ಇತಿಹಾಸ ತಿರುಚುವ ಕೃತ್ಯ ಸಲ್ಲದು : ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ

ಕಾರ್ಕಳ : ಕ್ರಿ.ಶ. 1545 ರಲ್ಲಿ ಭೈರವರಸು ವಂಶದ ಪಾಂಡ್ಯನಾಥ ರಾಜ ಆನೆಕೆರೆ ಬಸದಿಯನ್ನು ಕಟ್ಟಿಸಿರುತ್ತಾನೆ. ಅರಮನೆಯ ಆನೆಗಳಿಗೆ ಸ್ನಾನ ಇತ್ಯಾದಿಗಳ ಉದ್ದೇಶದಿಂದ 25 ಎಕರೆ ವಿಸ್ತೀರ್ಣದ ಕೆರೆಯನ್ನು ಪಾಂಡ್ಯನಾಥನು ನಿರ್ಮಿಸಿರುತ್ತಾನೆ. ಇಮ್ಮಡಿ ಭೈರವನ ಕಾಲದಲ್ಲಿ ನಿರ್ಮಾಣವಾದ ಸುಂದರವಾದ ಜಿನಆಲಯವನ್ನು ವೈಷ್ಣವ ಗುರುಗಳಿಗೆ ಸಮರ್ಪಣೆ ಮಾಡಿ, ತನ್ನ ಗುರುಗಳಿಗೆ ನೋವಾಗದಿರಲಿ ಎಂಬ ಉದ್ದೇಶದಿಂದ, ಚಿಕ್ಕ ಬೆಟ್ಟದ ಮೇಲೆ ಅತೀ ಮನೋಹರವಾದ ಚತುರ್ಮುಖ ಬಸದಿಯನ್ನು ನಿರ್ಮಾಣ ಮಾಡಲಾಗಿದೆ. ಹಾಗೆಯೇ ಕಾರ್ಕಳದ ವೀರ ಭೈರವರಸನ ಮಗನಾದ ರಾಮನಾಥನ ನೆನಪಿಗಾಗಿ ರಾಮ ಸಮುದ್ರವನ್ನು ನಿರ್ಮಾಣ ಮಾಡಲಾಯಿತು. ಇತರ ಧರ್ಮಗಳಿಗೂ ಸಂಬಂಧಿಸಿ ಅನೇಕ ದೇವಸ್ಥಾನ, ಚರ್ಚ್ ಮಸೀದಿಗಳಿಗೆ ಸ್ಥಳದಾನ ಮಾಡಿದ್ದಾರೆ. ಇದೀಗ ಕೆಲವು ಕಿಡಿಗೇಡಿಗಳು ಆನೆಕೆರೆ ಬಸದಿ ಮೊದಲು ನಮ್ಮ ಪೂಜಾಲಯವಾಗಿತ್ತು ಎಂದು ಅಸಂಬದ್ಧ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸುತ್ತಿರುವುದು ಸಾಮರಸ್ಯ ಬಾಂಧವ್ಯಕ್ಕೆ ಧಕ್ಕೆ ತರುವ ಕಾರ್ಯ. ಇತಿಹಾಸ ತಿರುಚುವ ಕೃತ್ಯ ಸಲ್ಲದು ಎಂದು ಕಾರ್ಕಳ ಜೈನ ಮಠದ ಸ್ವಸ್ತೀ ಶ್ರೀಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿರುತ್ತಾರೆ.

ಕಾನೂನು ಕ್ರಮ ಕೈಗೊಳ್ಳಬೇಕು- ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ

ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರ್ವಕವಾಗಿ ಇತಿಹಾಸ ತಿರುಚಿ ಹರಿಯಬಿಡುತ್ತಿರುವ ಕುತಂತ್ರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಗ್ರಹಿಸಿರುತ್ತಾರೆ. ಜೈನ ರಾಜರುಗಳು ಸರ್ವಧರ್ಮ ಸಹಿಷ್ಣುಗಳು ಹಾಗೂ ಪ್ರೋತ್ಸಾಹದಾಯಕರು. ಜೈನರು ಅನ್ಯ ಧರ್ಮಗಳ ಮೇಲೆ ಆಕ್ರಮಣ ಮಾಡಿದ ಉದಾಹರಣೆಯಿಲ್ಲ. ಜೈನರು ಇತರ ಧರ್ಮೀಯರ ಪೂಜಾಲಯ, ಮಂದಿರಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ ಎಂದು ಸ್ವಾಮೀಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೈನ ಸಮಾಜ ಖಂಡನೆ
ಸಾವಿರಾರು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಜೈನ ರಾಜರು ಎಲ್ಲಾ ಧರ್ಮಗಳನ್ನು ಗೌರವಿಸಿ, ಪೋಷಿಸಿ, ಸರ್ವ ಧರ್ಮ ಸಮನ್ವಯತೆ ಕಾಪಾಡಿಕೊಂಡು ಬಂದಿರುತ್ತಾರೆ. ಕಾರ್ಕಳದ ಇತಿಹಾಸವನ್ನು ನೋಡಿದಾಗಲೂ ಭೈರವರಸರೂ ಎಲ್ಲ ಧರ್ಮದ, ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕಾರ್ಕಳವನ್ನು ಕಟ್ಟಿ ಬೆಳೆಸಿದ್ದಾರೆ. ತಮ್ಮ ಸೀಮೆಯಲ್ಲಿ ಅನೇಕ ಬಸದಿ, ದೇವಸ್ಥಾನ, ಚರ್ಚ್‌, ಮಸೀದಿಗಳ ನಿರ್ಮಾಣಕ್ಕೆ ಸಹಕಾರ ನೀಡಿರುತ್ತಾರೆ. ಧಾರ್ಮಿಕ ಕೇಂದ್ರಗಳ ನಿರ್ವಹಣೆಗೆ ಭೂಮಿಯನ್ನೂ ಉಂಬಳಿ ಬಿಟ್ಟ ಇತಿಹಾಸವೂ ಇದೆ. ಪವಿತ್ರ ಸಾಮರಸ್ಯದ ಭೂಮಿಯಾದ ಕಾರ್ಕಳದಲ್ಲಿ ಧಾರ್ಮಿಕ – ಸಾಮಾಜಿಕ ಸಮನ್ವಯತೆಯನ್ನು ಹಾಳು ಮಾಡುವ ಉದ್ದೇಶದಿಂದ ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿರುವುದು ಇತ್ತೀಚೆಗೆ ಕಂಡುಬಂದಿದೆ. ಇದಕ್ಕೆ ನಿದರ್ಶನವೆಂಬಂತೆ ಕಾರ್ಕಳದ ಆನೆಕೆರೆ ಬಸದಿ ಜೈನರದ್ದಲ್ಲ, ಅದು ಹನುಮಂತ ದೇವಸ್ಥಾನವಾಗಿತ್ತು, ಅರಮನೆಯ ಆನೆಗಳು ನೀರು ಕುಡಿಯಲು ಮತ್ತು ಪಕ್ಷಿಗಳ ನೀರಡಿಕೆಗಾಗಿ ನಿರ್ಮಾಣವಾದ ಆನೆಕೆರೆ ಜೈನರದ್ದಲ್ಲ ಎಂದೂ, ಕಾರ್ಕಳ ಮತ್ತು ವೇಣೂರಿನ ಬಾಹುಬಲಿ ಕೆತ್ತಿರುವ ಐತಿಹಾಸಿಕ ಘಟನೆ ತಪ್ಪಿದೆಯೆಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದು ಜೈನ ಸಮಾಜದ ವಿವಿಧ ಸಂಘಗಳು, ಜೈನ ವಿದ್ವಾಂಸರು, ಇತಿಹಾಸಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಖಂಡಿಸಿರುತ್ತಾರೆ.

ಕುಕೃತ್ಯದ ಕಾರ್ಯ
ಕಾರ್ಕಳದ ನೈಜ ಇತಿಹಾಸವನ್ನು ತಿರುಚಿ ಬರೆದು, ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಟ್ಟು, ಮತ ಭೇಧ, ಜಾತಿ ವೈಷಮ್ಯ ಮೂಡಿಸಿ, ಸಮಾಜದ ಶಾಂತಿಗೆಡಿಸುವ ಕಾರ್ಯವಾಗುತ್ತಿದೆ. ರಾಷ್ಟ್ರಹಿತದ ಕಾರ್ಯ ಮಾಡುತ್ತಿರುವ ಹಿಂದೂ ಸಂಘಟನೆಯ ಹೆಸರಿನಲ್ಲಿ, ಆ ಸಂಘಟನೆಯ ಧ್ಯೇಯಗಳಿಗೂ ಮಸಿ ಬಳಿಯುವ ರೀತಿಯಲ್ಲಿ, ಉದ್ದೇಶಪೂರ್ವಕವಾಗಿ ಜೈನ ಧರ್ಮವನ್ನು ಗುರಿಯಾಗಿಸಿಕೊಂಡು ಜೈನರ ಬಸದಿಗಳು ತಮ್ಮವೆಂದು ಪ್ರತಿಪಾದಿಸುವ ಕುಕೃತ್ಯದ ವಿರುದ್ದ ಜೈನ ಸಮಾಜ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.



































































































error: Content is protected !!
Scroll to Top