ಚಿತ್ರ ಕಲಾವಿದ ಕಮಲ್ ಅಹ್ಮದ್ ಮಾಳೇಕೊಪ್ಪ ಅವರಿಗೆ ರಾಷ್ಟ್ರಪತಿ ಗೌರವ

ಕಾರ್ಕಳ : ಕಾರ್ಕಳದಲ್ಲಿ ವಾಸ್ತವ್ಯವಿರುವ ಗದಗ ಜಿಲ್ಲೆಯ ಖ್ಯಾತ ಚಿತ್ರಕಲಾವಿದ, ವಿಜಯನಗರ ಗರುಡಾದ್ರಿ ಶೈಲಿಯಿಂದ ಪ್ರಭಾವಿತರಾದ ಕಮಲ್ ಅಹ್ಮದ್ ಮಾಳೇಕೊಪ್ಪ ಅವರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರತಿಷ್ಠಿತ “ಆರ್ಟಿಸ್ಟ್ ಇನ್ ರೆಸಿಡೆನ್ಸಿ” ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ದೊರಕಿದೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ 10 ದಿನಗಳ ಕಾಲ ಆಯೋಜಿಸಲಾದ ಈ ವಿಶೇಷ ಕಾರ್ಯಕ್ರಮದಲ್ಲಿ ಭಾರತದೆಲ್ಲೆಡೆಯ ವಿವಿಧ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪ್ರತಿನಿಧಿಸುವ 12 ಮಂದಿ ಕಲಾವಿದರು ಭಾಗವಹಿಸಿದ್ದರು. ಇದರಲ್ಲಿ ಬನಾರಸ್ ಮ್ಯೂರಲ್, ಥಾಂಕಾ, ನಾಯಕ್, ಕೇರಳ ಮ್ಯೂರಲ್, ಬಸೋಹ್ಲಿ, ಸುರಪುರ ಹಾಗೂ ಮೈಸೂರು ಶೈಲಿಯ ಕಲಾವಿದರು ಸೇರಿದ್ದರು. ಅವರೆಲ್ಲರೂ ರಾಷ್ಟ್ರಪತಿ ಭವನದಲ್ಲೇ ವಾಸ್ತವ್ಯ ಹೂಡಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು.

ಕಮಲ್ ಅಹ್ಮದ್ ಮಾಳೇಕೊಪ್ಪ ಅವರು ಕಳೆದ 3 ದಶಕಗಳಿಂದ ವಿಜಯನಗರ ಗರುಡಾದ್ರಿ ಶೈಲಿಯಿಂದ ಪ್ರಭಾವಿತರಾಗಿ ತಮ್ಮದೇ ಆದ ಒಂದು ಶೈಲಿಯನ್ನು ಕಂಡುಕೊಂಡು ಮಿನಿಯೇಚರ್ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಮಲ್ ಅಹ್ಮದ್ ಮಾಳೇಕೊಪ್ಪ ಅವರು ರಾಷ್ಟ್ರಪತಿ ಭವನದಲ್ಲಿ ಒಂದು ಕಲಾಕೃತಿಯನ್ನು ರಚಿಸಿದ್ದಾರೆ. ಅಲ್ಲದೇ ಒಂದು ಕಲಾಕೃತಿಯನ್ನು ಪ್ರದರ್ಶಿಸಿದ್ದಾರೆ. ಇವುಗಳಲ್ಲಿ 1ನ್ನು ‘ಪಂಚತಂತ್ರ’ ಕಥಾವಸ್ತುವಿನ ಆಧಾರದ ಮೇಲೆ ರಚಿಸಲಾಗಿತ್ತು.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಲಾವಿದರೊಂದಿಗೆ ಸಂವಾದ ನಡೆಸಿ, ಅವರ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಕಲಾವಿದರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಶ್ಲಾಘಿಸಿದರು.

ಆರ್ಟಿಸ್ಟ್ ಇನ್ ರೆಸಿಡೆನ್ಸಿ ಕಾರ್ಯಕ್ರಮವು ಭಾರತದ ಶ್ರೀಮಂತ ಕಲಾ ಪರಂಪರೆಯನ್ನು ಆಚರಿಸುವ, ದೇಶದ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ಹಾಗೂ ಭಾರತದ ಸಾಂಸ್ಕೃತಿಕ ಗುರುತನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾದ ವಿಶೇಷ ಕಾರ್ಯಕ್ರಮವಾಗಿದೆ.

ಗದಗ ಜಿಲ್ಲೆಯ ಕಮಲ್ ಅಹ್ಮದ್ ಮಾಳೇಕೊಪ್ಪ ಅವರು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 18 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಅವರ ವಿವಿಧ ಕಲಾಕೃತಿಗಳು ಹೆಬ್ರಿ ಸರ್ಕಾರಿ ಕಚೇರಿ ಕಟ್ಟಡಗಳು, ವಿವಿಧ ಸಂಸ್ಥೆಗಳ ಗೋಡೆಗಳಲ್ಲಿ ಮೂಡಿಬಂದಿವೆ.































error: Content is protected !!
Scroll to Top