ಹಿಂದೂಗಳ ಬಗ್ಗೆ ತುಟಿಪಿಟಿಕ್ ಎನ್ನದ ರೀತಿಯಲ್ಲಿ ಉತ್ತರಿಸಬೇಕಿದೆ – ಸುನಿಲ್ ಕುಮಾರ್
ಕಾರ್ಕಳ : ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ನಿರಂತರ ಅಪಪ್ರಚಾರದೊಂದಿಗೆ ಧಾರ್ಮಿಕ ಕೇಂದ್ರಗಳ ನಂಬಿಕೆಯನ್ನು ದುರ್ಬಲಗೊಳಿಸುವ, ಅರಾಜಕತೆ ಸೃಷ್ಟಿಸುವ, ಜಾತಿ – ಜಾತಿಗಳ ನಡುವೆ ಗೊಂದಲ ನಿರ್ಮಾಣ ಮಾಡುವ ಹುನ್ನಾರ ಮಾಡಲಾಗುತ್ತಿದೆ. ಇದಕ್ಕೆಲ್ಲ ಸುಮ್ಮನಿರದೇ ಹಿಂದೂಗಳ ಬಗ್ಗೆ ತುಟಿಪಿಟಿಕ್ ಎನ್ನದ ರೀತಿಯಲ್ಲಿ ಉತ್ತರಿಸಬೇಕಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಸೆ. 10ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರತ್ಯೆಗೆ ಹಾಗೂ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಹೆಸರಿಗೆ ಕಳಂಕ ತರುತ್ತಿರುವುದನ್ನು ವಿರೋಧಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಕಾರ್ಕಳ ತಾಲೂಕು ಇದರ ನೇತೃತ್ವದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿದರು.
ಧರ್ಮಸ್ಥಳ ವಿಚಾರದಲ್ಲಿ ವಿದೇಶಿ ಶಕ್ತಿಗಳ ಪಿತೂರಿಯಿದೆ. ಷಡ್ಯಂತ್ರಿಗಳು ಧರ್ಮಸ್ಥಳದ ವಿರುದ್ಧ ಸಂಶಯವನ್ನು ಹುಟ್ಟಿಸುವ ಕಾರ್ಯ ಮಾಡಿದರು. ನಿಧಾನವಾಗಿ ವಾಸ್ತವಿಕತೆ ಗೊತ್ತಾಗುತ್ತಿದ್ದಂತೆ ಗ್ರಾಮ ಗ್ರಾಮಗಳಲ್ಲಿ ಜನ ಎಚ್ಚೆತ್ತುಕೊಂಡಿದ್ದಾರೆ ಎಂದು ಸುನಿಲ್ ಕುಮಾರ್ ಹೇಳಿದರು.

ಎಚ್ಚೆತ್ತುಕೊಳ್ಳಬೇಕಿತ್ತು
ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಧರ್ಮಸ್ಥಳಕ್ಕೆ ಎಸ್ಐಟಿ ತನಿಖೆಯ ಸರ್ಟಿಫಿಕೆಟ್ ಅಗತ್ಯವಿಲ್ಲ. ಈಗಾಗಲೇ ಸಮಾಜ ಸರ್ಟಿಫಿಕೆಟ್ ಕೊಟ್ಟಾಗಿದೆ. ಯೂಟ್ಯೂಬರ್ ಸಮೀರ್ ವೀಡಿಯೋ ಹರಿಬಿಟ್ಟಾಗ, ಮಕ್ಕಳಿಲ್ಲದ ಒಬ್ಬ ಮಹಿಳೆ ಮಗಳ ಕಥೆ ಕಟ್ಟಿದಾಗ, ಬುರುಡೆ ಹಿಡಿದುಕೊಂಡು ಮುಸುಕುಧಾರಿ ಬಂದಾಗಲೇ ಇದರ ದೂರದೃಷ್ಟಿ ಏನು ಎಂಬುದನ್ನು ಸಮಾಜ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದರು.
ಉತ್ತರಿಸಬೇಕಿದೆ
ಎಡಪಂಥೀಯರು ಯಾವತ್ತಿಗೂ ಭಾರತೀಯತೆಯನ್ನು, ರಾಷ್ಟ್ರೀಯತೆಯನ್ನು, ನಮ್ಮ ಸಂಸ್ಕೃತಿಯನ್ನು ಒಪ್ಪಿದವರಲ್ಲ. ಈ ಬಗ್ಗೆ ಸಮಸ್ತ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಸಜ್ಜನರು ಸಜ್ಜನಿಕೆಯನ್ನು ಬಿಟ್ಟು ಹೊರಗೆ ಬರಬೇಕಾಗಿದೆ. ಇದು ಧರ್ಮಸ್ಥಳದ ರಕ್ಷಣೆಯಲ್ಲ, ನಮ್ಮ ಸಮಾಜದ, ನಮ್ಮ ಹಿಂದುತ್ವದ, ನಮ್ಮ ಸಂಸ್ಕೃತಿಯ ರಕ್ಷಣೆ ಎಂಬುದನ್ನು ತಿಳಿಯಬೇಕಾಗಿದೆ. ಜನಾಗ್ರಹ ಸಭೆ ಇನ್ನು ಯಾವತ್ತೂ ನಮ್ಮ ರಾಜ್ಯದಲ್ಲಿ ನಡೆಯಬಾರದು. ಅಂತಹ ಉತ್ತರವನ್ನು ಈ ಪ್ರಕರಣದಲ್ಲಿ ನೀಡಬೇಕು ಎಂದು ಆಗ್ರಹಿಸಿದರು.

ಅಂತಾರಾಷ್ಟೀಯ ಮಟ್ಟದಲ್ಲಿ ಪಿತೂರಿ – ವಸಂತ ಗಿಳಿಯಾರ್
ಸಾಮಾಜಿಕ ಕಾರ್ಯಕರ್ತ ವಸಂತ ಗಿಳಿಯಾರ್ ಮಾತನಾಡಿ, ಈ ಹಿಂದೆ ಧರ್ಮಸ್ಥಳದ ಪರವಾಗಿ ಸತ್ಯ, ನ್ಯಾಯ, ಧರ್ಮದ ಪರವಾಗಿ ಸಿಡಿದೆಳಲು ದೊಡ್ಡ ವೇದಿಕೆಯನ್ನು ಸಿದ್ಧಪಡಿಸಿದ ವೇದಿಕೆ ಕಾರ್ಕಳ. 12 ವರ್ಷದ ಹಿಂದಿನ ಕಥೆಯೊಂದು ಇಂದಿಗೂ ಜೀವಂತವಾಗಿದೆ ಎಂದರೆ ಅದರ ಹಿಂದೆ ಎಷ್ಟು ದೊಡ್ಡ ಷಡ್ಯಂತ್ರ ಇದೆ ಎಂದು ನಮಗೆ ತಿಳಿಯುತ್ತದೆ. ಇದಕ್ಕೆ ಬುರುಡೆ ಪ್ರಕರಣ, ಸುಜಾತ ಭಟ್ ಕಟ್ಟು ಕತೆಯೇ ಪ್ರಮುಖ ಸಾಕ್ಷಿ. ಹಿಂದೂಗಳನ್ನು ಒಡೆಯುವ ಷಡ್ಯಂತ್ರ ಹಿಂದಿನಿಂದಲೇ ನಡೆಯುತ್ತಾ ಬಂದಿದೆ. ನಾವೆಲ್ಲರೂ ಇದನ್ನು ಮೆಟ್ಟಿ ನಿಂತು ಸತ್ಯ ಮತ್ತು ಸಜ್ಜನರ ಪರವಾಗಿ ನಿಲ್ಲೋಣ ಎಂದರು.
ಕಾರ್ಕಳ ಜೈನ ಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ, ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ, ಬೈಲೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಪ್ರಭೊದನಂದ ಮಹಾರಾಜ್ ಆಶೀರ್ವಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಧರ್ಮಸ್ಥಳದ ವಿರುದ್ಧ ಕೆಲವೊಂದು ದುಷ್ಟಶಕ್ತಿಗಳು ಕಾರ್ಯಾಚರಿಸುತ್ತಿವೆ. ಇಂದು ಧರ್ಮಸ್ಥಳ ನಾಳೆ ಇನ್ನೊಂದು ಕ್ಷೇತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಇದರ ವಿರುದ್ಧ ಹೋರಾಡೋಣ ಎಂದರು.
ಭಾವನಾತ್ಮಕ ಸಂಗತಿಯೇ ಷಡ್ಯಂತ್ರಿಗಳ ಬಂಡವಾಳ – ಜಿತೇಂದ್ರ ಕುಂದೇಶ್ವರ
ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದು ಕೇವಲ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವಲ್ಲ ಬದಲಾಗಿ ಸಮಸ್ತ ಹಿಂದೂ ಸಮಾಜ, ಸಮಸ್ತ ಭಾರತದ ಅರಾಜಕತೆಗಾಗಿ ಮಾಡುತ್ತಿರುವ ಷಡ್ಯಂತ್ರ. ಇದರೊಂದಿಗೆ ನಮ್ಮ ನಂಬಿಕೆಯನ್ನು, ನಮ್ಮ ಭಾವನೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಅನನ್ಯ ಭಟ್ ಎನ್ನುವಂತಹ ಹೆಣ್ಣು ಮಗಳ ಬಗ್ಗೆ ಸುಳ್ಳು ಕತೆ, ಸುಜಾತ ಭಟ್ ಎಂಬ ಹಿರಿ ಜೀವದಿಂದ ಕಟ್ಟು ಕಥೆ, ಪೊಳ್ಳು ಸ್ವಾಮೀಜಿಗಳಿಂದ ಬೇಡದ ಹೇಳಿಕೆ ನೀಡುವ ಮೂಲಕ ಜನರನ್ನು ಮಂಗ ಮಾಡಿರುವುದು ಇದಕ್ಕೆ ಉತ್ತಮ ನಿದರ್ಶನ. ನಾನು ಮೊದಲಿನಿಂದಲೂ ಸತ್ಯ ಪರವಾಗಿಯೇ ಹೋರಾಟ ಮಾಡುತ್ತಿದ್ದೇನೆ. ಧರ್ಮಸ್ಥಳದ ಪರವಾಗಿ ಪತ್ರಕರ್ತನಾಗಿ ನನ್ನ ಅಳಿಲ ಸೇವೆಗೆ ಸಹಕರಿಸಿದ ಜನತೆಗೆ ಧನ್ಯವಾದ. ಇನ್ನಾದರೂ ಜನತೆ ಇದರ ಬಗ್ಗೆ ಜಾಗೃತರಾಗಬೇಕಿದೆ ಎಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸದಸ್ಯ, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ನೆಲ್ಯಾಡಿ ಬೀಡು ಹೊಯ್ಸಳರ ಕಾಲದಿಂದ ಧರ್ಮ ಸಂರಕ್ಷಣೆ ಮಾಡಿಕೊಂಡು ಬಂದಿರುವ ಕುಟುಂಬ. ಅಂದಿನಿಂದ ಇಲ್ಲಿಯವರೆಗೆ ಯಾರಿಗೂ ಧರ್ಮಸ್ಥಳವನ್ನು ಕೆಡವಲು ಸಾಧ್ಯವಾಗಲಿಲ್ಲ. ಎಲ್ಲಾ ಧರ್ಮ, ಜಾತಿಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದವರು ಖಾವಂದರು. ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲ. ಅಂತಹ ಮಾನವೀಯತೆಯ ದಾರಿಯಲ್ಲಿ ನಡೆಯುತ್ತಿರುವವರು ವಿರೇಂದ್ರ ಹೆಗ್ಗಡೆಯವರು. ಆದ್ದರಿಂದ ಧರ್ಮಸ್ಥಳದ ಬಗ್ಗೆ ಜನರಿಗೆ ಮನವರಿಕೆ ಮಾಡಿಸೋಣ. ತಪ್ಪು ಮಾಡಿವರಿಗೆ ಶಿಕ್ಷೆ ಆಗಬೇಕು. ತಪ್ಪು ಮಾಡದವರು ಅದರ ಪ್ರತಿಫಲ ಪಡೆಯಬೇಕು ಎಂದರು.
ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ್ ಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಇತರೆ ಧರ್ಮದವರ ಬಗ್ಗೆ ಯಾರೇ ಏನು ಮಾತನಾಡಿದರೂ ಅವರ ಧರ್ಮದವರು ಒಗ್ಗಟ್ಟಾಗಿ ನಿಲ್ಲತ್ತಾರೆ. ಆದರೆ, ಹಿಂದೂ ಕ್ಷೇತ್ರದ ಬಗ್ಗೆ ಏನೇ ಟೀಕೆ ಟಿಪ್ಪಣಿ ಬಂದರೂ ಅದರ ಬಗ್ಗೆ ಹಿಂದೂ ಸಮಾಜ ಚಿಂತಿಸದಿರುವುದು ದುರಂತ. ಧರ್ಮಸ್ಥಳದ ಬಗ್ಗೆ ಇಷ್ಟೊಂದು ಟೀಕೆಗಳಾದರೂ ಮಾತನಾಡಲಿಲ್ಲ, ಆದರೆ ಈಗ ನಿಧಾನವಾದರೂ ಸಮಾಜ ಎಚ್ಚೆತ್ತುಕೊಂಡಿದೆ ಇದನ್ನು ಮುಂದುವರಿಸೋಣ. ಯಾವುದೇ ಹಿಂದೂ ಕ್ಷೇತ್ರದ ಬಗ್ಗೆ ಯಾರೇ ಮಾತನಾಡಿದರೂ ಅದನ್ನು ಬಲವಾಗಿ ಖಂಡಿಸೋಣ ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಮಾತನಾಡಿ, ಪುಣ್ಯಕ್ಷೇತ್ರ ಧರ್ಮಸ್ಥಳದ ಬಗ್ಗೆ ಹೆಸರೆತ್ತಿ ಮಾತನಾಡಂತಹ ನಂಬಿಕೆಯ ಪರಂಪರೆ ನಮ್ಮ ನಾಡಿನಲ್ಲಿತ್ತು. ಆದರೆ ಇಂದು ಕೆಲವರು ಕ್ಷೇತ್ರದ ಬಗ್ಗೆ, ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ತಾಯಂದಿರು ಎಚ್ಚೆತ್ತುಕೊಳ್ಳಬೇಕಾಗಿದೆ. ಇಂದು ಬೆಳಗಿದ ಧರ್ಮಜ್ಯೋತಿಯನ್ನು ಗ್ರಾಮ ಗ್ರಾಮಗಳಲ್ಲಿ, ಮನೆ ಮನೆಗಳಲ್ಲಿ ಬೆಳಗುತ್ತೇವೆ ಎಂದು ಸಂಕಲ್ಪವನ್ನು ತೊಡೋಣ. ಒಂದು ಶಕ್ತಿಯಾಗಿ ನಮ್ಮೆಲ್ಲರಿಗೂ ಪ್ರೇರಣೆಯಾಗಿ ಧರ್ಮಕಾರ್ಯ ಮಾಡುತ್ತಿರುವ ಪೂಜ್ಯ ಖಾವಂದರ ಪರವಾಗಿ, ಧರ್ಮಸ್ಥಳ ಪರವಾಗಿ ನಿಲ್ಲೋಣ ಎಂದರು.

ಅಂದು ಏಕೆ ಪ್ರಶ್ನಿಸಲಿಲ್ಲ ?
ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಐಕ್ಯ ವೇದಿಕೆ ಕೇರಳ ಇದರ ರವೀಶ್ ತಂತ್ರಿ ಕುಂಟಾರು, ಅಪಪ್ರಚಾರ ಮಾಡುತ್ತಿರುವವರ ಮಾತಿಗೆಗನುಗುಣವಾಗಿ ನಾವು ಸಂಶಯ ಮಾಡುವುದನ್ನು ನಿಲ್ಲಿಸದಿದ್ದರೆ ಹಿಂದೂ ಸಮಾಜ ಒಟ್ಟಾಗಲು ಸಾಧ್ಯವಿಲ್ಲ. ಯಾರೂ ಧರ್ಮಾಧಿಕಾರಿಗಳ ಪಟ್ಟವೇರಲು ಬಯಸುತ್ತಾರೋ ಅವರು ಧರ್ಮಾಧಿಕಾರಿಗಳನ್ನು ಪಟ್ಟದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಜೈನ ಧರ್ಮದವರು ಧರ್ಮಾಧಿಕಾರಿಗಳು ಆಗಬಹುದೇ ಎಂದು ಪ್ರಶ್ನಿಸುವ ಮುಟ್ಟಾಳರು ಪೂಜ್ಯ ಖಾವಂದರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದಾಗ ಏಕೆ ಅದನ್ನು ಪ್ರಶ್ನಿಸಲಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಮಾತು, ಕೃತಿ, ಮಾಡುವ ಕಾರ್ಯಕ್ಕೆ ಮಿತಿಯಿರಬೇಕು. ಬರೀ ಬಾಯಿ ಮಾತಿಗೆ ನಾವು ಹಿಂದೂಗಳೆಂದು ಹೇಳುವವರನ್ನು, ನಮ್ಮ ಧಾರ್ಮಿಕ ಕೇಂದ್ರಗಳನ್ನು ನಿರ್ನಾಮ ಮಾಡಲು ಮುಂದಾಗಿರುವ ವಿದೇಶಿಗರ ಕೈ ಜೋಡಿಸುವ ಕೇಸರಿ ಶಾಲು ಹಾಕುವವರನ್ನು ಹಿಂದೂ ಎಂದು ಒಪ್ಪಲು ಸಾಧ್ಯವಿಲ್ಲ. ಹಿಂದೂಗಳೆಂದರೆ ಹಿಂದೂ ಧರ್ಮದ ರಕ್ಷಣೆಗಾಗಿ ಸದಾ ಕಾರ್ಯ ಪ್ರವೃತ್ತರಾಗಿರಬೇಕು. ಖಾವಂದರ ನೇತೃತ್ವದಲ್ಲಿ ಧರ್ಮಸ್ಥಳದ ಮುಖೇನ ನಡೆಯುತ್ತಿರುವ ವಿದ್ಯಾದಾನ, ಅನ್ನದಾನ, ಆರ್ಥಿಕ ಸಹಕಾರ, ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಕಾರ್ಯಗಳು ಸಮಾಜಕ್ಕೆ ಮಾದರಿ. ಆದರೆ, ಇದರ ಸದುಪಯೋಗ ಪಡೆದುಕೊಂಡವರೇ ಅಪಪ್ರಚಾರದಲ್ಲಿ ತೊಡಗಿರುವುದು ದುರಂತ. ಇಂತಹ ಸಾಮಾಜಿಕ, ಧಾರ್ಮಿಕ ನಾಯಕನನ್ನು ನಿರ್ನಾಮ ಮಾಡದಿದ್ದರೆ ಸಮಾಜವನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ತಿಳಿದವರು ಧರ್ಮಸ್ಥಳದಂತಹ ಧಾರ್ಮಿಕ ಕೇಂದ್ರಗಳ ವಿರುದ್ಧ ಅಪಪ್ರಚಾರ ಮಾಡುವಂತಹ ಹೇಯ ಕೃತ್ಯಕ್ಕೆ ತೊಡಗಿದ್ದಾರೆ. ನಮ್ಮ ಧರ್ಮಗುರುಗಳು, ಧಾರ್ಮಿಕ ನೇತಾರರ ಬಗ್ಗೆ ಅಪಸ್ವರ ಬರುವಾಗ ಇದರ ಬಗ್ಗೆ ನಾವು ಸಂಶಯ ಪಟ್ಟುಕೊಂಡು ದುಷ್ಟರಿಗೆ ಕೈ ಜೋಡಿಸದೆ ನಾವೆಲ್ಲರೂ ಎಚ್ಚೆತ್ತುಕೊಂಡು ಸಮಸ್ತ ಹಿಂದೂ ಸಮಾಜ ನಮ್ಮ ಧಾರ್ಮಿಕ ಶೃದ್ಧಾಕೇಂದ್ರಗಳ ಪರವಾಗಿ ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ಸಂಚಾಲಕ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅವರು ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಮಂಡಿಸಿದರು.

ನಿರ್ಣಯ 1
ನಾಡಿನ ಪವಿತ್ರ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮತ್ತು ನಿರಂತರ ಅಪಪ್ರಚಾರದ ವ್ಯವಸ್ಥಿತ ಷಡ್ಯಂತ್ರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ಸಂಸ್ಥೆಯನ್ನು (SIT) ರಚಿಸಿ ಪಾರದರ್ಶಕ ಮತ್ತು ನ್ಯಾಯಯುತ ತನಿಖೆಗೆ ಅನುಕೂಲ ಮಾಡಿಕೊಟ್ಟ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಉಪ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಹಾಗೂ (SIT) ತಂಡದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಲು ನಿರ್ಣಯಿಸಲಾಯಿತು.
ನಿರ್ಣಯ 2
ಹಿಂದೂ ಧಾರ್ಮಿಕ ಪುಣ್ಯಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ದ ನಡೆಯುತ್ತಿರುವ ರಾಷ್ಟ್ರ ಮಟ್ಟದ ಈ ವ್ಯವಸ್ಥಿತ ಷಡ್ಯಂತ್ರವನ್ನು ಮತ್ತು ಸಾಮಾಜಿಕ ಜಾಲತಾಣಗಳ ಹಾಗೂ ದೃಶ್ಯ ಮಾಧ್ಯಮದ ಮೂಲಕ ನಡೆಯುತ್ತಿರುವ ಸುಳ್ಳು ಪ್ರಕರಣವನ್ನು ಕಠಿಣವಾಗಿ ಖಂಡಿಸಿ, ಇಂತಹ ಪ್ರಚಾರ ಮತ್ತು ಪ್ರಸಾರವನ್ನು ತಕ್ಷಣ ತಡೆಗಟ್ಟಿ ಇದನ್ನು ನಡೆಸುತ್ತಿರುವ ವ್ಯಕ್ತಿಗಳ, ಸಂಘ ಸಂಸ್ಥೆಗಳ ಹಾಗೂ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿರುವ ವಾಹಿನಿಗಳ ವಿರುದ್ಧ ಸರ್ಕಾರ ಕಾನೂನಾತ್ಮಕ ನಿರ್ದಾಕ್ಷಿಣ್ಯ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಈ ತನಿಖೆಯನ್ನು SIT ನಡೆಸುತ್ತಿರುವುದು ತೃಪ್ತಿಕರವಾಗಿದ್ದು, ಈ ವಿಚಾರ ರಾಜ್ಯವನ್ನು ಮೀರಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿರುವುದರಿಂದ ಹಾಗೂ ವಿದೇಶಿ ಹಣ, ಈ ದುಷ್ಕೃತ್ಯಕ್ಕೆ ಬಳಕೆಯಾದ ಬಗ್ಗೆ ಅನುಮಾನವಿರುವುದರಿಂದ ಇದನ್ನು ವಿಶೇಷ ತನಿಖೆಗಾಗಿ NIA ಗೆ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ.
ನಿರ್ಣಯ 3
ಮುಂದಿನ ದಿನಗಳಲ್ಲಿ ನಮ್ಮ ಯಾವುದೇ ಶ್ರದ್ದಾ ಕೇಂದ್ರಗಳ ವಿರುದ್ದ, ಧಾರ್ಮಿಕ ನಂಬಿಕೆಗಳ ವಿರುದ್ದ ಮತ್ತು ಧಾರ್ಮಿಕ ಮುಖಂಡರ ವಿರುದ್ದ ಇಂತಹ ವ್ಯವಸ್ಥಿತ ಷಡ್ಯಂತ್ರಗಳು ನಡೆದರೆ ಸಮಾಜದ ಧಾರ್ಮಿಕ ಮುಖಂಡರ ಮುಂದಾಳತ್ವದಲ್ಲಿ ಸಂಘಟಿತರಾಗಿ ಸಮರ್ಥ ಯೋಜನೆಯನ್ನು ರೂಪಿಸಿ ಅದರ ವಿರುದ್ಧ ಹೋರಾಡಲಾಗುವುದು ಎಂದು ನಿರ್ಣಯಿಸಲಾಯಿತು.
ನಿರ್ಣಯ 4
ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಪ್ರಸ್ತುತ ನಡೆಯುತ್ತಿರುವ ಷಡ್ಯಂತ್ರಗಳ ಹಿಂದೆ ವ್ಯವಸ್ಥಿತ ಪಿತೂರಿ ಇರುವುದು ಬಯಲಾಗಿದ್ದು, ರಾಷ್ಟ್ರಮಟ್ಟದಲ್ಲಿ ಇಂತಹ ಸಂಚುಗಳು ನಡೆಯುತ್ತಿರುವುದರಿಂದ ಸಂಘಟನಾ ದೃಷ್ಠಿಯಿಂದ ಧರ್ಮಸಂರಕ್ಷಣಾ ಸಮಿತಿಯನ್ನು ಇನ್ನಷ್ಟು ಬಲಪಡಿಸಿ ವರ್ಷಕ್ಕೆ ಒಂದು ಬಾರಿ ಧರ್ಮಸಂರಕ್ಷಣಾ ಸಮಾವೇಶವನ್ನು ಆಯೋಜಿಸುವುದಕ್ಕೆ ಸೂಕ್ತ ಕಾರ್ಯಯೋಜನೆಗಳನ್ನು ರೂಪಿಸಲು ನಿರ್ಣಯಿಸಲಾಯಿತು.
ನಿರ್ಣಯ 5
ಇಂದು ಅಪಪ್ರಚಾರದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳನ್ನು ದಮನಿಸಲು ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಲು ರಾಕ್ಷಸೀಪ್ರವೃತ್ತಿಯವರು ಸಂಚು ಮಾಡಿದ್ದಾರೆ/ಮಾಡುತ್ತಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ನಾವೆಲ್ಲರೂ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರೊಂದಿಗೆ ದೃಢವಾಗಿ ನಿಂತು ಧರ್ಮ ಸಂರಕ್ಷಣೆಯನ್ನು ಮಾಡಲು ಕಟಿಬದ್ದರಾಗಿರುತ್ತೇವೆ ಎಂದು ತ್ರಿಕರಣಪೂರ್ವಕವಾಗಿ ತೀರ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯರಾದ ಉದ್ಯಮಿ ಬೋಳ ಪ್ರಭಾಕರ ಕಾಮತ್ ಮಾತನಾಡಿ, ಖಾವಂದರು ಧರ್ಮ ರಕ್ಷಣೆಗಾಗಿ, ಗ್ರಾಮ ಗ್ರಾಮಗಳ ಅಭಿವೃದ್ಧಿಗಾಗಿ, ಮಹಿಳಾ ಸಬಲೀಕರಣಕ್ಕಾಗಿ, ಸಮಸ್ತ ಸಮಾಜದ ಅಭಿವೃದ್ಧಿಗಾಗಿ ಮಾಡಿದ ಕಾರ್ಯ ಅನನ್ಯ. ಇಂತಹವರ ಬಗ್ಗೆ ಅಪಪ್ರಚಾರ ಒಂದು ಕಪ್ಪುಚುಕ್ಕೆಯಿದ್ದಂತೆ. ಈಗ ಹಿಂದೂ ಸಮಾಜ ಇದರ ಬಗ್ಗೆ ಎಚ್ಚೆತ್ತುಕೊಂಡಿದೆ, ಆದ್ದರಿಂದ ದುಷ್ಟ ಶಕ್ತಿಯ ನಾಶಕ್ಕಾಗಿ ಮತ್ತಷ್ಟು ಬಲವಾಗಿ ನಿಲ್ಲೋಣ ಎಂದರು.
ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಉದ್ಯಮಿ ಗಣಪತಿ ಹೆಗ್ಡೆ ಬೋರ್ಕಟ್ಟೆ, ಕಾರ್ಕಳ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀರಾಮ್ ಭಟ್ ಸಾಣೂರು, ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಸಾಣೂರು ರಾಜೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸನಾತನ ಸಂಸ್ಥೆಯ ಅಶ್ವಿನಿ ನಾಯಕ್, ಕಾರ್ಕಳ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ್ ಪ್ರಭು, ಗೋವಾ ತುಳು ಕೂಟ ಅಧ್ಯಕ್ಷ ಗಣೇಶ್ ಶೆಟ್ಟಿ, ಅಡಪಾಡಿ ಪಳ್ಳಿ ಶ್ರೀ ಉಮಾಮಹೇಶ್ವರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್, ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಕಾರ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷ ರಾಮಚಂದ್ರ ಆಚಾರ್, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಕ್ರಂ ಹೆಗ್ಡೆ, ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ನಂದ ಕುಮಾರ್ ಹೆಗ್ಡೆ, ಕರ್ನಾಟಕ ಗೋ ರಕ್ಷಕ್ ಪ್ರಮುಖ್ ಸುನಿಲ್ ಕೆ.ಆರ್., ಹಿಂದೂ ಜಾಗರಣಾ ವೇದಿಕೆ ಪ್ರಾಂತ್ಯ ಸದಸ್ಯ ಮಹೇಶ್ ಶೆಣೈ, ಕಾರ್ಕಳ ತಾ. ಪಂ. ಮಾಜಿ ಅಧ್ಯಕ್ಷ ಸುಂದರ್ ಬಿ., ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉಗ್ಗಪ್ಪ ಪರವ ಕೆರ್ವಾಶೆ ಹಾಗೂ ಗೋವಿಂದ ಬಂಗೇರ ನೀರೆ, ಬಜಗೋಳಿ ಕೊಪ್ಪಲ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಸುಧಾಕರ ಸಾಲ್ಯಾನ್, ಉದ್ಯಮಿ ಉದಯ್ ಸಾಲ್ಯಾನ್ ಬಜಗೋಳಿ, ಕಾರ್ಕಳ ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಕುಲಾಲ್, ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ್ ಗೌಡ, ದುರ್ಗಾ ಶ್ರೀ ಅಂಬಾಭವಾನಿ ದೇವಸ್ಥಾನದ ಮೊಕ್ತೇಸರ ಶಂಕರ ನಾಯ್ಕ್ ಉಪಸ್ಥಿತರಿದ್ದರು.
ಆರತಿ ಪೈ ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ಸಂಚಾಲಕ ಉದಯ್ ಕುಮಾರ್ ಹೆಗ್ಡೆ ಯರ್ಲಪಾಡಿ ಸ್ವಾಗತಿಸಿದರು, ಧಾರ್ಮಿಕ ಚಿಂತಕ ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕುಮಾರ್ ವಂದಿಸಿದರು.








































