ಬೆಂಗಳೂರು : ಸಹಕಾರ ಸಚಿವ ಕೆ. ಎನ್. ರಾಜಣ್ಣ ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಚಿವ ಕೆ.ಎನ್. ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜೀನಾಮೆ ಬಗ್ಗೆ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಬಳಿಕ ಸ್ಪಷ್ಟನೆ ನೀಡುತ್ತೇನೆ ಎಂದು ಹೇಳಿದರು.
ಆರಂಭದಲ್ಲಿ ಸೆಪ್ಟೆಂಬರ್ ಕ್ರಾಂತಿಯ ಹೇಳಿಕೆ ನೀಡಿ ರಾಜಣ್ಣ ಸಂಚಲನ ಮೂಡಿಸಿದ್ದರು. ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡಿದ ನಂತರ ರಾಜಣ್ಣ ನಮ್ಮ ಅವಧಿಯಲ್ಲಿ ಮತಪಟ್ಟಿ ಸಿದ್ಧವಾಗಿತ್ತು ಎಂದು ಹೇಳಿದ್ದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರು ಕಣ್ಣುಮುಚ್ಚಿ ಕುಳಿತಿದ್ದರೇ ಎಂದು ರಾಜಣ್ಣ ಪ್ರಶ್ನಿಸಿದ್ದರು. ರಾಜಣ್ಣ ಅವರ ಈ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ತಂದಿತ್ತು. ಈ ಹೇಳಿಕೆಯ ನಂತರ ಹೈಕಮಾಂಡ್ ರಾಜಣ್ಣಗೆ ರಾಜೀನಾಮೆ ಸಲ್ಲಿಸಲು ಸೂಚನೆ ನೀಡಿತ್ತು.

ರಾಜಣ್ಣ ಹೇಳಿದ್ದೇನು?
ಮತಗಳ್ಳತನ ಎಂದು ನಾವು ಹೇಳುತಿದ್ದೇವೆ. ಇದು ನಡೆದಿರೋದು ನಿಜ. ಆದರೆ ನಾವು ಮೊದಲು ನೋಡಿಕೊಳ್ಳದೇ ಈಗ ಹೇಳುತ್ತಿರೋದು ನಮಗೆ ನಾಚಿಕೆ ಆಗಬೇಕು. ನಮ್ಮದೇ ಸರ್ಕಾರ ಇದ್ದಾಗ ವೋಟರ್ ಲಿಸ್ಟ್ ಮಾಡಿದ್ದು, ಆಗೇನು ಕಣ್ಮುಚ್ಚಿ ಕುಳಿತಿದ್ರಾ ಅಂತ ಸಚಿವ ಕೆ.ಎನ್ ರಾಜಣ್ಣ ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.
ವೋಟರ್ ಲಿಸ್ಟ್ ಎಲ್ಲಾ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ? ಎಂದು ತಮ್ಮ ಸರ್ಕಾರವನ್ನೇ ಪ್ರಶ್ನಿಸಿದ್ದಾರೆ. ಅಲ್ಲದೇ ಈ ಅಕ್ರಮಗಳು ನಡೆದಿರೋ ಸತ್ಯ. ಇದರಲ್ಲಿ ಯಾವುದೇ ಸುಳ್ಳು ಏನಿಲ್ಲ. ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದವಲ್ಲಾ ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಅಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.


























