ಬೆಳಕು ಎಂದಾಕ್ಷಣ ಮನಃಪಟಲದಲ್ಲಿ ಬರುವ ಚಿತ್ರಣ ದೀಪ. ಎಣ್ಣೆಯು ಬತ್ತಿಯೊಡಗೂಡಿ ತಾನುರಿದು ಜಗಕೆ ಬೆಳಗಕು ನೀಡುವ ದಿವ್ಯಜ್ಯೋತಿಯೇ ದೀಪ. ಮನಸ್ಸಿನ ಅಂಧಕಾರವ ದೂರ ಸರಿಸಿ ಸುಜ್ಞಾನದ ದೀವಿಗೆಯ ಬೆಳಗಿಸುವ ಮಹಾನ್ ಶಕ್ತಿ.
ಸಾಲು ಸಾಲು ಹಣತೆಗಳನ್ನು ಹಚ್ಚಿ ಅದರ ಬೆಳಕಿನಲ್ಲಿ ಸಂಭ್ರಮಿಸುವ ಹಬ್ಬವೇ ದೀಪಾವಳಿ. ಬಾಳು ತುಂಬಾ ಬೆಳಕು ಚೆಲ್ಲುವ ಸಡಗರದ ಹಬ್ಬ.ದೀಪಾವಳಿಯು ಮನೆ ಮನದಲ್ಲಿರುವ ಅಂಧಕಾರವನ್ನು ದೂರಸರಿಸಿ ಬಾಳಲ್ಲಿ ಪ್ರೀತಿ ಸ್ನೇಹದ ಬೆಳಕನ್ನು ಮೂಡಿಸಿ ಹರುಷದ ಹೊಂಗಿರಣ ಬೀರುವ ಹಬ್ಬವಾಗಿದೆ. ದೀಪಾವಳಿ ಎಂದಾಕ್ಷಣ ಮೇಲ್ನೋಟಕ್ಕೆ ದೀಪದ ಸಾಲುಗಳು, ಪೂಜೆ , ಪಟಾಕಿಗಳ ಅಬ್ಬರ, ಬಗೆಬಗೆ ಭಕ್ಷ್ಯ ಭೋಜ್ಯಗಳ, ಸಿಹಿ ತಿಂಡಿಗಳ ಮಹಾಪೂರವೇ ಗೋಚರಿಸುತ್ತದೆ ನಿಜ.ಅದರ ಜೊತೆಗೆ ನಮ್ಮೊಳಗೆ ಅಡಗಿದ, ನಮಗರಿವಿಲ್ಲದ ಸಣ್ಣ ಪುಟ್ಟ ಅಂಧಕಾರವನ್ನು ಹೊರದೂಡಿ ಸಾಮರಸ್ಯದ ಬೆಳಕನ್ನು ಬೆಳಗಿಸಿದಾಗ ದೀಪಾವಳಿಯ ಸೊಬಗು ಇಮ್ಮಡಿಯಾಗುತ್ತದೆ.
ಒಂದು ಸಣ್ಣ ದೀಪದಲ್ಲಿ ಹಚ್ಚಿದ ಬತ್ತಿ ಉರಿದು ಹೇಗೆ ಬೆಳಕನ್ನು ಹರಡುವುದೋ ಅದೇ ರೀತಿ ನಾವು ನಮ್ಮತನದಲ್ಲಿ ಸದಾ ಕಾಲ ಸನ್ನಡತೆಯ ಬತ್ತಿಯನ್ನು ಬೆಳಗಿಸಿ ಒಳ್ಳೆತನ ಎಂಬ ಬೆಳಕಿನ ಸೊಗಡನ್ನು ಜಗಕ್ಕೆ ಸಾರಲು ಪ್ರಯತ್ನಿಸಬೇಕು.
ಸದಾ ನಮ್ಮ ಮನದಂಗಳದಲ್ಲಿ ದೀಪ ಹಚ್ಚಿ “ದೀಪ ದೇವಿ ನಮಸ್ತುಭ್ಯಂ ಮಂಗಲೇ ಪಾಪನಾಶಿನಿ” ಎಂದು ಸ್ತುತಿಸುವುದು ದೀಪಾವಳಿಯ ಸಂದೇಶವಾಗಿದೆ.
ಸುಜ್ಞಾನದ ಬೆಳಕಿನಲ್ಲಿ ಅಹಂಕಾರ, ಅಜ್ಞಾನವೆಂಬ ತಮವನ್ನು ಸದಾ ದೂರ ಸರಿಸುವ ಪ್ರಯತ್ನ ಮಾಡೋಣ. ಈ ವರ್ಷದ ದೀಪಾವಳಿಯ ಸುದಿನದಂದು ಸಂತೋಷ ಸಂಭ್ರಮದಿಂದ ದೀಪ ಪ್ರಜ್ವಲಿಸಿ ಸೂರ್ಯನಂತೆ ವಿಶ್ವಕ್ಕೆ ಬೆಳಕು ನೀಡಲು ನಮಗೆ ಅಸಾಧ್ಯವಾದರೂ,ಆತನ ಒಂದು ಹೊಂಗಿರಣದಂತೆ ನಮ್ಮ ಸದಾಶಯದ ಬೆಳಕನ್ನು ಇನ್ನೊಬ್ಬರ ಬಾಳು ಹಸನುಗೊಳಿಸಲು ಶ್ರಮಿಸೋಣ.
ಸವಿತಾ (ಪೆನ್ ಟೀಮ್ ಶಿಕ್ಷಕಿ)

ದೀಪದಿಂದ ದೀಪವ ಹಚ್ಚ ಬೇಕು ಮಾನವ ದೀಪದಿಂದ ದೀಪಹಚ್ಚುವ