ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳ ಕುರಿತು ಪುಂಖಾನುಪುಂಖ ಟೀಕೆಗಳು ಬರುತ್ತಿದೆ. ಇಲ್ಲಿ ಸರಿ ತಪ್ಪುಗಳ ವಿಮರ್ಶೆಗಿಂತಲೂ ಈ ಸಮಸ್ಯೆ ಇಷ್ಟೊಂದು ಕ್ಲಿಷ್ಟಕರ ಸ್ಥಿತಿಗೆ ಬರಲು ಕಾರಣ ಹುಡುಕುವ ಮತ್ತು ಮುಂದಿನ ದಿನಗಳಲ್ಲಾದರೂ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಸೂಕ್ತ ಯೋಜನೆಗಳನ್ನು ರೂಪಿಸುವತ್ತ ಗಂಭೀರವಾಗಿ ಚಿಂತಿಸಲು ಇದು ಸಕಾಲ.
ಬ್ರಿಟಿಷರ ಆಡಳಿತದ ಕಾಲದಲ್ಲಿ, ಸನಾತನ ಭಾರತೀಯ ಗುರುಕುಲ ಪದ್ಧತಿಯು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾದ ಕಾರಣ ಒಟ್ಟು ಶಿಕ್ಷಣ ಪದ್ಧತಿಯೇ ಬದಲಾಯಿತು. ಆದರೂ ಆರಂಭದ ದಿನಗಳಲ್ಲಿ ಸರಕಾರಿ ಶಾಲೆಗಳು ಮಾತ್ರವೇ ಇದ್ದು, ಅಲ್ಲೊಂದು ಇಲ್ಲೊಂದು ಖಾಸಗಿ ಶಾಲೆಗಳಿದ್ದುದರಿಂದ ದೊಡ್ಡ ವ್ಯತ್ಯಾಸ ಕಾಣುತ್ತಿರಲಿಲ್ಲ. ಕ್ರಮೇಣ ಔದ್ಯೋಗಿಕ-ವ್ಯಾವಹಾರಿಕ ಜಗತ್ತು ವಿಸ್ತಾರಗೊಂಡಂತೆ, ವಿದ್ಯಾಭ್ಯಾಸದ ಗುಣಮಟ್ಟವನ್ನು ವಿಶ್ವದರ್ಜೆಗೇರಿಸುವ ಅನಿವಾರ್ಯತೆ (?) ತಲೆದೋರಿತು. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಶಿಕ್ಷಣದಂತಹ ಪವಿತ್ರ ಕ್ಷೇತ್ರ ವ್ಯಾಪಾರೀಕರಣಕ್ಕೆ ಒಳಗಾಗಿ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿತು. ಅಲ್ಲಿಂದೀಚೆಗೆ ಇದು ವ್ಯಾಪಾರವೆಂಬಂತೆ ಬದಲಾಗಿದೆ ಎಂಬುದು ಟೀಕೆಗಳ ಸಾರಾಂಶ. ಇದಿಷ್ಟು ಹೊರನೋಟಕ್ಕೆ ಕಾಣುವ ಚಿತ್ರಣವಾದರೆ ಇದರ ಆಂತರಿಕ ಸಮಸ್ಯೆಗಳ ಕುರಿತಂತೆ ಇಣುಕಿ ನೋಡುವ ಪ್ರಯತ್ನವಿಲ್ಲಿದೆ.
ಕೊರೋನಾ ಸಾಂಕ್ರಾಮಿಕದ ಸಂಕೀರ್ಣ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಗೊಂದಲಗಳುಂಟಾಗಿವೆ. ಶಾಲಾರಂಭದ ಕುರಿತ ದ್ವಂದ್ವ ಒಂದೆಡೆಯಾದರೆ, ಶಾಲೆ ಆರಂಭವಾಗದಿದ್ದರೂ ದುಬಾರಿ ಶುಲ್ಕವನ್ನು ವಸೂಲಿ ಮಾಡುವ ಆಪಾದನೆ ಇನ್ನೊಂದೆಡೆ. ಆನ್ ಲೈನ್ ತರಗತಿಯ ಸಾಧಕ ಬಾಧಕಗಳ ಚರ್ಚೆ ಮತ್ತೊಂದೆಡೆ. ಕೆಲವರು ಶುಲ್ಕ ವಸೂಲಿ ತಪ್ಪೆಂದರೆ, ಮಕ್ಕಳ ಆರೋಗ್ಯದ ಬಗ್ಗೆ ಸರಕಾರಕ್ಕೆ ಕಾಳಜಿಯಿಲ್ಲ, ಖಾಸಗಿ ಶಾಲೆಗಳ ಆಡಳಿತದ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ ಎಂದೆಲ್ಲಾ ಆಪಾದನೆ ಮಾಡುತ್ತಾರೆ. ವಾಸ್ತವದಲ್ಲಿ ಸರಕಾರ ಶಾಲೆಗಳ ಆರಂಭಕ್ಕೆ ಅವಸರ ಮಾಡುತ್ತಿದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿ. ಶುಲ್ಕ ವಸೂಲಿಗೆ ನಿರ್ಬಂಧ ಹೇರಿ ಸರಕಾರ ಸುತ್ತೋಲೆಯನ್ನೂ ಹೊರಡಿಸಿದೆ. ಆದರೆ ಶುಲ್ಕ ಪಾವತಿ ಪೋಷಕರ ಮತ್ತು ಶಾಲಾ ಆಡಳಿತದ ನಡುವಿನ ವಿಷಯ. ಶುಲ್ಕ ಪಾವತಿ ಬಗ್ಗೆ ಸರಕಾರವನ್ನು ದೂಷಿಸುವ ಪೋಷಕರು, ಶಾಲಾ ಆಡಳಿತದ ಒತ್ತಡಕ್ಕೆ ಮಣಿಯದೆ ಪಾವತಿ ಮಾಡಲು ನಿರಾಕರಿಸುವ ಧೈರ್ಯವನ್ನೇಕೆ ಮಾಡಬಾರದು? ಏಕೆಂದರೆ ಮಕ್ಕಳ ಭವಿಷ್ಯದ ಭಯ, ನಾಳೆ ಶಾಲೆಯಲ್ಲಿ ಪ್ರವೇಶ ಸಿಗದೇ ಹೋದರೆ ಎಂಬ ಆತಂಕ ಇತ್ಯಾದಿ.
ಆನ್ಲೈನ್ ತರಗತಿಗಳಿಗೆ ಮೊಬೈಲ್, ಅಂತರ್ಜಾಲ ಸಂಪರ್ಕ ಮೊದಲಾದವುಗಳ ಬಗ್ಗೆ ಟೀಕಿಸುವವರು ಸರಕಾರಿ ಶಾಲೆಯ ವಿದ್ಯಾರ್ಥಿಗಳಲ್ಲ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳು. ಸರಕಾರಿ ಶಾಲೆಗಳಲ್ಲಿ ಆ ಲೈನ್ ತರಗತಿ ಮಾಡುವ ಬಗ್ಗೆ ಸರಕಾರ ಯಾವುದೇ ಆದೇಶ ನೀಡಿಲ್ಲ. ಆದರೆ ಮುಖ್ಯ ವಿಷಯ ಅದಲ್ಲ. ಸರಕಾರಿ ಶಾಲೆಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಸಿಬಂದಿ ನೇಮಕಾತಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾದ ಕಾರಣಕ್ಕೆ ಖಾಸಗಿ ವಿದ್ಯಾಸಂಸ್ಥೆಗಳು ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಬೆಳೆಯಲು ಕಾರಣವಾಯಿತು.
ಸೌಲಭ್ಯ ಒದಗಿಸಲು ವಿಫಲವಾದ ಮಾತ್ರಕ್ಕೆ ಸರಕಾರದ ಕ್ರಮವನ್ನು ಪ್ರಶ್ನಿಸದೆ ಖಾಸಗಿ ಸಂಸ್ಥೆಗಳತ್ತ ಮುಖಮಾಡಿರುವುದು ಪೋಷಕರ ತಪ್ಪು. ಸರಕಾರಿ ಶಾಲೆಗಳಿಗೆ ಮಾಡುವ ವೆಚ್ಚ ನಾಗರಿಕರು ಪಾವತಿಸುವ ತೆರಿಗೆ ರೂಪದ ಪರೋಕ್ಷ ಶುಲ್ಕವಾದರೆ, ಖಾಸಗಿ ಶಾಲೆಗಳಿಗೆ ಪಾವತಿಸುವ ಶುಲ್ಕ, ದೇಣಿಗೆ ಇತ್ಯಾದಿ ಪ್ರತ್ಯಕ್ಷ ತೆರಿಗೆ ಎಂದು ವ್ಯಾಖ್ಯಾನಿಸಬಹುದು.
ಇದಿಷ್ಟು ಗತಕಾಲದ ಕತೆಯಾದರೆ, ಕೊರೊನಾ ಸಾಂಕ್ರಾಮಿಕದ ನಂತರದ ವ್ಯಥೆ ಹೀಗಿದೆ: ಸರ್ಕಾರದ ಶಾಲೆಗಳಿಗೆ ಅನ್ವಯಿಸಿ, ವಿದ್ಯಾಂಗ ಇಲಾಖೆಯು ದಿನಾಂಕ 4.8.2020ರಂದು ಸುತ್ತೋಲೆಯೊಂದನ್ನು ಹೊರಡಿಸಿ, “ವಿದ್ಯಾಗಮ” ನಿರಂತರ ಕಲಿಕಾ ಕಾರ್ಯಕ್ರಮದ ಮಾರ್ಗದರ್ಶಿ ಸೂತ್ರಗಳನ್ನು ನಿಗದಿಪಡಿಸಿದೆ. ಇದರಲ್ಲಿ ಆನ್ ಲೈನ್ ಪಾಠಗಳ ಬಗ್ಗೆ ಹೆಚ್ಚಿನ ಒತ್ತು ಕೊಡದೆ, ಪರ್ಯಾಯ ಮಾರ್ಗಗಳ ಬಗ್ಗೆ ವಿವರವಾಗಿ ತಿಳಿಸಿದೆ. ಇಂತಹ ಕ್ರಮಗಳನ್ನು ಖಾಸಗಿಯವರೂ ಅಳವಡಿಸುವ ಬಗ್ಗೆ ಯೋಚಿಸಬಾರದೇಕೆ?
ಸ್ಥಾಪನೆ ಮತ್ತು ನಿರ್ವಹಣೆಯ ಬಂಡವಾಳದ ಮರುಪಾವತಿಗೆ ಶುಲ್ಕ ಪಾವತಿ ಅನಿವಾರ್ಯವೆಂಬ ಮಾಲೀಕರ ವಾದ ಸರಿಯಿರಬಹುದಾದರೂ ಇದೆಲ್ಲದಕ್ಕೂ ಹೊರತಾದ, ನೋವಿನ ಸಂಗತಿಯೊಂದಿದೆ. ಅದೇ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ದುಃಸ್ಥಿತಿ. ಖಾಸಗಿ ಸಂಸ್ಥೆಗಳಲ್ಲಿ ಬಲವಂತವಾಗಿ ಶುಲ್ಕ ವಸೂಲಿ ಮಾಡುತ್ತಾರೆಂಬ ಆಪಾದನೆ ನಿಜವಿರಬಹುದು, ಕೆಲವು ಸಂಸ್ಥೆಗಳಲ್ಲಿ ಇದು ಸಾಧ್ಯವಾಗದೇ ಇರಬಹುದು. ವ್ಯವಹಾರವೆಂದರೆ ಲಾಭನಷ್ಟಗಳು ಸ್ವಾಭಾವಿಕ. ಆದರೆ ನಿನ್ನೆಯವರೆಗೆ ಶಿಕ್ಷಣ ಸಂಸ್ಥೆಯ ಉನ್ನತಿಗಾಗಿ ದುಡಿದು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂಬುದನ್ನು ಮರೆಯಬಾರದು. ಅವರು ಮಾಡಿದ ಕೆಲಸಕ್ಕೆ ವೇತನ ಪಡೆದಿರಬಹುದು, ಆದರೆ ಸಂಸ್ಥೆಯ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಮರೆತು ಏಕಾಏಕಿ ಉದ್ಯೋಗದಿಂದ ವಜಾ ಮಾಡಿದ್ದು ಸರ್ವಥಾ ಸಮರ್ಥನೀಯವಲ್ಲ. ಎಲ್ಲವೂ ಸರಿಯಿದ್ದಾಗ ಖಾಸಗಿ ವಿದ್ಯಾ ಸಂಸ್ಥೆಯ ಆಡಳಿತ, ವಿದ್ಯಾರ್ಥಿಗಳಿಂದ ಇಡೀ ವರ್ಷದ ಶುಲ್ಕ ವಸೂಲಿ ಮಾಡಿದರೂ ಅರೆಕಾಲಿಕ ನೆಲೆಯಲ್ಲಿರುವ ಶಿಕ್ಷಕರಿಗೆ ವಾರ್ಷಿಕ ರಜಾದಿನಗಳ ವೇತನ ಪಾವತಿಸದಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಹೀಗಿರುವಾಗ ಈಗ ಏಕಾಏಕಿ ಉದ್ಯೋಗದಿಂದ ವಜಾ ಮಾಡಲ್ಪಟ್ಟ ಶಿಕ್ಷಕರು ತುತ್ತು ಅನ್ನಕ್ಕಾಗಿ ಪಡುತ್ತಿರುವ ಕಷ್ಟಗಳ ಬಗ್ಗೆ, ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಬರುತ್ತಿರುವ ವರದಿಗಳು ನಿಜಕ್ಕೂ ಶೋಚನೀಯ. ತರಗತಿಗಳು ನಿಂತು ಹೋದ ಕಾರಣಕ್ಕೆ ಸಂಸ್ಥೆಗೆ ಬರುವ ಆದಾಯ ಕಡಿಮೆಯೆಂಬುದು ಸರಿಯಿರಬಹುದು, ಹಾಗಂತ ಎಲ್ಲಾ ವಿದ್ಯಾ ಸಂಸ್ಥೆಗಳ ಮಾಲೀಕರು ಬಡವರಲ್ಲ.
ಎಲ್ಲರೂ ಕೇವಲ ವಿದ್ಯಾರ್ಥಿಗಳು ನೀಡುವ ಶುಲ್ಕ ಮತ್ತು ದೇಣಿಗೆಯನ್ನು ಮಾತ್ರ ಅವಲಂಬಿಸಿಲ್ಲ. ಏನೇ ಆದರೂ ಪರಿಸ್ಥಿತಿ ಇಂದಲ್ಲ ನಾಳೆ ಸರಿಯಾಗಿಯೇ ಆಗುತ್ತದೆ. ಅಲ್ಲಿಯ ತನಕ ಶಿಕ್ಷಕರನ್ನು ಸಂಸ್ಥೆಯ ಆಸ್ತಿಯೆಂಬಂತೆ ಪರಿಗಣಿಸಿ ಅವರ ಕನಿಷ್ಟ ಅವಶ್ಯಕತೆಯನ್ನು ನಿಭಾಯಿಸಲು ಬೇಕಾದಷ್ಟು ವೇತನ ಪಾವತಿಸಬೇಕು. ಸರಕಾರ ನೇರವಾಗಿ ಇದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಾಗದಿದ್ದರೂ ಕನಿಷ್ಟ ಈಗ ಇರುವ ಕಾನೂನಿನಂತೆ ಅಥವಾ ಸೂಕ್ತ ತಿದ್ದುಪಡಿ ಮೂಲಕವೋ ಶಿಕ್ಷಕರ ಹಿತಾಸಕ್ತಿ ಕಾಯುವುದು ಇಂದಿನ ತುರ್ತು ಅಗತ್ಯ. ಆದರೆ ಹಾಗೆ ಮಾಡುವುದಕ್ಕಿರುವ ದೊಡ್ಡ ತೊಡಕೆಂದರೆ, ಎಲ್ಲಾ ಸಂಸ್ಥೆಗಳು ಅಲ್ಲದಿದ್ದರೂ ಬಹುತೇಕ ಸಂಸ್ಥೆಗಳ ಮಾಲೀಕತ್ವದ ಹಿಂದಿರುವುದು ಒಂದೋ ರಾಜಕೀಯ ನೇತಾರರು ಅಥವಾ ರಾಜಕೀಯ ಬೆಂಬಲ ಇರುವ ಉದ್ದಿಮೆದಾರರು. ಇದು ಪುನರಾವರ್ತನೆ ಆಗಬಾರದೆಂದಿದ್ದರೆ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸಮಾನಾಂತರವಾಗಿ ಬಲಪಡಿಸಲು ಸರಕಾರದ ಜೊತೆಗೆ ವಿದ್ಯಾರ್ಥಿಗಳ ಪೋಷಕರೂ ಪ್ರಾಮಾಣಿಕವಾಗಿ ಕೈಜೋಡಿಸಬೇಕು.
★ಮೋಹನದಾಸ ಕಿಣಿ, ಕಾಪು