ಲಾಭದ ಆಸೆಗಾಗಿ ಆಹಾರ ಪದಾರ್ಥಗಳಲ್ಲಿ ಕಳಪೆ ಗುಣಮಟ್ಟದ, ಹಾನಿಕರ ಅಥವಾ ನಿಷೇಧಿತ ವಸ್ತುಗಳನ್ನು ಬೆರೆಸಿ ಅದರ ಮೂಲ ಗುಣಮಟ್ಟವನ್ನು ಕಡಿಮೆ ಮಾಡುವುದನ್ನು ಆಹಾರ ಕಲಬೆರಕೆ ಎನ್ನಲಾಗುತ್ತದೆ. ನಮ್ಮ ಭಾರತ ದೇಶದಲ್ಲಿ ಆಹಾರ ಸುರಕ್ಷತೆಯನ್ನು ಕಾಪಾಡುವುದಕ್ಕಾಗಿ ಹಳೆಯದಾದ ‘ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ 1954 ಎಂಬ ಕಾನೂನು ಜ್ಯಾರಿಯಲ್ಲಿತ್ತು. ಆಹಾರ ಪದಾರ್ಥಗಳ ಕಲಬೆರಕೆಯ ದುಷ್ಟತನವು ನಮ್ಮ ದೇಶಾದ್ಯಂತ ವ್ಯಾಪಕವಾಗಿ ಮತ್ತು ನಿರಂತರವಾಗಿ ಬೆಳೆದ ಕಾರಣ ಮತ್ತು ಈ ಕಾನೂನಿನಲ್ಲಿ ಕಂಡು ಬರುತ್ತಿದ್ದ ಕೆಲವು ಲೋಪ ದೋಷಗಳನ್ನು ನಿವಾರಿಸುವ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಮಗ್ರವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಮೇಲ್ಕಾಣಿಸಿದ ಹಳೆಯ ಕಾನೂನನ್ನು ರದ್ದುಪಡಿಸಿ 2006 ಆಗಸ್ಟ್ ತಿಂಗಳ 23 ರಿಂದ ಜ್ಯಾರಿಗೆ ಬರುವಂತೆ ಕೇಂದ್ರ ಸರಕಾರವು ‘ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006’ ನ್ನು ನಮ್ಮ ದೇಶಾದ್ಯಂತ ಜ್ಯಾರಿಗೊಳಿಸಿರುತ್ತದೆ.
ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಆಹಾರ ಉದ್ಯಮವನ್ನು ಸರಕಾರದ ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷತೆಯನ್ನು ಕಾಪಾಡುವುದು ಈ ಕಾನೂನಿನ ಉದ್ದೇಶವಾಗಿರುತ್ತದೆ. ಈ ಕಾನೂನಿನ ಪ್ರಕಾರದ ವಿವಿಧ ಅಧಿಕಾರಗಳನ್ನು ಚಲಾಯಿಸಲು ಮತ್ತು ನಿಯೋಜಿಸಲಾದ ಕಾರ್ಯಗಳನ್ನು ನಿರ್ವಹಿಸಲು ಕೇಂದ್ರ ಸರಕಾರವು ಈಗಾಗಲೇ ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಎಂದು ಕರೆಯಲ್ಪಡುವ ನಿಗಮವನ್ನು ಸ್ಥಾಪಿಸಿದ್ದು ದೇಶದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಪ್ರಾಧಿಕಾರದ ಪ್ರಧಾನ ಕಛೇರಿಯು ದೆಹಲಿಯಲ್ಲಿರುತ್ತದೆ. ಈ ಪ್ರಾಧಿಕಾರದಲ್ಲಿ ಅಧ್ಯಕ್ಷರು ಮತ್ತು ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸದಸ್ಯರುಗಳು ಕಾರ್ಯವನ್ನು ನಿರ್ವಹಿಸುತ್ತಾರೆ. ಮಾತ್ರವಲ್ಲದೇ ಮೇಲ್ಕಾಣಿಸಿದ ಕಾನೂನಿನ ಪ್ರಕಾರದ ವಿವಿಧ ಯೋಜನೆಗಳನ್ನು ಪ್ರಾಧಿಕಾರದ ಮೂಲಕ ಅನುಷ್ಠಾನಗೊಳಿಸುವುದಕ್ಕಾಗಿ ಆಹಾರ, ಉದ್ಯಮ, ಕೃಷಿ, ಗ್ರಾಹಕರು ಸಂಬಂಧಿತ ಸಂಶೋಧನ ಸಂಸ್ಥೆಗಳು ಮತ್ತು ಆಹಾರ ಪ್ರಯೋಗಾಲಯಗಳು ಮತ್ತು ಎಲ್ಲಾ ಆಹಾರ ಸುರಕ್ಷತಾ ಆಯುಕ್ತರ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ತಲಾ ಇಬ್ಬರು ಸದಸ್ಯರುಗಳನ್ನು ಒಳಗೊಂಡ ಕೇಂದ್ರ ಸಲಹಾ ಸಮಿತಿಯನ್ನು ಸಹಾ ಸ್ಥಾಪಿಸಲಾಗಿರುತ್ತದೆ.
ಆಹಾರ ಪ್ರಾಧಿಕಾರ ಮತ್ತು ಆಹಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ನಡುವಿನ ನಿಕಟ ಸಹಕಾರವನ್ನು ಖಚಿತ ಪಡಿಸಿಕೊಳ್ಳುವ, ಆಹಾರ ಪ್ರಾಧಿಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವ, ಆಹಾರ ಪ್ರಾಧಿಕಾರದ ವಿವಿಧ ಕರ್ತವ್ಯಗಳ ನಿರ್ವಹಣೆ ಮತ್ತು ಕಾರ್ಯಕ್ರಮಗಳ ಪ್ರಸ್ಥಾವನೆಯನ್ನು ರೂಪಿಸುವ, ಸಂಭಾವ್ಯ ಅಪಾಯಗಳನ್ನು ಗುರುತಿಸುವ ಮತ್ತು ಇತರ ಪ್ರಮುಖ ಜವಾಬ್ದಾರಿಗಳನ್ನು ಕೇಂದ್ರ ಸಲಹಾ ಸಮಿತಿಯು ಹೊಂದಿರುತ್ತದೆ. ಮಾತ್ರವಲ್ಲದೇ ಆಹಾರ ಪ್ರಾಧಿಕಾರವು ಸ್ವತಂತ್ರ ವೈಜ್ಞಾನಿಕ ತಜ್ಞರನ್ನು ಒಳಗೊಂಡ ವೈಜ್ಞಾನಿಕ ಸಮಿತಿಗಳನ್ನು ಸ್ಥಾಪಿಸಿದ್ದು ವೈಜ್ಞಾನಿಕ ಸಮಿತಿಯು ತನ್ನ ಸಭೆಗಳ ಮುಖಾಂತರ ನಡೆಸುವ ಚರ್ಚೆಗಳಲ್ಲಿ ಭಾಗವಹಿಸುವುದಕ್ಕಾಗಿ ಸಂಬಂಧಿತ ಉದ್ಯಮ ಮತ್ತು ಗ್ರಾಹಕ ಪ್ರತಿನಿಧಿಗಳನ್ನು ಆಹ್ವಾನಿಸಬೇಕಾಗುತ್ತದೆ.

ಈ ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರಗಳ ಪ್ರಕಾರ ಯಾವುದೇ ಆಹಾರ ಪದಾರ್ಥವು ನಿಯಮಗಳಲ್ಲಿ ನಿರ್ದಿಷ್ಟ ಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ಮಾಲಿನ್ಯಕಾರಕ, ನೈಸರ್ಗಿಕವಾಗಿ ಸಂಭವಿಸುವ ವಿಷಕಾರಿ ವಸ್ತುಗಳು ಅಥವಾ ಹಾರ್ಮೂನ್ ಅಥವಾ ಭಾರ ಲೋಹಗಳನ್ನು ಹೊಂದಿರಕೂಡದು ಮತ್ತು ಯಾವುದೇ ವ್ಯಕ್ತಿಯು ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರಗಳಿಗೆ ವ್ಯತಿರಿಕ್ತವಾಗಿ ಯಾವುದೇ ಆಹಾರ ವಸ್ತುಗಳನ್ನು ತಯಾರಿಸುವುದು, ವಿತರಿಸುವುದು, ಮಾರಾಟ ಮಾಡುವುದು, ಆಮದು ಮಾಡಿಕೊಳ್ಳುವುದು ಕಾನೂನು ಬಾಹಿರ ಕೃತ್ಯವಾಗಿರುತ್ತದೆ. ಈ ಕಾನೂನಿನ ನಿಯಮಗಳನ್ನು ಮತ್ತು ನಿಬಂಧನೆಗಳನ್ನು ಉಲ್ಲಂಘಿಸುವ ಅಥವಾ ತಪ್ಪು ದಾರಿಗೆ ಎಳೆಯುವ ಅಥವಾ ಮೋಸಗೊಳಿಸುವ ಆಹಾರದ ಕುರಿತು ಯಾವುದೇ ಜಾಹಿರಾತನ್ನು ಪ್ರಕಟಿಸುವುದು ಮತ್ತು ಆಹಾರ ಪದಾರ್ಥಗಳ ಮಾರಾಟ, ಪೂರೈಕೆ, ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಯಾವುದೇ ವ್ಯಕ್ತಿಯು ತನ್ನನ್ನು ಅನ್ಯಾಯಕರ ವ್ಯಾಪಾರ ಪದ್ದತಿಯಲ್ಲಿ ತೊಡಗಿಸಿಕೊಳ್ಳುವುದು ಸಹಾ ಕಾನೂನು ಬಾಹಿರ ಕೃತ್ಯವಾಗಿರುತ್ತದೆ. ಈ ಕಾರಣದಿಂದ ಯಾವುದೇ ಅಸುರಕ್ಷಿತ ಅಥವಾ ತಪ್ಪಾಗಿ ಬ್ರಾಂಡ್ ಮಾಡಲಾದ ಅಥವಾ ಗುಣಮಟ್ಟ ಇಲ್ಲದ ಆಹಾರ ವಸ್ತುವನ್ನು ಆಮದು ಮಾಡಿಕೊಳ್ಳುವುದು ಮತ್ತು ಮಾರಾಟ ಮಾಡುವುದು ಸಹಾ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ನೈಸರ್ಗಿಕವಾದ ತಾಜಾ ಹಣ್ಣಿನ ರಸವನ್ನು ಬಳಸದೆ ಕೃತಕವಾಗಿ ಹಣ್ಣಿನ ರುಚಿ ಮತ್ತು ಬಣ್ಣವನ್ನು ಬಳಸಿ ಹಣ್ಣಿನ ರಸ ಎಂಬುದಾಗಿ ಮಾರಾಟ ಮಾಡುವ, ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಆಹಾರ ಧಾನ್ಯಗಳು, ತರಕಾರಿ ಹಣ್ಣು ಹಂಪಲು ಮತ್ತಿತರ ಆಹಾರ ಪದಾರ್ಥಗಳಿಗೆ ಕೃತಕವಾಗಿ ಹಾನಿಕಾರಕ ರಾಸಾಯನಿಕ ಪದಾರ್ಥವನ್ನು ಬಳಸಿ ಅದರ ಬಣ್ಣವನ್ನು ಬದಲಾಯಿಸುವ ಅಥವಾ ಅಸುರಕ್ಷಿತ ಅಂದರೆ ಆಹಾರದ ಸ್ವರೂಪ, ವಸ್ತು ಅಥವಾ ಗುಣಮಟ್ಟವು ಆರೋಗ್ಯಕ್ಕೆ ಹಾನಿಕಾರಕವಾಗುವಷ್ಟು ಪರಿಣಾಮ ಬೀರುವ ಯಾವುದೇ ವಸ್ತುವನ್ನು ತಯಾರಿಸಿ ಮಾರಾಟ ಮಾಡುವ, ಅಥವಾ ಕಳಪೆ ಮಟ್ಟದ ಅಥವಾ ಅಗ್ಗದ ವಸ್ತುವನ್ನು ಬಣ್ಣ, ಸುವಾಸನೆ ಅಥವಾ ಲೇಪಿತ ಪುಡಿ ಅಥವಾ ಪಾಲೀಶ್ ಮಾಡಿ ಅಂತಹ ವಸ್ತುವಿನ ಮೂಲ ಸ್ವರೂಪವನ್ನು ಹಾನಿಗೊಳಿಸಿ ಅಥವಾ ಮರೆಮಾಚಿ ಅದರ ಮೂಲ ಸ್ವರೂಪವನ್ನು ಕೃತಕವಾಗಿ ಹೆಚ್ಚಿನ ಮೌಲ್ಯದ ವಸ್ತುವಿನಂತೆ ತೋರಿಸುವ ಅಥವಾ ಹುಳ, ಜೀರುಂಡೆ ಅಥವಾ ಕೀಟಗಳಿಂದ ಸೋಂಕಿಗೆ ಒಳಗಾಗಿರುವ ಅಥವಾ ಮುಚ್ಚಿಕೊಂಡಿರುವ ಕಳಪೆ ಗುಣಮಟ್ಟದ ವಸ್ತುವನ್ನು ಗ್ರಾಹಕರಿಗೆ ಮಾರಾಟ ಮಾಡುವ ಇತ್ಯಾದಿ ಕೃತ್ಯಗಳು ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಮತ್ತು ಈ ರೀತಿಯ ಅಪರಾಧ ಕೃತ್ಯದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಾಗಿಯಾದ ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನ ನಿಯಮಾನುಸಾರದ ಪ್ರಕಾರದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
























