ಜು. 27ರವರೆಗೆ ಕರಾವಳಿಯಲ್ಲಿ ಭಾರಿ ಗಾಳಿ ಮಳೆ ಸಾಧ್ಯತೆ

ಉಡುಪಿ : ರಾಜ್ಯದ ಕರಾವಳಿ ಭಾಗದಲ್ಲಿ ಜು. 21ರಿಂದ ಜುಲೈ 27ರವರೆಗೆ ಹೆಚ್ಚಿನ ಗಾಳಿ (ಸುಮಾರು 50 ಕೆ.ಎಂ.ಪಿ.ಹೆಚ್) ಮಳೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಹೆಚ್ಚಿನ ಗಾಳಿ ಬೀಸುವ ಸಾಧ್ಯತೆಯಿದ್ದು ಸಮುದ್ರದ ಅಲೆಗಳ ಎತ್ತರವು ಹೆಚ್ಚಾಗಿರುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಿದೆ.
ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೀನುಗಾರರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವಂತೆ, ಕೃಷಿಕರು ಮಳೆ/ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಿಂದ ದೂರವಿರುವಂತೆ, ಮಕ್ಕಳು/ಸಾರ್ವಜನಿಕರು ಅಪಾಯಕಾರಿ ಮರ/ವಿದ್ಯುತ್ ಕಂಬದ ಹತ್ತಿರ ಸುಳಿಯದಂತೆ, ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರುವಂತೆ, ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ ನಿಲ್ಲದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಾಳಜಿ ಕೇಂದ್ರ
ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕೆಲವೊಂದು ಪ್ರದೇಶಗಳಲ್ಲಿ ಭೂಕುಸಿತವಾಗುವ ಸಂಭವವಿದೆ. ಇಂತಹ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ತಹಶೀಲ್ದಾರರ ಕಚೇರಿ ಅಥವಾ ಗ್ರಾಮ ಪಂಚಾಯತ್‌ ಸಿಬ್ಬಂದಿ ಸಂಪರ್ಕಿಸಿ ಹತ್ತಿರದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಬಹುದಾಗಿದೆ.

ತುರ್ತು ಸೇವೆಗೆ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ. 1077 ಅಥವಾ ತಾಲೂಕು ತಹಶೀಲ್ದಾರರ ಕಚೇರಿ ಉಡುಪಿ : 0820-2520417, ಕುಂದಾಪುರ : 08254-230357, ಕಾಪು : 0820-2551444, ಬ್ರಹ್ಮಾವರ : 0820-2560494, ಬೈಂದೂರು : 08254-251657, ಕಾರ್ಕಳ : 08258-230201 ಹಾಗೂ ಹೆಬ್ರಿ : 08253-250201 ಅನ್ನು ಸಂಪರ್ಕಿಸಬಹುದಾಗಿದೆ.

ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ವಿಪತ್ತನ್ನು ನಿಭಾಯಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

































































































error: Content is protected !!
Scroll to Top