ಕಾರ್ಕಳ ಮಹಾಮಸ್ತಕಾಭಿಷೇಕ ಸಮಾಲೋಚನಾ ಸಭೆ‌

ಕಾರ್ಕಳ : 2027ರ ಕಾರ್ಕಳ ಮಹಾಮಸ್ತಕಾಭಿಷೇಕವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುವುದು. ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಕಾರ್ಕಳದ ಅಭಿವೃದ್ಧಿಗಾಗಿ 70 ಕೋಟಿ ರೂ. ವಿಶೇಷ ಅನುದಾನ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಜೈನ ಜೀರ್ಣೋದ್ಧಾರ ಸಂಘದ ಕಾರ್ಯಾಧ್ಯಕ್ಷ ಡಾ. ಎಂ.ಎನ್.‌ ರಾಜೇಂದ್ರ ಕುಮಾರ್ ತಿಳಿಸಿದರು.
ಅವರು ಜ. 26ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಮಹಾಮಸ್ತಕಾಭಿಷೇಕ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪ್ರಮುಖವಾಗಿ ರಾಮಸಮುದ್ರದಿಂದ ಹಿರಿಯಂಗಡಿ, ಅನಂತಶಯನದಿಂದ ಗೋಮಟೇಶ್ವರ ರಸ್ತೆ ಅಗಲೀಕರಣಕ್ಕಾಗಿ, ನೀರು, ಚರಂಡಿ, ರಸ್ತೆ ಕಾಮಗಾರಿ ನಡೆಸಲು ವಿಶೇಷ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗುವುದು. ಮಹಾಮಸ್ತಕಾಭಿಷೇಕದ ಮೂಲಕ ಕಾರ್ಕಳದ ಹಿರಿಮೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ನಾವೆಲ್ಲರೂ ಶ್ರಮಿಸಬೇಕಿದ್ದು, ಈ ನಿಟ್ಟಿನಲ್ಲಿ ಸರ್ವರ ಸಲಹೆ ಪಡೆಯಲಾಗುವುದು ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ನೆರವು ಮತ್ತು ಸಹಕಾರವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ರತ್ನಾಕರ್‌ ರಾಜ್‌ ಅರಸ್‌ಕಿನ್ಯಾಕ‌ ಬಲ್ಲಾಳ್, ಡಾ. ಜೀವಂದರ್‌ ಬಲ್ಲಾಳ್‌ ಕಾಂತಾವರ, ಅನಂತರಾಜ್‌ ಪೂವಣಿ, ಕೆ.ಸಿ. ಧರಣೇಂದ್ರಯ್ಯ ಕಳಸ, ಬಿ.ಜಿ. ಬ್ರಹ್ಮದೇವಯ್ಯ ಕಳಸ, ಅಂಡಾರು ಮಹಾವೀರ ಹೆಗ್ಡೆ, ಎರ್ಮಾಳ್‌ ವೈ ಸೂರಜ್‌ ಕುಮಾರ್‌ ಪಟ್ಲಶೆಟ್ಟಿ, ಸುಧೀರ್‌ ಪಡಿವಾಳ್‌ ಮಂಗಳೂರು, ಪುಷ್ಪರಾಜ್‌ ಜೈನ್‌ ಮಂಗಳೂರು, ಸಂಪತ್‌ ಸಾಮ್ರಾಜ್ಯ ಶಿರ್ತಾಡಿ, ಅವಿಭಜಿತ ಜಿಲ್ಲೆಯ ಜೈನ ಸಮುದಾಯ ಪ್ರಮುಖರು, ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು. ಮೋಹನ್‌ ಪಡಿವಾಳ್‌ ಸ್ವಾಗತಿಸಿ, ಅಜಿತ್‌ ಕೊಕ್ರಾಡಿ ನಿರೂಪಿಸಿದರು.

‌ಚಿತ್ರ : ದ್ವಾರಕಾ ನಿರಂಜನ್















error: Content is protected !!
Scroll to Top