ಕಾರ್ಕಳ: ಎಲ್ಲ ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆಯಿರುವುದು. ಅದಕ್ಕೆ ಇಂತಹದೆ ಕ್ಷೇತ್ರ ಎಂಬುದಿಲ್ಲ. ಕೆಲವರು ಒಂದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರಾದರೆ ಇನ್ನು ಕೆಲವರು ಹತ್ತು ಹಲವು
ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮಿಂಚುತ್ತಾರೆ. ಅವರಿಗೆ ಬಹುಮುಖ ಪ್ರತಿಭೆ ಎಂಬ ವಿಶೇಷಣ. ಇಂತಹ ಬಹುಮುಖ ಸಾಧಕರ ಸಾಲಿನಲ್ಲಿ ಕಾರ್ಕಳ ಶಿವತಿಕೆರೆ ವರ್ಧಮಾನ್ ಶಿಕ್ಷಣ ಸಂಸ್ಥೆಯ ಯು.ಕೆ.ಜಿ. ವಿದ್ಯಾರ್ಥಿನಿ ಅನ್ವಿ ಕೋಟ್ಯಾನ್ ಎಲ್ಲರಿಗಿಂತ ಮುಂದೆ ನಿಲ್ಲುತ್ತಾಳೆ.
ಇನ್ನೂ ಯು.ಕೆ.ಜಿ.ಯಲ್ಲಿ ಕಲಿಯುತ್ತಿರುವ ಪುಟಾಣಿ ಅನ್ವಿ ಪರಿಣತ ಈಜುಪಟುವಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಸಾಂಸ್ಕೃತಿಕ ಕ್ಷೇತ್ರದ ಹಲವು ಮಜಲುಗಳಲ್ಲಿ ತೊಡಗಿಸಿಕೊಂಡು ಚುರುಕಿನ ನಡೆ, ಪಟಪಟ ಮಾತುಗಳಿಂದ ಪ್ರೇಕ್ಷಕರ ಮನಸ್ಸನ್ನು ತಟ್ಟುತ್ತಿದ್ದಾಳೆ. ಕೃಷ್ಣವೇಷ ಸ್ಪರ್ಧೆಗಳಿಂದ ಹಿಡಿದು, ಕೃಷ್ಣ ಕಥಾ ಸ್ಪರ್ಧೆ, ಛದ್ಮವೇಷ ಸ್ಪರ್ಧೆಗಳಲ್ಲಿ ಈಗಾಗಲೇ ತನ್ನ ಛಾಪು ಮೂಡಿಸಿದ್ದಾಳೆ.
ವಿಶೇಷವಾಗಿ ಮುದ್ದು ಶಾರದೆ ಸ್ಪರ್ಧೆಯಲ್ಲಿ ಗಮನ ಸೆಳೆಯುವ ಅನ್ವಿ ಭವಿಷ್ಯದಲ್ಲಿ ಉತ್ತಮ ಕಲಾವಿದೆಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾಳೆ.
ಈಜುಪಟು ಆಗಿ ಅನ್ವಿ ಸಾಧನೆ ಬೆರಗು ಮೂಡಿಸುತ್ತಿದೆ. 60 ಅಡಿ ಆಳ ಇರುವ ಸಾಣೂರು ಮಠದ ಕೆರೆಯಲ್ಲಿ ಸರಾಗವಾಗಿ ಮೀನಿನ ಹಾಗೆ ಈಜುತ್ತಾಳೆ. ನಿರಂತರವಾಗಿ ದಣಿವು ಇಲ್ಲದೆ 30 ನಿಮಿಷ ಅವಳು ಈಜಬಲ್ಲಳು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅನ್ವಿ ಮುಂದಿನ ದಿನಗಳಲ್ಲಿ ಬಹುದೊಡ್ಡ ಈಜುಪಟುವಾಗಿ ಮೂಡಿಬರುವ ಪ್ರತಿಭೆಯನ್ನು ಈಗಾಗಲೇ ಸಾಬೀತು ಪಡಿಸಿದ್ದಾಳೆ. ತಂದೆ ಸಾಣೂರು ಅಶೋಕ್ ಕೋಟ್ಯಾನ್, ತಾಯಿ ಸೌಮ್ಯ ಕೋಟ್ಯಾನ್ ಆಕೆಯ ಮೇಲೆ ಭರವಸೆ ಇಟ್ಟು ಆಕೆಯನ್ನು ಬೆಳೆಸುತ್ತಿದ್ದಾರೆ.
























