತ ವಿಶ್ವಗುರು ಆಗಿ ಬೆಳೆಯುತ್ತಿದೆ ಮತ್ತು ಅದನ್ನು ಬೆರಗು ಕಣ್ಣಿಂದ ಜಗತ್ತು ನೋಡುತ್ತಿದೆ!  

ಹೆಚ್ಚು ಪ್ರಜ್ಞಾವಂತ ಯುವಜನತೆ
ಭಾರತದ ಯುವ ಜನತೆ ಇಂದು ಹೆಚ್ಚು ಪ್ರಜ್ಞಾವಂತ ಆಗುತ್ತಿದೆ. ಭಾರತದ ಯುವ ಪ್ರತಿಭೆಗಳಿಗೆ ಹೆಚ್ಚು ಹೆಚ್ಚು ಅಂತಾರಾಷ್ಟ್ರೀಯ ಮಾನ್ಯತೆಗಳು ದೊರೆಯುತ್ತಿವೆ. ಬ್ರಿಟನ್, ಅಮೆರಿಕ, ಜರ್ಮನಿ, ಇಟಲಿ, ಫ್ರಾನ್ಸ್ ರಾಷ್ಟ್ರಗಳ ಪಾರ್ಲಿಮೆಂಟಿಗಳಿಗೆ ಅನೇಕ ಭಾರತೀಯರು ಆಯ್ಕೆ ಆಗುತ್ತಿದ್ದಾರೆ. ಇದೇನೂ ಸಣ್ಣ ಸುದ್ದಿ ಅಲ್ಲವೇ ಅಲ್ಲ. ಸಾವಿರಾರು ಯುವಜನತೆ ಐಟಿ ಉದ್ಯೋಗಗಳನ್ನು ತೊರೆದು ಕೃಷಿಯ ಕಡೆಗೆ ಮುಖ ಮಾಡುತ್ತಿದ್ದಾರೆ. ರಾಜಕೀಯ ಒಂದು ಹೊಲಸು ಕ್ಷೇತ್ರ ಅನ್ನುತ್ತಿದ್ದ ಯುವಕರು ಇಂದು ರಾಜಕೀಯ ಪಡಸಾಲೆಯಲ್ಲಿ ಮಿಂಚುತ್ತಿದ್ದಾರೆ, ಮಾತ್ರವಲ್ಲ ರಾಜಕೀಯ ಕ್ಷೇತ್ರವನ್ನು ಶುದ್ಧ ಮಾಡುತ್ತಿದ್ದಾರೆ. ಯುವಜನತೆ ಮೌಢ್ಯಗಳಿಂದ ಹೊರಬಂದು ವೈಜ್ಞಾನಿಕ ಮನೋಭಾವ ಹೊಂದುತ್ತಿದ್ದಾರೆ. ಅಜ್ಜ ನೆಟ್ಟ ಆಲದ ಮರಕ್ಕೆ ಹಗ್ಗ ತೆಗೆದುಕೊಳ್ಳುವ ಮನೋವೃತ್ತಿ ಮರೆಯಾಗುತ್ತಿದೆ. ಯುವಜನತೆ ಸ್ವಂತ ವಿಚಾರಧಾರೆಗಳನ್ನು ಅಪ್ಪುತ್ತಿದ್ದಾರೆ.

ಸಾಮಾಜಿಕ ಜಾಲತಾಣಕ್ಕೆ ಜೈ
ಇಂದು ಯುವಜನತೆಯ ಹಾದಿ ತಪ್ಪಿಸುತ್ತಿವೆ ಎಂಬ ಆಕ್ಷೇಪಗಳ ನಡುವೆ ಕೂಡ ಜಾಲತಾಣಗಳು ನಮ್ಮ ಜ್ಞಾನವನ್ನು ವಿಸ್ತಾರ ಮಾಡುತ್ತಿವೆ. ನಮ್ಮ ಯುವಜನತೆ ಇಂದು ದಾಖಲೆ ಇಲ್ಲದೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ! ಸುಳ್ಳು ಹರಡುವುದರಿಂದ ಯಾರೂ ದೀರ್ಘ ಕಾಲ ಹೀರೋ ಆಗಿರಲು ಸಾಧ್ಯವಿಲ್ಲ. ಡ್ರೋನ್ ಪ್ರತಾಪ್ ಅಂಥವರು ಕೆಲವೇ ದಿನಗಳಲ್ಲಿ ಸಮಾಜದ ಮುಂದೆ ಬೆತ್ತಲಾಗಿ ಹೋದ ನಿದರ್ಶನ ಕಣ್ಣ ಮುಂದೆ ಇದೆ. ತುಂಬಾ ಜ್ಞಾನ ಹೊಂದಿರುವ ನಮ್ಮ ಯುವಶಕ್ತಿಗಳು ಫ್ಯಾಕ್ಟ್ ಚೆಕ್ ಮಾಡದೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ! ಸುಳ್ಳು ಹೇಳಿ ಅಧಿಕಾರ, ದುಡ್ಡು, ಪ್ರಶಸ್ತಿ ಪಡೆಯಲು ಸಾಧ್ಯವೇ ಇಲ್ಲ. ಇದು ಧನಾತ್ಮಕ ಬದಲಾವಣೆ.

ಕೋರೋನ ಕಲಿಸಿದ ಪಾಠ
ಮಹಾಮಾರಿ ನಮಗೆ ಬಹು ದೊಡ್ಡ ಪಾಠ ಕಲಿಸಿದೆ. ಅತ್ಯಂತ ಸರಳವಾಗಿ ಬದುಕುವುದನ್ನು ಕಲಿಸಿ ಕೊಟ್ಟಿದೆ. ಸಮಸ್ಯೆ ಬಂದಾಗ ಪರ್ಯಾಯವಾಗಿ ಪರಿಹಾರ ಹುಡುಕುವುದನ್ನು ಹೇಳಿ ಕೊಟ್ಟಿದೆ. ಕೊರೋನ ಕಾರಣಕ್ಕೆ ಉದ್ಯೋಗ, ಬದುಕು ಕಳೆದುಕೊಂಡವರು ಬದುಕುವ ಪರ್ಯಾಯ ದಾರಿಗಳನ್ನು ಹುಡುಕುತ್ತಿದ್ದಾರೆ. ಬೇರೆಯವರ ಅಡಿಯಲ್ಲಿ ಕೆಲಸ ಮಾಡಿಕೊಂಡು ಇದ್ದವರು ಸ್ವಂತದ್ದು ಏನಾದರೂ ಮಾಡಬೇಕು ಎಂದು ಯೋಚನೆ ಮಾಡಲು ಆರಂಭ ಮಾಡಿದ್ದಾರೆ. ಸ್ವಂತದ್ದು ಸಣ್ಣ ಕೆಲಸ ಆದರೂ ಪರವಾಗಿಲ್ಲ, ಗುಲಾಮಗಿರಿ ಸಾಕು ಎನ್ನುವ ನಿರ್ಧಾರಕ್ಕೆ ಬರತೊಡಗಿದ್ದಾರೆ. ರಸ್ತೆ ಬದಿ ಹೊಸದಾಗಿ ಹುಟ್ಟುತ್ತಿರುವ ಗೋಬಿ ಮಂಚೂರಿಯ, ಬಿರಿಯಾನಿಗಳ ಫಾಸ್ಟ್ ಫುಡ್ ಅಂಗಡಿಗಳು, ಜ್ಯೂಸ್ ಸೆಂಟರಗಳು, ವಾಹನಗಳ ಸರ್ವಿಸ್ ಸೆಂಟರಗಳು, ಸಣ್ಣ ಉದ್ಯಮಗಳು, ಮನೆ ಮನೆಗೆ ತೆರಳಿ ವಸ್ತುಗಳನ್ನು ಮಾರಾಟ ಮಾಡುವ ಏಜೆನ್ಸಿಗಳು ಹೆಚ್ಚುತ್ತಿವೆ. ಯೂ ಟ್ಯೂಬ್ ನೋಡುತ್ತ ಎಡಿಟಿಂಗ್ ಕಲಿಯುವ, ಫೋಟೋಗ್ರಾಫಿ ಕಲಿಯುವ, ಹೊಸ ಅಡಿಗೆ ಮಾಡುವುದನ್ನು ಕಲಿಯುವ ಉತ್ಸಾಹಿಗಳ ಸಂಖ್ಯೆ ಹೆಚ್ಚುತ್ತಿದೆ. ನಾಲಗೆಯ ಚಟಕ್ಕೆ ಬಲಿ ಬಿದ್ದು ರಸ್ತೆ ಬದಿಯ ಹೋಟೆಲುಗಳಲ್ಲಿ ಹಾಳು ಮೂಳು ತಿನ್ನುತ್ತಿದ್ದ ಗಂಡಸರು ಈಗ ನಿಧಾನಕ್ಕೆ ಮನೆಯ ಅಡುಗೆಗೆ ಹೊಂದಿ ಕೊಳ್ಳುತ್ತಿದ್ದಾರೆ. ಆರೋಗ್ಯದ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಹೆಚ್ಚುತ್ತಿದೆ. ಜಿಮ್, ಈಜು ಕೊಳಗಳು, ಫಿಟ್ನೆಸ್ ಕೇಂದ್ರಗಳು, ಆರೋಗ್ಯ ಧಾಮಗಳು, ದೇಸೀ ವೈದ್ಯ ಪದ್ಧತಿಯ ರೆಸಾರ್ಟ್ಗಳು ಭರ್ತಿ ಆಗುತ್ತಿವೆ. ಜನರು ನಿಧಾನಕ್ಕೆ ಹೆಲ್ತ್ ಅವೇರ್ ಆಗುತ್ತಿದ್ದಾರೆ.
ಐಟಿ ಉದ್ಯೋಗಿಗಳು ಈ ವರ್ಷ ದೊರೆತ ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯಿಂದ ಮನೆಗೆ ಹೆಚ್ಚು ಹೊತ್ತು ಕೊಡಲು ಸಾಧ್ಯವಾಗಿದೆ. ಮನೆಯೇ ಮಂತ್ರಾಲಯ ಆಗುತ್ತಿದೆ. ಮನೆಯವರ ಜೊತೆಗಿನ ಸಂಬಂಧಗಳು ಉತ್ತಮ ಆಗುತ್ತಿವೆ. ದೂರ ದೂರ ಪ್ರಯಾಣಿಸುವ ಸಮಯ ಉಳಿಯುತ್ತಿದೆ. ಕಂಪೆನಿಗಳ ಹೈ ಪ್ರೊಫೈಲ್ ಮೀಟಿಂಗಗಳು ಕೂಡ ವರ್ಚುವಲ್ ಆಗುತ್ತಿವೆ. ಗೂಗಲ್ ಮೀಟ್, ಝೂಮ್ ಮೀಟಿಂಗಗಳಿಂದ ಎಲ್ಲರ ಸಮಯ, ಹಣ ಉಳಿಯುತ್ತಿದೆ. ಕಂಪೆನಿಗಳ ಪ್ರಯಾಣ ಭತ್ಯೆ, ಪ್ರವಾಸ ಭತ್ಯೆ ಉಳಿತಾಯ ಆಗುತ್ತಿದೆ. ಉದ್ಯೋಗಿಗಳು ತಮ್ಮ ಉದ್ಯೋಗಗಳನ್ನು ಉಳಿಸಿಕೊಳ್ಳಲು ಹೆಚ್ಚು ಹೆಚ್ಚು ಕೌಶಲಗಳನ್ನು ಕಲಿಯುತ್ತಿದ್ದಾರೆ. ಇಡೀ ಜೀವನದಲ್ಲಿ ಕಂಪ್ಯುಟರ್ ಕಡೆಗೆ ತಲೆ ಹಾಕದ ಅನೇಕ ಶಿಕ್ಷಕರು ಇಂದು ಆನ್ಲೈನ್ ಕ್ಲಾಸ್ ಮಾಡುವುದನ್ನು ಕಲಿಯುತ್ತಿದ್ದಾರೆ. ಇಷ್ಟು ವರ್ಷ ಒಂದೇ ಉದ್ಯೋಗಕ್ಕೆ
ಅಂಟಿಕೊಂಡು ಇದ್ದವರು ಹೊಸ ವೃತ್ತಿಗಳನ್ನು ಕಲಿಯುತ್ತಿದ್ದಾರೆ. ಇದು ಧನಾತ್ಮಕ ನಡೆ ಎಂದು ನನಗೆ ಅನ್ನಿಸುತ್ತದೆ.

ಸೃಜನಶೀಲ ಅಧ್ಯಯನ ವಿಸ್ತಾರ
ಕಳೆದ ಶತಮಾನದಲ್ಲಿ ಅಮೆರಿಕಾದ ಒಬ್ಬ ಹಣಕಾಸು ಗುಮಾಸ್ತ ಒಂದು ಹಣ ಕಾಸು ಹಗರಣದಲ್ಲಿ ಆರೋಪಿ ಆಗಿ ಸಿಕ್ಕಿ ಹಾಕಿಕೊಳ್ಳುತ್ತಾನೆ. ಅವನು ನಿಜವಾಗಿ ತಪ್ಪು ಮಾಡಿರಲಿಲ್ಲ. ಆದರೂ ವಿಚಾರಣೆ ನಡೆದು ಆತ ಅಪರಾಧಿ ಎಂದು ಘೋಷಣೆ ಆಗಿ ಆತ ಸೆರೆಮನೆಗೆ ಹೋಗಬೇಕಾಯಿತು. ಜೈಲಿನಲ್ಲಿ ಸಮಯ ಕಳೆಯುವುದು ಕಷ್ಟ ಆದಾಗ ಆತ ಜೈಲರನ ಹತ್ತಿರ ವಿನಂತಿ ಮಾಡಿಕೊಂಡು ಪೇಪರ್, ಪೆನ್ನು ತರಿಸಿಕೊಂಡು ಸಣ್ಣ ಸಣ್ಣ ಕಥೆ ಬರೆಯಲು ಆರಂಭ ಮಾಡುತ್ತಾನೆ. ಅದರ ಮೊದಲು ಅವನು ಯಾವತ್ತೂ ಕಥೆ ಬರೆದಿರಲಿಲ್ಲ. ಅವನ ಕಥೆಗಳು ಬೇರೆ ಬೇರೆ ಪತ್ರಿಕೆಯಲ್ಲಿ ಬೇರೆ ಹೆಸರಿನಲ್ಲಿ ಪ್ರಕಟ ಆಗುತ್ತವೆ. ಮುಂದೆ ಆತ ಅಮೆರಿಕಾದ ಅತ್ಯಂತ ಜನಪ್ರಿಯ ಕಥೆಗಾರ ಆಗುತ್ತಾನೆ. ಆತನೆ ಓ ಹೆನ್ರಿ!
ನಮ್ಮ ಸ್ಥಿತಿ ಕೂಡ ಹಾಗೆ ಆಗಿದೆ. ಇಂದು ಲಾಕ್ ಡೌನ್ ಅವಧಿಯಲ್ಲಿ ಹೆಚ್ಚು ಹೆಚ್ಚು ಬರೆಯುವವರು, ಹೊಸತನ್ನು ಕಲಿಯುವವರು, ಕಲಿಸುವವರು ದೊರೆಯುತ್ತಿದ್ದಾರೆ. ಸೃಜನಶೀಲ ಮನಸ್ಸುಗಳು ಸುಂದರವಾಗಿ ಅರಳುತ್ತಿವೆ. ಹೆಚ್ಚು ಬರಹಗಾರರು ಸೃಷ್ಟಿ ಆಗುತ್ತಿದ್ದಾರೆ. ಹೆಚ್ಚು ಪುಸ್ತಕಗಳು ಪಬ್ಲಿಷ್ ಆಗಿವೆ. ಹೆಚ್ಚು ಓದುಗರು ಸೃಷ್ಠಿ ಆಗಿದ್ದಾರೆ. ಯಕ್ಷಗಾನ ಕಲಾವಿದರು, ಗಾಯಕರು, ತರಬೇತುದಾರರು, ಭಾಷಣಕಾರರು ಸಾಮಾಜಿಕ ಜಾಲತಾಣದಲ್ಲಿ ಅವಕಾಶ ಹುಡುಕುತ್ತಿದ್ದಾರೆ. ಯಕ್ಷಗಾನ ಕಲೆಯು ಯು ಟ್ಯೂಬ್ ಲೈವನಲ್ಲಿ ಲಕ್ಷಾಂತರ ವೀಕ್ಷಕರನ್ನು ಬಾಚಿಕೊಳ್ಳುತ್ತಿದೆ. ಇದು ಧನಾತ್ಮಕ ಬದಲಾವಣೆ ಅಲ್ಲವೇ?

ಲೆಜೆಂಡಗಳ ನಿರ್ಗಮನ
2020 ಅನೇಕ ಐಕಾನ್ ಮತ್ತು ಲೆಜೆಂಡಗಳ ಮರಣಕ್ಕೆ ಸಾಕ್ಷಿ ಆಯಿತು. ಇಷ್ಟೊಂದು ಸಾವು, ನೋವು ಯಾವ ವರ್ಷದಲ್ಲಿ ಕೂಡ ಹಿಂದೆ ಉಂಟಾಗಿರಲಿಲ್ಲ. ಅದು ನಿಜವಾಗಿಯೂ ದುರಂತವೆ. ಆದರೆ ಅವರೆಲ್ಲ ಕೋರೋನ ಬಂದು ಸತ್ತು ಹೋದರು ಎಂದು ಅರ್ಥವಲ್ಲ. ಶ್ವಾಸಕೋಶ, ಹೃದಯ, ಮೂತ್ರಜನಕಾಂಗ ಇವುಗಳ ಸಮಸ್ಯೆ ಇದ್ದವರು ಅಥವಾ ಉಸಿರಾಟ, ಒತ್ತಡ, ಸಕ್ಕರೆ ಕಾಯಿಲೆ ಇರುವವರು ಮಹಾಮಾರಿಗೆ ಹೆಚ್ಚು ಬಲಿಯಾಗಿದ್ದಾರೆ. ಇದರಿಂದಾಗಿ ಜನರಲ್ಲಿ ಆರೋಗ್ಯ ಜಾಗೃತಿ ಮತ್ತು ಕಾಳಜಿ ಹೆಚ್ಚಾಯಿತು. ಯಾವ ಆಹಾರದಲ್ಲಿ ಎಷ್ಟು ಪ್ರಮಾಣ ಸಕ್ಕರೆ, ಕಾಲೆಸ್ಟರಾಲ್ ಮತ್ತು ಫ್ಯಾಟ್ ಇದೆ ಎಂದು ವಿವರಿಸುವ ಪುಸ್ತಕಗಳು, ಗೂಗಲ್ ಸೈಟುಗಳು ಈಗ ಹೆಚ್ಚು ಜನಪ್ರಿಯ ಆಗುತ್ತಿವೆ. ಡಯೆಟ್ ಪರಿಣಿತರು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದಾರೆ. ಆಹಾರ ವಿಜ್ಞಾನದ ಬಗ್ಗೆ ಅರಿವು ಮತ್ತು ಸಂಶೋಧನೆಗಳು ಹೆಚ್ಚುತ್ತಿದೆ.
ಕಾನೂನಿನ ಭಯಕ್ಕಾಗಿ ಆದರೂ ಹೆಚ್ಚಿನ ಮದುವೆಗಳು ಈಗ ತುಂಬಾ ಸರಳ ಆಗುತ್ತಿವೆ. ಮದುವೆಗೆ ಮನೆಮಂದಿ ಮತ್ತು ಒಂದಿಷ್ಟು ಬಂಧುಗಳು ಸೇರಿದರೆ ಸಾಕು ಎಂಬ ಲೆಕ್ಕಾಚಾರ ಆರಂಭ ಆಗಿದೆ. ಸಾಲ ಮಾಡಿ ಆದರೂ ಊರಿಗೆಲ್ಲಾ ಮದುವೆ ಊಟ ಹಾಕಬೇಕು ಎನ್ನುವ ಮಂದಿ ಈಗ ಎರಡೆರಡು ಬಾರಿ ಯೋಚನೆ ಮಾಡಲು ಆರಂಭ ಮಾಡಿದ್ದಾರೆ. ಸರಳ ಮದುವೆ ಆದವರೂ ಸುಖವಾಗಿದ್ದಾರೆ. ಇದು ಧನಾತ್ಮಕ ಬದಲಾವಣೆ ಅಲ್ಲವೇನು?
ಇವೆಲ್ಲವೂ ನನ್ನ ಯುವ ಭಾರತವು ಆತ್ಮನಿರ್ಭರ ಆಗುತ್ತಿರುವ ಲಕ್ಷಣಗಳು. ನನ್ನ ಭಾರತವು ವಿಶ್ವಗುರು ಆಗಿ ಎದ್ದು ನಿಲ್ಲುವುದನ್ನು ತಪ್ಪಿಸಲು ಯಾವ ಶಕ್ತಿಗಳಿಗೆ ಕೂಡ ಸಾಧ್ಯವಿಲ್ಲ. ಅದಕ್ಕೆ 2021ರ ವರ್ಷವು ಒಂದು ಬಲಿಷ್ಠವಾದ ಮೆಟ್ಟಿಲು ಆಗಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯ.

ರಾಜೇಂದ್ರ ಭಟ್ ಕೆ.---

1 COMMENT

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!