ಇಂದು ಭಗವದ್ಗೀತಾ ಜಯಂತಿ. ಹಾಗೆಯೇ ಸರ್ವೈಕಾದಶಿಯ ದಿನವೂ ಹೌದು. ಈ ದಿನವೂ ವಿಶೇಷವಾಗಿದೆ. ಮುಖ್ಯವಾಗಿ ಶ್ರೀಕೃಷ್ಣ ಪರಮಾತ್ಮನಿಂದ ಭಗವದ್ಗೀತೆಯಾಗಿ ಸೃಜಿಸಿದ ದಿನವಾಗಿದೆ. ಹಾಗಾಗಿ ಇಂದುಎಲ್ಲೆಡೆ ಶ್ರೀಮದ್ಭಗವದ್ಗೀತಾ ಜಯಂತಿ ಎಂದು ಆರಾಧಿಸಲ್ಪಡುತ್ತಿದೆ.
ಪರಮ ಪುರುಷ ಜಗದೊದ್ಧಾರಕ ಭಗವಂತನಾದ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶಿಸಿದ ತತ್ಸ್ವಸಾರಗಳುಳ್ಳ ವಚನಗಳುಇದಾಗಿದೆ. ಭಗವಂತನ ಶ್ರೀಮುಖದಿಂದಲೇ ನರನಾದ ಅರ್ಜುನನಿಗೆ ನಾರಾಯಣನಾದ ಶ್ರೀಕೃಷ್ಣನು ಉಪದೇಶಿಸಿದ ಗೀತೆಯಾದುದರಿಂದ ಇದು ಗೀತೋಪದೇಶವೂ ಹೌದು, ಭಗವಂತನಿಗೆ ಪ್ರಿಯವಾದ ಗೀತೆಯೂ ಇದಾಗಿರುವುದರಿಂದ ಭಗವದ್ಗೀತೆಯೆಂದೇ ಲೋಕದಲ್ಲಿ ಜನಜನಿತವಾಗಿದೆ. ಇದರಲ್ಲಿ ಒಟ್ಟು ಹದಿನೆಂಟು ಅಧ್ಯಾಯಗಳಿವೆ. ಈ ಭಗವದ್ಗೀತೆಯು ಏಳೂರು ಶ್ಲೋಕಗಳನ್ನು ಒಳಗೊಂಡಿದೆ. ವಿಶೇಷವಾದ ಮುಖ್ಯ ವಿಚಾರವೇನೆಂದರೆ ಇದರಲ್ಲಿ ಶ್ರೀ ಕೃಷ್ಣ ಪರಮಾತ್ಮನು 575 ಶ್ಲೋಕಗಳನ್ನು, ಅರ್ಜುನನು 83 ಶ್ಲೋಕಗಳನ್ನು, ಸಂಜಯನು 41ಶ್ಲೋಕಗಳನ್ನು, ದೃತರಾಷ್ಟ್ರನು ಹೇಳಿದ ಕೇವಲ ಒಂದು ಶ್ಲೋಕವು ಈ ಗೀತೆಯಲ್ಲಿದೆ. ಅದು ಗೀತೆಯ ಪ್ರಥಮ ಅಧ್ಯಾಯದಲ್ಲಿ ಅರ್ಜುನ ವಿಷಾದಯೋಗದಲ್ಲಿ ಪ್ರಥಮ ಶ್ಲೋಕವಾಗಿಯೇ ಇದೆ. ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವವಃ ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ಅಂದರೆ ಎಲೈ ಸಂಜಯ ! ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧಾಪೇಕ್ಷಿಗಳಾಗಿ ನೆರೆದಿರುವ ನನ್ನ ಮತ್ತು ಪಾಂಡುವಿನ ಪುತ್ರರು ಏನು ಮಾಡಿದರು ಎಂಬ ಶ್ಲೋಕಾರ್ಥವನ್ನು ಹೇಳುತ್ತಿದೆ.ಹಾಗಾಗಿ ಇದು ಮಹಾಭಾರತ ಯುದ್ಧದ ಒಂದು ಸಂದರ್ಭದಲ್ಲಿ ಹುಟ್ಟಿಕೊಂಡದ್ದು ಹೌದು.
ಪರಮ ಪುಣ್ಯ ಶ್ರೇಷ್ಠ ಕೃತಿಯು ಗಾತ್ರದಲ್ಲಿ ಕಿರಿದಾಗಿದ್ದರೂ ಇದಲ್ಲಿರುವ ವಿಚಾರಗಳು ಆಳ ಮತ್ತುವಿಸ್ತಾರವನ್ನೊಳಗೊಂಡ ಸದ್ವಿಚಾರಗಳಿವೆ. ದೇವ ಭಾಷೆಯೆನಿಸಿದ ಸಂಸ್ಕೃತ ಭಾಷೆಯಲಿ ಶ್ಲೋಕಗಳಿವೆ. ಹಾಗೆಯೇ ಎಲ್ಲರೂ ಓದಿ ತಿಳಿಯುವಂತಹ ಸರಳಾನುವಾದದಲ್ಲಿಯೂ ಇದೆ. ಇದು ಚತುರ್ಥ ವೇದಗಳ ಸಾರಗಳನ್ನೊಳಗೊಂಡ ಪರಮ ಪುಣ್ಯ ಶ್ರೇಷ್ಠ ಕೃತಿಯಾಗಿದೆ. ಈ ಗೀತೆಯು ಪರಮ ಕೃಪಾಳು ಶ್ರೀಕೃಷ್ಣಪರಮಾತ್ಮನು ಅರ್ಜುನನಿಗೆ ಬೋಧಿಸಿದ ನುಡಿಗಳಾದರೂ ಸಕಲ ಜೀವರಾಶಿಗಳಿಗೂ ಚೈತನ್ಯವನ್ನು ತುಂಬುವ ಮೌಲ್ಯಗಳನ್ನೊಳಗೊಂಡ ಪುಣ್ಯ ಸಂದೇಶಗಳ ಗೀತೆಯಾಗಿದೆ. ಇಂದು ಭಾರತ ದೇಶದಲ್ಲಿ ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ವೈದಿಕ ಪರಂಪರೆಯಿರುವಲ್ಲಿ ಈ ಗೀತೆಯ ಪ್ರವಚನಗಳು ನಡೆಯುತ್ತಲೇ ಇದೆ ಎನ್ನುವುದು ಗೀತೆಯ ಮಹತ್ವವನ್ನು ಸಾರುತ್ತಿದೆ. ಆ ಮೂಲಕ ಅಧ್ಯಾತ್ಮಚಿಂತನೆಗಳ ವಿಚಾರಗಳು ಜಗತ್ತಿನೆಲ್ಲಡೆ ಸಾರುತ್ತಿದೆ.
ಈ ಗೀತೆಯು ಕುರುಕ್ಷೇತ್ರದಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಕೃಷ್ಣದೇವನು ಆತ್ಮವಿಶ್ವಾಸವನ್ನು ತುಂಬುವ ಮೂಲಕ ಅವನಲ್ಲಿ ನವಚೈತನ್ಯವನ್ನೂ ಹಾಗೂ ಧರ್ಮತತ್ವಗಳು ಅವಿನಾಶಿಯಾಗಿ ಅಧರ್ಮಗಳು ವಿನಾಶಿಯಾಗುವಂತೆಯು ಮಾಡುವವನು ನೀನಾಗು ಹೇಳಿ ಎಂದು ಆತ್ಮಬಲವನ್ನು ತುಂಬಿದನು. ಹಾಗೆಯೇ ತನ್ನ ವಿಶ್ವರೂಪವನ್ನು ತೋರಿ ಧರ್ಮ ರಕ್ಷಣೆಯ ಪರಿಪಾಲನೆಗಾಗಿ ನಿನ್ನೊಂದಿಗೆಯೇ ನಾನಿರುವೆನು ಎಂದು ಆತ್ಮಬಲವನ್ನು ತುಂಬುತ್ತ ನುಡಿದ ಅಭಯದ ಮಾತುಗಳೇ ಭಗವದ್ಗೀತೆಯಾಗಿದೆ. ಈ ಗೀತೆಯಲ್ಲಿ ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ, ಭಕ್ತಿಯೋಗ ಮುಂತಾದ ಎಷ್ಟು ಸಾಧನೆಗಳು ತಿಳಿಸಲ್ಪಟ್ಟಿವೆಯೋ ಅವುಗಳಲ್ಲಿ ತಮ್ಮ ಶ್ರದ್ಧೆ, ರುಚಿ ಮತ್ತು ಯೋಗ್ಯತೆಗನುಗುಣವಾಗಿ ಯಾವ ಸಾಧನೆಯನ್ನು ಮಾಡಿದರೂ ಶೀಘ್ರವಾಗಿ ಮನುಷ್ಯ ಶ್ರೇಯಸ್ಸು ಎಂಬುದನ್ನು ತಿಳಿಸಿಕೊಡುತ್ತಿದೆ. ಇದು ಅರ್ಜುನ ಮೂಲಕ ಇಡೀ ಮನುಕುಲಕ್ಕೆ ಮನೋಬಲವನ್ನು ತುಂಬುವ ಅರ್ಥಪೂರ್ಣ ಸಂದೇಶವಾಗಿದೆ ಇವೆಲ್ಲವೂ ಶ್ಲೋಕರೂಪದಲ್ಲಿ ಇಂದು ನಮಗೆ ಭಗವದ್ಗೀತೆಯಲ್ಲಿ ದೊರೆಯುತ್ತಿದೆ.
ಇದನ್ನು ಐತಿಹಾಸಿಕ ಶಾಸ್ತ್ರವೆಂದೂ ಅಧ್ಯಾತ್ಮಚಿಂತನೆಗಳೆಂದೂ, ಮನಶಾಶ್ತ್ರವೆಂದೂ, ತತ್ತ್ವಶಾಸ್ತ್ರವೆಂದೂ, ಸಕಲ ವೇದ ಆಗಮಗಳ ಸಾರವೆಂದೂ, ಕರೆಯುತ್ತಾರೆ. ಇಲ್ಲಿ ಶ್ರೀಕೃಷ್ಣನಿಗೆ ಅರ್ಜುನನು ತನ್ನ ಪರಮ ಪ್ರಿಯ ಭಕ್ತನಾಗಿಯೂ ಪ್ರಿಯ ಸಖನಾಗಿಯೂ ಇರುವುದರಿಂದ ಅರ್ಜುನನಿಗೆ ಬೋಧಿಸುವುದರ ಮೂಲಕ ಸಕಲರಿಗೆ ಬೋಧಿಸಿದಂತಾಗಿದೆ. ಆದರೆ ಅರ್ಜುನನಿಗೆ ಯುದ್ಧವನ್ನು ಗೆಲ್ಲುವ ಎಲ್ಲಾ ಕೌಶಲ್ಯಗಳು ತಿಳಿದೇ ಇತ್ತು. ಆದರೆ ಯುದ್ಧದ ಒಳಮರ್ಮದ ಅವಶ್ಯಕತೆ ಏನೂ ಎಂಬುದನ್ನು ಭಗವಂತನೇ ತಿಳಿಸಿಕೊಟ್ಟನು ಅಷ್ಟೇ. ಹಾಗಾಗಿ ಸಾಧ್ಯ ಮತ್ತು ಸಾಧನಗಳ ಮೂಲಕ ಗುರಿ ಮುಟ್ಟುವುದೇ ಪರಮ ಸಾಧನೆಯು ಹೌದು. ಯತೋ ಧರ್ಮ ತತೋ ಜಯಃ, ಧರ್ಮೋರಕ್ಷತಿ ರಕ್ಷಿತಾಃ ಎನ್ನುವುದು ಧರ್ಮವೇ ಗೆಲ್ಲುವುದು, ಧರ್ಮವೇ ನಮ್ಮನ್ನು ರಕ್ಷಿಸುವುದು ಎನ್ನುವ ನೀತಿಯನ್ನು ತಿಳಿಸುವುದು ಈ ಭಗವದ್ಗೀತೆ. ಭೂಮಂಡಲದ ಮನುಲೋಕದಲ್ಲಿ ಸತ್ಕರ್ಮದಿಂದ ಸತ್ಸಂಗದಿಂದ ಬಾಳುವ ನರರು ಸತ್ ಚಿಂತನೆಗಳ ಮೂಲಕ ಸತ್ ಚಿತ್ ಆನಂದ ಸ್ವರೂಪನಾಗಿರುವ ಅಗಣಿತ ಮಹಿಮನಾದ ಶ್ರೀಕೃಷ್ಣಭಗವಂತನ ಕೃಪೆ ಪಾತ್ರರಾಗತ್ತಾ ಜೀವನ ಸಾರ್ಥಕ್ಯ ಹೊಂದುವರು. ಹಾಗಾಗಿ ಭಗವಂತನಲ್ಲಿ ಶರಣಾಗಿ ಶ್ರದ್ಧಾ ಭಕ್ತಿಗಳ ಸಹಿತ ಇದರ ಅಭ್ಯಾಸ ಮಾಡುವುದರಿಂದ ಇದರಮಹಿಮೆಯಿಂದ ಮುಂದೆ ಮೋಕ್ಷಪ್ರಾಪ್ತಿಯಾಗಬಲ್ಲರು.
ಈ ಸಂದರ್ಭದಲ್ಲಿ ನಾಡಿನೆಲ್ಲಡೆ ಭಗವದ್ಗೀತಾಭಿಯಾನವೂ ಸಪ್ತಾಹ ರೂಪದಲ್ಲಿ ವಿಶೇಷವಾಗಿ ಅಲ್ಲಲ್ಲಿ ನಡೆದು ಇಂದು ಸಂಪನ್ನಗೊಳುತ್ತಿವೆ. ಪರಮಾತ್ಮನಲ್ಲಶರಣಾಗಿ ಸಾಧನೆಯಲ್ಲಿ ತತ್ಪರರಾಗಬೇಕು. ನಾಶಯುತವಾದ ಕ್ಷಣಭಂಗುರವಾದ ಪ್ರಪಂಚದ ಅಶ್ವಾತ ಭೋಗಗಳನ್ನು ಅನುಭವಿಸುವುದರಲ್ಲಿಯೇ ತಮ್ಮ ಜೀವನದ ಅಮೂಲ್ಯ ಸಮಯ ಕಳೆದುಹೋಗಬಾರದೆಂಬ ಲೋಕ ಸತ್ಯವನ್ನು ಈ ಭಗವದ್ಗೀತೆಯು ತಿಳಿಸುತ್ತದೆ. ಈ ಗೀತಾ ಜಯಂತಿಯ ಶುಭದಿನವು ನಮಗೆಲ್ಲಾ ಶುಭದಾಯಕವಾಗಿರಲಿ ಭಗವದ್ಗೀತೆಯ ಪಠಣವೂ ಪ್ರವಚನವೂ ಕ್ಲೇಶವನ್ನೂ ಕ್ಲೀಶೆಯನ್ನು ದೂರಮಾಡಲಿ ಜಗದೋದ್ಧಾರನೂ ಅಪ್ರಮೇಯನೂ ಆದ ದೇವಶ್ರೀಕೃಷ್ಣನು ಸಕಲಜೀವರಾಶಿಗಳಿಗೂ ಚೈತನ್ಯವನ್ನು ತುಂಬಲಿ. ಜಗವು ನಲಿವಿನಿಂದ ಸುಖಶಾಂತಿಯಿಂದಿರಲಿ. ಎಲ್ಲರೂ ಮಾನವತೆಯ ಪ್ರೀತಿಯಿಂದ ಸುಖವಾಗಿ ಬಾಳುವಂತಾಗಲಿ.









































