ಚೆನ್ನೈ: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ತಲಪತಿ ವಿಜಯ್ ಅವರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಚೆನ್ನೈನ ಪೊಲೀಸ್ ಕಂಟ್ರೋಲ್ ರೂಂಗೆ ಭಾನುವಾರ ಮಧ್ಯರಾತ್ರಿ ಬಂದ ಕರೆಯೊಂದು ಕೆಲವು ತಾಸು ಕೋಲಾಹಲ ಎಬ್ಬಿಸಿತು. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು ಕರೆ ಮಾಡಿದವನನ್ನು ಪತ್ತೆಹಚ್ಚಿದರು.
ಪೊಲೀಸ್ ಕಂಟ್ರೋಲ್ ರೂಂಗೆ ಮಧ್ಯರಾತ್ರಿ ಬಾಂಬ್ ಬೆದರಿಕೆ ಕರೆ ಬಂದಿದೆ. ಪೊಲೀಸ್ ತಂಡಗಳು ಮತ್ತು ಬಾಂಬ್ ಸ್ಕ್ವಾಡ್ ಮನೆಗೆ ಧಾವಿಸಿ ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ.
ಈ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿರುವ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿದವನನ್ನು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮರಕ್ಕಣಂನಲ್ಲಿ ಪತ್ತೆ ಮಾಡಲಾಗಿದೆ. ಕರೆ ಮಾಡಿದ್ದ ಯುವಕ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಇದೊಂದು ಹುಸಿ ಕರೆ ಎಂದು ತಿಳಿಸಿದ್ದಾರೆ.
ಕರೆ ಮಾಡಿ ಸುಳ್ಳು ಬೆದರಿಕೆ ಒಡ್ಡಿದ್ದ 21 ವರ್ಷದ ಯುವಕನಿಗೆ ಎಚ್ಚರಿಕೆ ನೀಡಿ ಬಿಡಲಾಗಿದೆ. ಆತನ ಕುಟುಂಬದವರಿಗೂ ಮುಂದೆ ಹೀಗಾಗದಂತೆ ನಿಗಾವಹಿಸುವಂತೆ ಸೂಚಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ನಟ ವಿಜಯ್ ಮನೆಯಲ್ಲಿ ಬಾಂಬ್ ಇಟ್ಡಿರುವ ಬಗ್ಗೆ ಬೆದರಿಕೆ ಕರೆ ಮಾಡಿರುವ ಯುವಕನಿಗೆ ಇತರರ ಫೋನ್‌ನಿಂದ ಇಂತಹ ವಂಚನೆ ಕರೆ ಮಾಡುವ ಅಭ್ಯಾಸವಿದೆ. ಈ ಹಿಂದೆ ಅವನು ಗಣ್ಯ ವೈಕ್ತಿಗಳಿಗೆ ಇಂತಹ ಹುಸಿ ಕರೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಮೆಗಾಸ್ಟಾರ್ ರಜನಿಕಾಂತ್ ಅವರ ಪೋಸ್ ಗಾರ್ಡನ್ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಕಳೆದ ತಿಂಗಳು ಬೆದರಿಕೆ ಕರೆ ಮಾಡಲಾಗಿತ್ತು, ಕಡಲೂರಿನ ಮಾನಸಿಕ ವಿಕಲಚೇತನ ವ್ಯಕ್ತಿಯೊಬ್ಬ ಈ ರೀತಿ ಬೆದರಿಕೆ ಕರೆ ಮಾಡಿದ್ದನು.