ನ್ಯಾಯವಾದಿ ರಮೇಶ್‌ಚಂದ್ರ ಹೆಬ್ರಿ ರಸ್ತೆ ಕಸ್ತೂರಿ ಬಡಾವಣೆ
ಹೆಬ್ರಿ : ಸುಮಾರು ಇಪ್ಪತ್ತು ವರ್ಷಗಳ ಬೆಂಗಳೂರಿನ ರಾಜಗೋಪಾಲ ನಗರ ಮತ್ತು ಲಗ್ಗೆರೆ ನಡುವಿನ ಕಸ್ತೂರಿ ಬಡಾವಣೆಯ ರಸ್ತೆ ಸಮಸ್ಯೆಯ ಪ್ರಕರಣದಲ್ಲಿ ಬಡಾವಣೆಯ ನಿವಾಸಿಗಳಿಗೆ ಜಯ ದೊರಕಿಸಿಕೊಟ್ಟ ವಕೀಲ ಹೆಬ್ರಿ ಮೂಲದ ರಮೇಶ್‌ಚಂದ್ರ ಅವರ ಹೆಸರನ್ನೇ ರಸ್ತೆಗೆ ಇಟ್ಟು ನಿವಾಸಿಗಳು ಅಭಿನಂದಿಸಿದ್ದಾರೆ.
ಬಡಾವಣೆಗೆ ಪ್ರಮುಖ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಇಬ್ಬರು ಪ್ರಭಾವಿ ವ್ಯಕ್ತಿಗಳು ಆಕ್ರಮಿಸಿಕೊಂಡು ಅದು ತಮ್ಮ ನಿವೇಶನ ಎಂದು ಜಾಗವನ್ನು ಬಂದ್ ಮಾಡಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರು. ಇದರಿಂದ ಆ ಬಡಾವಣೆಯ ಸುಮಾರು 450ಕ್ಕೂ ಅಧಿಕ ಮನೆಗಳಿಗೆ ತೊಂದರೆ ಆಗುತ್ತಿದ್ದುದಲ್ಲದೆ ಅವರು ಸುಮಾರು ಐದು ಕಿ.ಮೀ. ಸುತ್ತಿಕೊಂಡು ಮನೆಗಳನ್ನು ತಲುಪುವಂತಹ ಸ್ಥಿತಿ ಎದುರಾಗಿತ್ತು. ಅದರ ವಿರುದ್ಧ ಸ್ಥಳೀಯ ನಿವಾಸಿಗಳು 2006ರಲ್ಲಿ ನಗರದ ಸಿವಿಲ್ ಕೋರ್ಟ್ ಮೊರೆ ಹೋಗಿ ಅಲ್ಲಿಂದ ಪ್ರತಿಬಂಧಕಾಜ್ಞೆ ಪಡೆದಿದ್ದರು. ಆನಂತರ ಹಲವು ವರ್ಷಗಳ ಕಾಲ ವ್ಯಾಜ್ಯ ನಡೆದು 2013ರಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅಂದಿನ ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಮಧ್ಯಂತರ ತಡೆ ನೀಡಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಅಲ್ಲದೆ, ವಿವಾದಿತ ಜಾಗ ನಿಜವಾಗಿಯೂ ರಸ್ತೆಯೇ, ಇಲ್ಲ ನಿವೇಶನವೇ ಎಂಬ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿಗೆ ಸೂಚನೆ ನೀಡಿತ್ತು. ಬಿಬಿಎಂಪಿ ಅಧಿಕಾರಿಗಳು ಆ ಜಾಗ ರಸ್ತೆ ಎಂದು ವರದಿ ನೀಡಿದ್ದರು. ಆದರೆ ಆ ವರದಿಯನ್ನು ಪ್ರತಿವಾದಿಗಳು ಒಪ್ಪಿರಲಿಲ್ಲ. ಕೊನೆಗೆ ಪ್ರತಿವಾದಿಗಳ ಸಮಕ್ಷಮದಲ್ಲಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿದ ಪಾಲಿಕೆಯ ಎಂಜಿನಿಯರ್‌ಗಳು, ಆ ಜಾಗ ರಸ್ತೆ ಎಂದೇ ವರದಿ ನೀಡಿದ್ದರು. ಆಗ ಪ್ರತಿವಾದಿಗಳು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಹೇಳಿ ಸಮಯ ಪಡೆದಿದ್ದರು. ಆದರೆ, ಅವರು ಯಾವುದೇ ದಾಖಲೆಗಳನ್ನು ಸಲ್ಲಿಸಲಿಲ್ಲ. ಹಾಗಾಗಿ 2025ರ ಡಿಸೆಂಬರ್‌ನಲ್ಲಿ ವಿಚಾರಣೆ ನಡೆಸಿದ ನ್ಯಾ.ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ ಆ ವಿವಾದಿತ ಜಾಗ ರಸ್ತೆಯಾಗಿದ್ದು, ಯಾರೂ ಅಲ್ಲಿ ಸಂಚಾರಕ್ಕೆ ತೊಂದರೆ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ಗಣರಾಜೋತ್ಸವ ದಿನದಂದು ಕಸ್ತೂರಿ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದವರು ತಮ್ಮ ಪರವಾಗಿ ವಾದಿಸಿ ನ್ಯಾಯ ದೊರಕಿಸಿಕೊಟ್ಟ ವಕೀಲ ರಮೇಶ್‌ಚಂದ್ರ ಹೆಬ್ರಿ ಅವರ ಹೆಸರನ್ನು ನಾಮಕರಣ ಮಾಡಿ ನಾಮಫಲಕವನ್ನು ಅವರಿಂದಲೇ ಅನಾವರಣಗೊಳಿಸಿದ್ದಾರೆ.
ರಮೇಶ್‌ಚಂದ್ರ ಅವರು ಹೆಬ್ರಿ ಚಾರ ಕಲ್ಲಿಲ್ಲು ದಿ. ಪುಟ್ಟಣ್ಣಯ್ಯ ಭಟ್ ಮತ್ತು ಕುಸುಮಾಕ್ಷಿ ಭಟ್ ದಂಪತಿಯ ಪುತ್ರ. ಅವರು ಬೆಂಗಳೂರು ಹೈ ಕೋರ್ಟ್‌ನಲ್ಲಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡಿದ್ದರು.

























