ಬೆಂಗಳೂರು: ದುಬಾರಿ ಬೆಲೆ, ಕಾಳಸಂತೆ ಮಾರಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ರೆಮ್ಡೆಸಿವಿರ್ ಸರಬರಾಜು ಮಾಡುವ ಕುರಿತು ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಕರ್ನಾಟಕದಲ್ಲಿ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ನಡೆದ ಕೋವಿಡ್-19 ಟಾಸ್ಕ್ ಫೋರ್ಸ್ ಸಭೆಯಲ್ಲಿ ಕೊರೋನಾ ವೈರಸ್ ಸೋಂಕು ನಿಯಂತ್ರಣ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪ್ರಮುಖವಾಗಿ ಕೊರೋನಾ ಸೋಂಕು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಮೇಲುಗೈ ಸಾಧಿಸಿರುವ ರೆಮ್ಡೆಸಿವಿರ್ ಸಂಬಂಧ ಸರ್ಕಾರ ನಿರ್ಣಯ ಕೈಗೊಂಡಿದ್ದು, ಕಾಳಸಂತೆಯಲ್ಲಿ ದುಬಾರಿ ದರದಲ್ಲಿ ಮಾರಾಟವಾಗುವುದನ್ನು ತಪ್ಪಿಸಲು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ರೆಮ್ಡೆಸಿವಿರ್ ಲಸಿಕೆ ಸರಬರಾಜು ಮಾಡಲು ನಿರ್ಧರಿಸಿದೆ. ಈಗಾಗಲೇ ಕೋರೋನಾ ಸೋಂಕಿತರಿಗೆ ಹೆಚ್ಚುವರಿ ಔಷಧಿಯಾಗಿ ರೆಮ್ಡೆಸಿವಿರ್ ನೀಡಲು ಐಸಿಎಂಆರ್ ಅನುಮತಿ ನೀಡಿದ್ದು, ಇದೇ ಕಾರಣಕ್ಕಾಗಿ ರೆಮ್ಡೆಸಿವಿರ್ ಲಸಿಕೆಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗಿದೆ.