ದಿಲ್ಲಿ, ಅ.1:ಹತ್ತು ವರ್ಷಗಳ ಬಳಿಕ ದೇಶದಲ್ಲಿ ಇದೇ ಮೊದಲ ಬಾರಿ ದೀರ್ಘಾವಧಿ ಸರಾಸರಿಯ ಅನುಸಾರ ಸತತ ಎರಡನೇ ಸಲ ಶೇ.100ಕ್ಕೀಂತ ಹೆಚ್ಚು ಮಳೆಯಾಗಿದೆ. ಈ ಸಲ ಶೆ.8.7 ಹೆಚ್ಚುವರಿ ಮಳೆಯಾಗಿದ್ದು, ವರುಣ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿ ವಿದಾಯ ಹೇಳಿದ್ದಾನೆ.
ಭಾರತೀಯ ಹವಾಮಾನ ಇಲಾಖೆ ಮುಂಗಾರು ಹಿಂದೆಗೆತವನ್ನು ಘೋಷಿಸಿದ್ದು, ಈ ಸಲದ ಮಳೆ ನಿರೀಕ್ಷೆಗಿಂತ ಉತ್ತಮವಾಗಿತ್ತು ಎಂದಿದೆ. 88 ಸೆ.ಮೀ. ಭಾರತದ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣ. ಕಳೆದ ವರ್ಷ ದಾಖಲೆಯ ಶೆ.110 ಮಳೆಯಾಗಿತ್ತು. ಇದು ಕಾಲು ಶತಮಾನದಲ್ಲಿ ಸುರಿದ ಗರಿಷ್ಠ ಮಳೆ.
ಕಳೆದ 30 ವರ್ಷಗಳಲ್ಲಿ ಸತತವಾಗಿ ಶೇ. 105ಕ್ಕಿಂತ ಹೆಚ್ಚು ಮಳೆಯಾಗಿರಲಿಲ್ಲ.ಆದರೆ ಕಳೆದ ಎರಡು ವರ್ಷಗಳಲ್ಲಿ ವರುಣ ದೇವ ದೇಶಕ್ಕೆ ಧಾರಾಳ ಕೃಪೆ ತೋರಿಸಿದ್ದಾನೆ.

ವಾಯುಭಾರ ಕುಸಿತ ಕಾರಣ
ಈ ಸಲ ಹಲವು ಸಲ ಮುಸಲಧಾರೆ ಮಳೆಯಾಗಲು ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಕಾರಣ.ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆ ಜುಲೈ ತಿಂಗಳಲ್ಲಿ ಆದ ಕೊರತೆಯನ್ನು ತುಂಬಿಸಿಕೊಟ್ಟಿದೆ.
ಆಗಸ್ಟ್‌ನಲ್ಲಿ 32 ಸೆ.ಮೀ. ಮಳೆಯಾಗಿದ್ದು, ಇದು ಸರಾಸರಿಗಿಂತ ಶೆ.26 ಹೆಚ್ಚುವರಿಯಾಗಿತ್ತು. ಉತ್ತರ ಭಾರತದಿಂದಲೂ ಮುಂಗಾರು ಹಿಂದೆಗೆಯುವ ಪ್ರಕ್ರಿಯೆ ಶುರುವಾಗಿದೆ. ಈ ತಿಂಗಳ ಮಧ್ಯಭಾಗದ ಬಳಿಕ ಹಿಂಗಾರು ಮಾರುತ ಬೀಸತೊಡಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

































































