ಸಹಕಾರ ರತ್ನ ಪುರಸ್ಕೃತ ಭಾಸ್ಕರ್‌ ಎಸ್.‌ ಕೋಟ್ಯಾನ್‌ – ರವೀಂದ್ರ ಪ್ರಭು ಅವರಿಗೆ ಅಭಿನಂದನೆ

ಕಾರ್ಕಳ : ಕಳೆದ 3 ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕಡಾರಿ ರವೀಂದ್ರ ಪ್ರಭು ಮತ್ತು ಕೊಳಕೆ ಇರ್ವತ್ತೂರು ಭಾಸ್ಕರ್‌ ಎಸ್‌. ಕೋಟ್ಯಾನ್‌ ಅವರಿಗೆ ಕಾರ್ಕಳ – ಹೆಬ್ರಿ ತಾಲೂಕು ಸಹಕಾರ ಸಂಘಗಳ ವತಿಯಿಂದ ಡಿ. 23ರಂದು ಹಿರ್ಗಾನ ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ಅಭಿನಂದನಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವಿ. ಸುನಿಲ್‌ ಕುಮಾರ್‌, ಏಕಕಾಲದಲ್ಲಿ ಒಂದೇ ಕ್ಷೇತ್ರದಲ್ಲಿ ಇಬ್ಬರಿಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆಯುವ ಮೂಲಕ ಕಾರ್ಕಳದ ಕೀರ್ತಿ ಮತ್ತಷ್ಟು ವೃದ್ಧಿಸಿದೆ. ಭಾಸ್ಕರ್‌ ಕೋಟ್ಯಾನ್‌ ಹಾಗೂ ರವೀಂದ್ರ ಪ್ರಭು ಅವರು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲೂ ಸಕ್ರಿಯರಾಗಿದ್ದಾರೆ. ಈ ಮೂಲಕ ಸಮಾಜದಲ್ಲಿ ಜನತೆಗೆ ಮತ್ತಷ್ಟು ಹತ್ತಿರವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಅವಿಭಜಿತ ದ.ಕ. ಜಿಲ್ಲೆಗೆ ವಿಶೇಷ ಸ್ಥಾನವಿದೆ. ಸಹಕಾರಿ ಕ್ಷೇತ್ರದಲ್ಲಿ ಕೇಳಿ ಬರುವ ಮೊದಲ ಹೆಸರು ನಮ್ಮ ಜಿಲ್ಲೆಯವರೇ ಆಗಿರುವ ಎಂ. ಎನ್.‌ ರಾಜೇಂದ್ರ ಕುಮಾರ್‌ ಎನ್ನುವುದು ಹೆಮ್ಮೆಯ ವಿಷಯ. ಅವರು ದ.ಕ. ಜಿಲ್ಲೆಗೆ ಸೀಮಿತವಾಗದೇ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಪ್ರಶಂಸನೀಯ.
ವಿ. ಸುನಿಲ್‌ ಕುಮಾರ್‌
ಶಾಸಕರು

ಸಹಕಾರ ರತ್ನಗಳಾದ ಕಡಾರಿ ರವೀಂದ್ರ ಪ್ರಭು ಮತ್ತು ಭಾಸ್ಕರ್‌ ಎಸ್‌. ಕೋಟ್ಯಾನ್‌ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಭಿನಂದನಾರ್ಹ. 51 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಭಾಸ್ಕರ್‌ ಕೋಟ್ಯಾನ್‌ ಅವರು ಮಾಡಿದ ಸಾಧನೆ ಮತ್ತು 70 ಲಕ್ಷದಿಂದ ಪ್ರಾರಂಭವಾದ ರಾಜಾಪುರ ಸಾರಸ್ವತ ಬ್ಯಾಂಕ್‌ ಇಂದು ರವೀಂದ್ರ ಪ್ರಭು ಅವರ ಸಾರಥ್ಯದಲ್ಲಿ 275 ಕೋ. ರೂ. ವ್ಯವಹಾರ ಹೊಂದಿದೆ. ಆರ್ಥಿಕ ವ್ಯವಹಾರದೊಂದಿಗೆ ಸಂಸ್ಥೆಯು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ್ದು ಶ್ಲಾಘನೀಯ.
ಡಾ. ಸುಧಾಕರ್‌ ಶೆಟ್ಟಿ
ಅಧ್ಯಕ್ಷರು, ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆ

ಕ್ರಿಯೇಟಿವ್‌ ಎಜ್ಯುಕೇಶನ್‌ ಫೌಂಡೇಶನ್‌ ಸಹಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಗ್ರಾಮೀಣ ಜನರ ಬದುಕನ್ನು ಗಟ್ಟಿಗೊಳಿಸಿದ ಇಬ್ಬರು ಸಹಕಾರಿ ಧುರೀಣರಿಗೆ ಸಹಕಾರ ರತ್ನ ಪ್ರಶಸ್ತಿ ದೊರೆತಿರುವುದು ನಮಗೆಲ್ಲರಿಗೂ ಸಂತಸದ ಸಂಗತಿ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಭಾಸ್ಕರ್ ಕೋಟ್ಯಾನ್, ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದೇನೆ ಎಂದರು. ಕಡಾರಿ ರವೀಂದ್ರ ಪ್ರಭು ಮಾತನಾಡಿ, ಸಹಕಾರಿ ರತ್ನ ಪ್ರಶಸ್ತಿ ದೊರೆತಿರುವುದು ನನ್ನ ಜೀವನದ ಮರೆಯಲಾರದ ಕ್ಷಣ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌, ಸಹಕಾರಿ ಕ್ಷೇತ್ರದಲ್ಲಿ ಅವಿಭಜಿತ ಜಿಲ್ಲೆ ಮುಂಚೂಣಿಯಲ್ಲಿದೆ. ಅವಿಭಜಿತ ಜಿಲ್ಲೆಗೆ 10 ಸಹಕಾರಿ ರತ್ನ ಪ್ರಶಸ್ತಿ ದೊರೆತಿದ್ದು, ಪಕ್ಷ ಭೇದವಿಲ್ಲದೇ ಪ್ರಶಸ್ತಿಗೆ ಹೆಸರು ಆಯ್ಕೆಯಾಗಿದೆ ಎಂದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮುನಿಯಾಲು, ಸಹಕಾರ ರತ್ನ ಪುರಸ್ಕೃತರ ಅಭಿನಂದನಾ ಸಮಿತಿಯ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್‌ ನಾಯಕ್‌ ಉಪಸ್ಥಿತರಿದ್ದರು.
ಕಾರ್ಕಳ ಹೆಬ್ರಿ ತಾಲೂಕಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೀರೆ ರವೀಂದ್ರ ನಾಯಕ್‌ ಸ್ವಾಗತಿಸಿ, ಉದಯ್‌ ಕುಮಾರ್‌ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.‌ ಅಭಿನಂದನಾ ಸಮಿತಿಯ ಕೋಶಾಧಿಕಾರಿ ಸಂತೋಷ ರಾವ್‌ ವಂದಿಸಿದರು.



































































































error: Content is protected !!
Scroll to Top