ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 11 ಗಂಟೆಯಿಂದ ಸಾಕ್ಷಿ ದೂರುದಾರ ವ್ಯಕ್ತಿ ತೋರಿಸಿದ ಎರಡನೇ ಜಾಗದಲ್ಲಿ ಶೋಧ ಕಾರ್ಯ ನಡೆಯಿತು. ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನೊಳಗಡೆ ಮಧ್ಯಾಹ್ನ 12:30ರವರೆಗೂ ಶೋಧ ಕಾರ್ಯ ನಡೆದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
ಅರಣ್ಯ ಪ್ರವೇಶದ ಆರಂಭದಲ್ಲೇ ಎರಡನೇ ಜಾಗವಿದ್ದು, ಅರಣ್ಯದ ಒಳಗಡೆ ಉತ್ಖನನ ನಡೆಸಲು ಯಂತ್ರ ಬಳಸಲು ಅನುಮತಿ ಇಲ್ಲದ ಕಾರಣ ಪಂಚಾಯತ್‌ನ ಇಪ್ಪತ್ತು ಮಂದಿ ಕಾರ್ಮಿಕರಿಂದ ಉತ್ಖನನ ಕಾರ್ಯ ನಡೆಯಿತು. ಆರಂಭದಲ್ಲಿ ಉದ್ದಕ್ಕೆ ಆರು ಅಡಿ, ಅಗಲಕ್ಕೆ ಐದು ಅಡಿ ಜಾಗ ಗುರುತಿಸಿ ಅಗೆಯಲಾಯಿತು.
ಊಟದ ವಿರಾಮದ ನಂತರ ದೂರುದಾರ ವ್ಯಕ್ತಿ ತೋರಿಸಿದ ಮೂರನೇ ಜಾಗದಲ್ಲಿ ಅಗೆಯುವ ಕೆಲಸ ಆರಂಭವಾಗಿದೆ.






























































