ಗ್ಯಾರಂಟಿ ಯೋಜನೆ ಬದುಕು ಕಟ್ಟಿಕೊಟ್ಟಿದೆ – ಅಜಿತ್ ಹೆಗ್ಡೆ ಮಾಳ

ಕಾರ್ಕಳ : ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ಹಿಂದುಳಿದಿರುವ ಅನೇಕ‌ ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ‌ ಅಭಿಪ್ರಾಯಪಟ್ಟರು.
ಅವರು ಜು.23 ರಂದು ಕಾರ್ಕಳ‌ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ‌ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ‌ ಸಭೆಯ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು. ದಿನನಿತ್ಯದ ಸಾಮಗ್ರಿ ಖರೀದಿ, ಮಕ್ಕಳ‌ ಶಿಕ್ಷಣ, ವೈದಕೀಯ ಖರ್ಚು ಸೇರಿದಂತೆ ಇನ್ನಿತರ ಅಗತ್ಯ ಖರ್ಚು ವೆಚ್ಚಗಳಿಗೆ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ‌ ಗೃಹಲಕ್ಷ್ಮೀ ಯೋಜನೆ ಸಹಕಾರಿಯಾಗಿದೆ ಎಂದವರು ಅಭಿಪ್ರಾಯಪಟ್ಟರು.

ಗೃಹಲಕ್ಷ್ಮೀ ಯೋಜನೆಗೆ 37,742 ನೋಂದಾವಣೆ
ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಲತಾ ಗೃಹಲಕ್ಷ್ಮೀ ಯೋಜನೆ‌ ಕುರಿತು ಮಾಹಿತಿ ನೀಡಿದರು. ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನಗೆ ಒಟ್ಟು 37,742 ಮಂದಿ ನೋಂದಾವಣಿ ಮಾಡಿಕೊಂಡಿದ್ದು, ಇವರಲ್ಲಿ ಕೆವೈಸಿ, ಐಟಿ ಜಿಎಸ್ಟಿ ಸಂಬಂಧಿಸಿದಂತೆ ವೆರಿಫೀಕೇಷನ್ ಆಗದೆ 760 ಮಂದಿಗೆ ಹಣ‌ ಪಾವತಿಯಾಗಿಲ್ಲ. ಇನ್ನುಳಿದಂತೆ ಮೇ ತಿಂಗಳವರೆಗೆ ಅರ್ಹ ಎಲ್ಲಾ ಫಲಾನುಭವಿಗಳಿಗೆ ಹಣ ಪಾವತಿಯಾಗಿದೆ.

ಮರಣ ಹೊಂದಿದವರಿಗೆ ಹಣ ಪಾವತಿ
ಯೋಜನೆ ಪ್ರಾರಂಭವಾದ ಇಲ್ಲಿಯವರೆಗೆ ಫಲಾನುಭವಿಗಳಲ್ಲಿ 1,257 ಮಂದಿ ಮರಣ ಹೊಂದಿದ್ದು, ಅವರ ಖಾತೆಗೆ ಹಣ ಪಾವತಿಯಾಗುತ್ತಿದೆ. ಈ ಬಗ್ಗೆ ಪರಿಶೀಲನೆ‌ ನಡೆಸಿ ಅರ್ಹರಿಗೆ ನೀಡುವ ಕಾರ್ಯ ನಡೆಸಲಾಗುತ್ತಿದೆ ಎಂದರು. ಅಲ್ಲದೆ ಸರಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆ ನಡೆಯಲಿದೆ ಎಂದು ಶ್ರೀಲತಾ ತಿಳಿಸಿದರು.

ಗಂಡಸಿಗೆ ಗೃಹಲಕ್ಷ್ಮೀ
ತಾಲೂಕಿನಲ್ಲಿ ಹೆಸರಿನ ಗೊಂದಲದಿಂದಾಗಿ ಓರ್ವ ಗಂಡಸಿಗೆ ಗೃಹಲಕ್ಷ್ಮೀ ಯೋಜನೆ ಪಾವತಿಯಾಗುತ್ತಿತ್ತು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀಲತಾ ತಿಳಿಸಿದರು.

ಯುವನಿಧಿ
ಉಡುಪಿ ಜಿಲ್ಲಾ ಜಾಬ್ ಡೆವಲಪ್ಮೆಂಟಲ್ ಎಕ್ಸಿಕ್ಯೂಟಿವ್ ಲತಾ ಮಾಹಿತಿ‌ ನೀಡಿ, ತಾಲೂಕಿನಲ್ಲಿ ಯುವನಿಧಿಗೆ 669 ನೋಂದಣಿಯಾಗಿದೆ (ಪದವಿ – 573, ಡಿಪ್ಲೊಮಾ – 16) ಇದರಲ್ಲಿ 589 ಮಂದಿಗೆ ಯುವನಿಧಿಯಲ್ಲಿ 1,63,16,500 ರೂ. ಪಾವತಿಯಾಗಿದೆ‌ ಎಂದು ತಿಳಿಸಿದರು.

ಜಾತಿ ಪ್ರಮಾ‌ಣ ಕಡ್ಡಾಯ
ಅನ್ನಭಾಗ್ಯ ಯೋಜನೆ ಕುರಿತಾಗಿ ಮಾಹಿತಿ ನೀಡಿದ ಆಹಾರ ಇಲಾಖೆಯ ಅಧಿಕಾರಿಗಳು ಸರಕಾರದ‌ ಆದೇಶದಂತೆ ಬಿಪಿಎಲ್‌‌ ಕಾರ್ಡ್ ಹೊಂದಿರುವ ಎಸ್ಸಿ – ಎಸ್ಟಿ ಸಮುದಾಯದವರು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದರು.

ಹೊಸ ಕಾರ್ಡ್ ಆಗುತ್ತಿಲ್ಲ
ಹೊಸ ಕಾರ್ಡ್ ಪ್ರಕ್ರಿಯೆ ನಡೆಯುತ್ತಿಲ್ಲ. ಆದರೆ  ವೈದ್ಯಕೀಯ (ಮಾರಣಾಂತಿಕ ಕಾಯಿಲೆ) ವಿಷಯವಾಗಿ ಬಿಪಿಎಲ್ ಹೊಸ ಕಾರ್ಡ್ ಗೆ ಅವಕಾಶವಿದೆ. ಇನ್ನು ಎಪಿಎಲ್ ನಿಂದ ಬಿಪಿಎಲ್ ಗೆ ಸುಮಾರು 200 ಕಾರ್ಡ್ ಬದಲಾಗಿದೆ.‌ ಆದರೆ, ಈ ಬಗ್ಗೆ ಸೂಕ್ತವಾದ ದಾಖಲೆ ನೀಡಿದ್ದಲ್ಲಿ ಮರು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.

ಶಕ್ತಿ ಯೋಜನೆ
ಪಳ್ಳಿ – ಬೆಳ್ಳೆ ಭಾಗದಲ್ಲಿ ಸರಕಾರಿ ಬಸ್ ಸೌಲಭ್ಯ ಮತ್ತೆ ಬಂದ್ ಆಗಿದೆ. ಈ ಬಗ್ಗೆ ಆರ್‌ಟಿಓಗೆ ಅನೇಕ ಬಾರಿ ಮಾಹಿತಿ ನೀಡಲಾಗಿದೆ. ಆದರೂ ಸ್ಪಂದನೆಯಿಲ್ಲ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ನಡೆಯುವ ಸಭೆಯ ದಿನ ಗ್ರಾಮಸ್ಥರನ್ನು ಕರೆದುಕೊಂಡು ಹೋಗಿ ಅವರಿಂದ‌ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಇನ್ನುಳಿದಂತೆ ತಾಲೂಕಿನ ಬೇರೆ ಭಾಗದಲ್ಲಿ ಸರಕಾರಿ ಬಸ್ ಸಂಚಾರಕ್ಕೆ ಸರ್ವೆ ಕಾರ್ಯ ನಡೆಸಲಾಗಿದೆ ಎಂದು ಅಜಿತ್ ಹೆಗ್ಡೆ ಹೇಳಿದರು.

ವಿದ್ಯಾರ್ಥಿಗಳ ಬಸ್ ಪಾಸ್
ಸರಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಘೋಷಿಸಿದ್ದು, ಇದಕ್ಕೆ ಜಿಲ್ಲೆಯಲ್ಲಿ ಉಡುಪಿಯ ಕಡಿಯಾಳಿ ಮತ್ತು ಕುಂದಾಪುರದಲ್ಲಿರುವ ಕರ್ನಾಟಕ ಓನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದರು ಆರ್‌ಟಿಓ‌ ಅಧಿಕಾರಿ ತಿಳಿಸಿದರು.  

ಗೃಹಜ್ಯೋತಿ
ಜೂನ್ ತಿಂಗಳಲ್ಲಿ ಒಟ್ಟು 41,642 ಮಂದಿ ಫಲಾನುಭವಿಗಳ 2.79 ಕೋಟಿ ರೂ. ಹಣ ಪಾವತಿಯಾಗಿದೆ. ಇನ್ನು ತಾಲೂಕು ವ್ಯಾಪ್ತಿಯಲ್ಲಿ ಶೇ. 60 ರಷ್ಟು ಗೃಹಜ್ಯೋತಿ ಪರಿಶೀಲನೆ ಪ್ರಕ್ರಿಯೆ ನಡೆದಿದ್ದು, ಉಳಿದಂತೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರ ಸಹಕಾರದೊಂದಿಗೆ ಪರಿಶೀಲನಾ ಪ್ರಕ್ರಿಯೆ ನಡೆಸಲಾಗುತ್ತದೆ‌ ಎಂದು ಮೆಸ್ಕಾಂ ಇಲಾಖೆಯ ಎಇಇ ಶಿಲ್ಪಾ ಹೇಳಿದರು‌.

ಲಂಡನ್ ಯೂನಿವರ್ಸಿಟಿಯಲ್ಲಿ ಅಧ್ಯಯನ
ಗ್ಯಾರಂಟಿ ಯೋಜನೆ ಬಗ್ಗೆ ಲಂಡನ್ ಯೂನಿವರ್ಸಿಟಿಯಲ್ಲಿ ಅಧ್ಯಯನ ನಡೆಯುತ್ತಿದೆ. ಕಾರ್ಕಳ ತಾಲೂಕು ಕುರಿತಾಗಿ ನಿಟ್ಟೆ ಯೂನಿವರ್ಸಿಟಿ ಮೂಲಕ ನಮ್ಮಲ್ಲಿ ಮಾಹಿತಿ ಕೇಳಿದ್ದಾರೆ. ಇದಕ್ಕಾಗಿ ಈಗಾಗಲೇ ಸರ್ವೆ ಟೀಮ್ ತಯಾರಾಗಿದೆ. ಪ್ರತಿ ಗ್ರಾ.ಪಂ. ನಲ್ಲಿ ಪ್ರತಿ ಯೋಜನೆಯ ತಲಾ ಇಬ್ಬರಂತೆ 10 ಮಂದಿ ಫಲಾನುಭವಿಗಳ ಅಭಿಪ್ರಾಯ ಸಂಗ್ರಹ ಮಾಡಲಾಗುವುದು ಎಂದು ಅಜಿತ್ ಹೆಗ್ಡೆ ಹೇಳಿದರು.
ತಾ. ಪಂ. ಸಹಾಯಕ‌ ನಿರ್ದೇಶಕ ಕೃಷ್ಣಾನಂದ ವೇದಿಕೆಯಲ್ಲಿದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.































error: Content is protected !!
Scroll to Top