ಶ್ರೀನಗರ : ಕಾಶ್ಮೀರದಲ್ಲಿ ಭದ್ರತಾ ಪಡೆ ಮತ್ತು ಉಗ್ರಗಾಮಿಗಳ ನಡುವೆ ಉತ್ತೊಂದು ಗುಂಡಿನ ಕಾಳಗ ನಡೆದಿದೆ. ಪಾಕಿಸ್ತಾನ ಪ್ರೇರಿತ ಉಗ್ರಗಾಮಿಗಳ ಅಟ್ಟಹಾಸವನ್ನು ಸದೆ ಬಡಿಯುವ ಕಾರ್ಯಾಚರಣೆಯನ್ನು ಯೋಧರು ತೀವ್ರಗೊಳಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಎನ್‍ಕೌಂಟರ್‍ನಲ್ಲಿ ಭಯೋತ್ಪಾದಕನೊಬ್ಬನನ್ನು ಸೇನೆ ಹೊಡೆದುರುಳಿಸಿದ್ದು, ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಘಟನೆಯಲ್ಲಿ ಭದ್ರತಾ ಪಡೆಯ ಕೆಲವು ಸಿಬ್ಬಂದಿಗಳಿಗೂ ಗಾಯಗಳಾಗಿವೆ.
ಪುಲ್ವಾಮಾದ ಗುಸ್ಸೂ ಗ್ರಾಮದಲ್ಲಿ ಉಗ್ರರು ಅವಿತಿಟ್ಟುಕೊಂಡು ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆ ನಿನ್ನೆ ಮಧ್ಯರಾತ್ರಿಯಿಂದಲೇ ಜಮ್ಮು-ಕಾಶ್ಮೀರ ಪೊಲೀಸರು, 53 ರಾಷ್ಟ್ರೀಯ ರೈಫಲ್ಸ್ (ಆರ್‍ಆರ್) ಮತ್ತು ಸಿಆರ್‍ಪಿಎಫ್ ಯೋಧರು ಆ ಪ್ರದೇಶವನ್ನು ಸುತ್ತುವರಿದು ಶೋಧ ನಡೆಸುತ್ತಿದ್ದರು.
ಇದೇ ಸಂದರ್ಭದಲ್ಲಿ ಉಗ್ರರು ಯೋಧರ ಮೇಲೆ ದಾಳಿ ನಡೆಸಿದರು. ಭದ್ರತಾಪಡೆಗಳು ಪ್ರತಿದಾಳಿ ನಡೆಸಿದಾಗ ಎನ್‍ಕೌಂಟರ್ ನಡೆಯಿತು. ಗುಂಡಿನ ಕಾಳಗದಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಭಯೋತ್ಪಾದಕನೊಬ್ಬನನ್ನು ಹೊಡೆದುರುಳಿಸಲಾಗಿದೆ.
ಈ ಘಟನೆಯಲ್ಲಿ ಪೊಲೀಸರು ಮತ್ತು ಯೋಧರೂ ಕೂಡ ಗಾಯಗೊಂಡಿದ್ದಾರೆ. ಎನ್‍ಕೌಂಟರ್‍ನಲ್ಲಿ ಕೆಲವು ಉಗ್ರಗಾಮಿಗಳಿಗೂ ಗಾಯಗಳಾಗಿದ್ದು, ಪರಾರಿಯಾಗಿದ್ದಾರೆ. ನಾಪತ್ತೆಯಾಗಿರುವ ಆತಂಕವಾದಿಗಳಿಗಾಗಿ ಆ ಪ್ರದೇಶದಲ್ಲಿ ಶೋಧ ಮುಂದುವರಿದಿದೆ.