ಕಾರ್ಕಳ : ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್ ಇವರು ಆಯೋಜಿಸುವ 15 ವರ್ಷ ವಯೋಮಿತಿಯೊಳಗಿನ ಶಾಲಾ ಮಕ್ಕಳ ಬಾಲಕಿಯರ ವಾಲಿಬಾಲ್ ಪಂದ್ಯಾಟಕ್ಕೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕರ್ನಾಟಕದ ತಂಡದಲ್ಲಿ ಕಾರ್ಕಳ ಕ್ರೈಸ್ತಕಿಂಗ್ ಆಂಗ್ಲ ಮಾದ್ಯಮ ಶಾಲೆಯ 9ನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ಸ್ಥಾನವನ್ನು ಪಡೆದಿದ್ದಾರೆ.
ಆ. 20 ರಂದು ಬೆಂಗಳೂರಿನಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಆಟಗಾರು ಭಾಗವಹಿಸಿದ್ದು ಕರ್ನಾಟಕದಿಂದ ಆಯ್ಕೆಯಾದ ಒಟ್ಟು ಎಂಟು ಆಟಗಾರರಲ್ಲಿ ಶಗುನ್ ಎಸ್. ವರ್ಮ ಹೆಗ್ಡೆ ಉಡುಪಿ ಜಿಲ್ಲೆಯ ಏಕೈಕ ಆಟಗಾರ್ತಿಯಾಗಿದ್ದಾರೆ.
ಆ. 28 ರಿಂದ ಮೂರು ದಿನಗಳ ಕಾಲ ಪುಣೆಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಶಿಬಿರದಲ್ಲಿ ವಿಶ್ವ ತಂಡದ ಆಯ್ಕೆ ನಡೆಯಲಿದ್ದು. ಅಲ್ಲಿ ಆಯ್ಕೆಯಾದ ಆಟಗಾರ್ತಿಯರು ಡಿ. 4 ರಿಂದ 13 ವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯುವ ವಿಶ್ವ ಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಶಗುನ್ ಎಸ್. ವರ್ಮ ಹೆಗ್ಡೆ ಅವರು ಶ್ರುತಿ ಮತ್ತು ಸಂದೇಶ್ ವರ್ಮ ದಂಪತಿಯ ಪುತ್ರಿ. ಜೋಡುರಸ್ತೆ ಕೊರಚೊಟ್ಟು ಕ್ರೀಡಾಂಗಣದಲ್ಲಿ ಸಂತೋಷ್ ಡಿ’ಸೋಜಾ, ಜೀವನ್ ಡಿ’ ಸಿಲ್ವಾ, ಹಾಗೂ ಜೈರಾಜ್ ಪೂಜಾರಿ ಇವರಿಂದ ಕ್ರೀಡಾ ತರಬೇತಿಯನ್ನು ಪಡೆದಿರುತ್ತಾರೆ.










































