1988ರ ಸಿಯೋಲ್ ಒಲಿಂಪಿಕ್ಸ್ ಡೈವಿಂಗ್ ಹೀರೋ ಗ್ರೆಗ್ ಲುಗ್ವಾನಿಸ್.

1896ರಲ್ಲಿ ಆರಂಭವಾದದ್ದು ಆಧುನಿಕ ಒಲಿಂಪಿಕ್ಸ್. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟವು ನನ್ನಂತಹ ವಿಕಸನದ ತರಬೇತುದಾರನಿಗೆ ಒಂದು ಅದ್ಭುತ ಅಧ್ಯಯನದ ವಸ್ತು. ಏಕೆಂದರೆ ಅಲ್ಲಿ ನೂರಾರು ಯಶೋಗಾಥೆಗಳು ಪ್ರತೀ ಬಾರಿ ನಡೆಯುತ್ತವೆ. ಹಾಗೆಯೇ ಜಗತ್ತಿಗೆ ಸ್ಫೂರ್ತಿ ತುಂಬಿಸುವ ಕ್ರೀಡಾಪಟುಗಳು ಈ ಒಲಿಂಪಿಕ್ಸ್ ವೇದಿಕೆಗಳಲ್ಲಿ ಹುಟ್ಟುತ್ತ ಇರುತ್ತಾರೆ.

1984ರ ಲಾಸ್ ಏಂಜಲೀಸ್ – ಗ್ರೆಗ್ ಲುಗ್ವಾನಿಸಗೆ 2 ಚಿನ್ನ
ಅಮೇರಿಕಾದ ಸರ್ವ ಶ್ರೇಷ್ಟ ಡೈವಿಂಗ್ ಪಟು, ಅದು ಗ್ರೆಗ್ ಲುಗ್ವಾನಿಸ್. ಆತನು 1976ರ ಮಾಂಟ್ರಿಯಲ್ ಒಲಿಂಪಿಕ್ಸನಲ್ಲಿ ಬೆಳ್ಳಿಯ ಪದಕವನ್ನು ಪಡೆದಿದ್ದ. 1980ರಲ್ಲಿ ನಡೆದದ್ದು ಮಾಸ್ಕೋ ಒಲಿಂಪಿಕ್ಸ್. ಸಹಜವಾಗಿ ಗ್ರೆಗ್ ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಂಡು ಚಿನ್ನದ ಪದಕದ ಕನಸು ಕಂಡಿದ್ದ. ಆದರೆ ಆ ಒಲಿಂಪಿಕ್ಸ್‌ಗೆ ಆತನ ದೇಶವಾದ ಅಮೆರಿಕವು ಬಹಿಷ್ಕಾರ ಹಾಕಿತು! ಅಲ್ಲಿಗೆ ಆತನ ಕನಸು ನುಚ್ಚುನೂರಾಯಿತು. ಆತ ಮತ್ತೆ ನಾಲ್ಕು ವರ್ಷ ಕಾಯಬೇಕಾಯಿತು.

1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕೂಟದಲ್ಲಿ ಆತನ ನಿಜವಾದ ಪ್ರತಿಭೆಯು ಪ್ರಕಾಶನಕ್ಕೆ ಬಂದಿತು. ಡೈವಿಂಗ್ ಸ್ಪರ್ಧೆಯು ಸುಲಭ ಅಲ್ಲ. 10 ಮೀ. ಪ್ಲಾಟ್ಫಾರ್ಮ್ ಮತ್ತು 3 ಮೀಟರ್ ಸ್ಪ್ರಿಂಗ್ ಬೋರ್ಡ್ ಎಂಬ ಎರಡು ಕ್ಲಿಷ್ಟವಾದ ವಿಭಾಗಗಳಲ್ಲಿ ತುರುಸಿನ ಸ್ಪರ್ಧೆಯೇ ಇರುತ್ತದೆ. ರಿಸ್ಕ್ ಫ್ಯಾಕ್ಟರ್ ಹೆಚ್ಚು. ಅದರಲ್ಲಿಯೂ ಸ್ಪ್ರಿಂಗ್ ಬೋರ್ಡನಿಂದ ಮೇಲೆ ಹಾರಿ ಗಾಳಿಯಲ್ಲಿ ಹಲವು ಗಿರಕಿಯನ್ನು ಹೊಡೆದು ನೀರಿಗೆ ಹಾರಬೇಕು. ಆಗ ದೇಹವನ್ನು ಬಿಲ್ಲಿನ ಹಾಗೆ ಬಗ್ಗಿಸುವುದು, ಹಾಗೆಯೇ ಸೆಟೆದು ನಿಲ್ಲುವುದು….. ಅವರಿಗೆ ಅಂಕಗಳನ್ನು ತಂದುಕೊಡುತ್ತದೆ.

ಹಾಗೆಯೇ ಲಾಸ್ ಏಂಜಲೀಸ್ ಒಲಿಂಪಿಕ್ಸನಲ್ಲಿ ಆತನು ಎರಡೂ ವಿಭಾಗಗಳಲ್ಲಿ ಎರಡೆರಡು ಚಿನ್ನದ ಪದಕವನ್ನು ಪಡೆದನು. ಅಂದು ಜಾಗತಿಕ ದಾಖಲೆ ಕೂಡ ಬರೆದಿದ್ದರು ಗ್ರೆಗ್.

1988ರ ಸಿಯೋಲ್ ಒಲಿಂಪಿಕ್ಸ್ ಬಂದೇ ಬಿಟ್ಟಿತು!
ಮತ್ತೆ ನಾಲ್ಕು ವರ್ಷ ಕಠಿಣವಾದ ತರಬೇತಿ ಪಡೆದು ಗ್ರೆಗ್ 1988ರ ಒಲಿಂಪಿಕ್ಸನಲ್ಲಿ ಭಾಗವಹಿಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡುತ್ತಿದ್ದನು. ಆಗಲೆ ಆತನಿಗೆ 28 ವರ್ಷ ದಾಟಿದ್ದವು. ಡೈವಿಂಗ್ ಸ್ಪರ್ಧೆಯು ಅತ್ಯಂತ ಹೆಚ್ಚು ದೈಹಿಕ ಫಿಟ್ನೆಸ್ ಬೇಡುವ ವಿಭಾಗ. ಆದ್ದರಿಂದ ಅವನ ಎಲ್ಲ ಸಹವರ್ತಿಗಳು ಈ ಬಾರಿ ಬೇಡ ಕಣೋ ಎಂಬ ಸಲಹೆ ಕೊಟ್ಟಿದ್ದರು. ಆದರೆ ಗ್ರೆಗ್ ಅವರ ಸಾಧನೆಯ ಹಸಿವು ತಣಿಯಬೇಕಲ್ಲಾ! ಆತನು ಡೈವಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ನಿರ್ಧಾರ ಮಾಡಿ ಆಗಿತ್ತು.

ದುರಂತಗಳ ಸರಮಾಲೆಯು ಆತನ ಬೆನ್ನಿಗಿತ್ತು!
ಒಲಿಂಪಿಕ್ಸ್ ಆರಂಭವಾಗುವ ಕೆಲವು ದಿನಗಳ ಹಿಂದೆ ಆತನ ತಂದೆ ಕ್ಯಾನ್ಸರ್ ಕಾಯಿಲೆಯಿಂದ ಸತ್ತು ಹೋದರು. ಒಂದು ವಾರ ಮಾತ್ರ ಇರುವಾಗ ಆತನ ಒಬ್ಬನು ಬೆಸ್ಟ್ ಫ್ರೆಂಡ್ ಏಡ್ಸನಿಂದ ಮೃತನಾದನು. ಅದೇ ಹೊತ್ತಿಗೆ ಗ್ರೆಗ್ ಕೂಡ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾನೆ. ಗ್ರಹಚಾರ ಅಂದರೆ ಆತನಿಗೂ HIV ಪಾಸಿಟಿವ್ ಬಂದಿತ್ತು! ಆ ವರದಿಯು ಬಹಿರಂಗವಾದರೆ ಆತನ ದಾಖಲೆಯ ಕನಸು ಮತ್ತೆ ಖಾಲಿ ಆಗುತ್ತಿತ್ತು. ಆದರೆ ಪುಣ್ಯಕ್ಕೆ ಹಾಗಾಗಲಿಲ್ಲ. ಈ ಎಲ್ಲ ಒತ್ತಡಗಳ ನಡುವೆಯು ಕೂಡ ಗ್ರೆಗ್ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವ ನಿರ್ಧಾರ ಮಾಡಿ ಸಿಯೋಲ್ ನಗರಕ್ಕೆ ಬಂದಿಳಿದ್ದನು. ಮೊದಲ ಸ್ಪರ್ಧೆಯೇ ಸ್ಪ್ರಿಂಗ್ ಬೋರ್ಡ್ ಡೈವಿಂಗ್. ಮೇಲೆ ಹಾರುವಾಗ ದೇಹದ ಬ್ಯಾಲೆನ್ಸ್ ತಪ್ಪಿ ಹೋಯಿತು. ತಲೆ ಹೋಗಿ ಸ್ಪ್ರಿಂಗ್ ಬೋರ್ಡ್ ಹಲಗೆಗೆ ಬಡಿಯಿತು. ರಕ್ತ ಝಿಲ್ ಎಂದು ಚಿಮ್ಮಿ ಗ್ರೆಗ್ ಪ್ರಜ್ಞೆ ತಪ್ಪಿ ನೀರಿಗೆ ಬಿದ್ದಿದ್ದನು!

ಮುಂದಿನ ಅರ್ಧ ಘಂಟೆಯ ಹೊತ್ತು ಆತನಿಗೆ ಪ್ರಜ್ಞೆಯೇ ಇರಲಿಲ್ಲ. ವೈದ್ಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿದ ಮೇಲೆ ಪ್ರಜ್ಞೆ ಬಂದಿತು. ಸ್ಪರ್ಧೆಯಿಂದ ಹಿಂದೆ ಸರಿಯುವ ವೈದ್ಯರ ಸಲಹೆಯನ್ನು ಕಿವಿಗೆ ಹಾಕಿಕೊಳ್ಳದೆ ಆತ ಮತ್ತೆ ಡೈವಿಂಗ್ ಬೋರ್ಡಿಗೆ ಬಂದಿದ್ದ. ಈ ಬಾರಿ ಸ್ಪ್ರಿಂಗ್ ಬೋರ್ಡ್ ಏರಿ ಚಿಮ್ಮುಹಲಗೆ ಹಾರಿದ್ದು ನೂರಕ್ಕೆ ನೂರು ಸಕ್ಸೆಸ್ ಆದದ್ದು ಮಾತ್ರವಲ್ಲ ಚಿನ್ನದ ಪದಕವೂ ದೊರೆಯಿತು!

ಕೆಲವೇ ನಿಮಿಷಗಳ ನಂತರ 10 ಮೀ. ಪ್ಲಾಟ್ ಫಾರ್ಮ್ ಡೈವಿಂಗನಲ್ಲಿಯೂ ಗ್ರೆಗ್ ವಿಶ್ವದಾಖಲೆಯ ಜೊತೆಗೆ ಚಿನ್ನದ ಪದಕವನ್ನು ಗೆದ್ದಾಗಿತ್ತು! ಒಂದೇ ದಿನದಲ್ಲಿ ಎರಡೆರಡು ಚಿನ್ನ ಆತ ಗೆದ್ದಾಗಿತ್ತು. ಜಗತ್ತು ನಿಬ್ಬೆರಗಾಗಿ ಆತನಿಗೆ ಹ್ಯಾಟ್ಸಾಫ್ ಎಂದಿತು.

ಗ್ರೆಗ್ ಲುಗ್ಯಾನಿಸ್ ಬರೆದರು ಇತಿಹಾಸ!
ಜಗತ್ತಿನ ಬೇರೆ ಯಾವ ಡೈವರ್ ಕೂಡ ಸತತವಾಗಿ ಎರಡು ಒಲಿಂಪಿಕ್ಸ್ ಕೂಟಗಳಲ್ಲಿ ಎರಡೆರಡು ಚಿನ್ನದ ಪದಕಗಳನ್ನು ಗೆದ್ದಿರುವ ನಿದರ್ಶನವೇ ಇರಲಿಲ್ಲ. ಜಾಗತಿಕ ಕ್ರೀಡಾಜಗತ್ತು ಆತನಿಗೆ ‘ಇತಿಹಾಸದ ಗ್ರೇಟೆಸ್ಟ್ ಡೈವರ್’ ಎಂಬ ಪ್ರಶಸ್ತಿ ಕೊಟ್ಟು ಗೌರವಿಸಿತು. ಒಟ್ಟು 5 ಒಲಿಂಪಿಕ್ಸ್ ಪದಕಗಳು ಆತನ ಹೆಸರಲ್ಲಿ ದಾಖಲಾದವು. ಅದರ ಜೊತೆಗೆ 1978, 1982 ಮತ್ತು 1986ರಲ್ಲಿ ವಿಶ್ವ ಡೈವಿಂಗ್ ಕೂಟಗಳಲ್ಲಿ ಆತನಿಗೆ ಒಟ್ಟು ಆರು ಚಿನ್ನದ ಪದಕಗಳು ದೊರೆತವು!

ಗ್ರೆಗ್ ಬಾಲ್ಯದ ಬವಣೆಗಳು ಬೆಟ್ಟದಷ್ಟು ಇದ್ದವು!
ಬಾಲ್ಯದಿಂದಲೂ ನೃತ್ಯ, ಆಕ್ರೋಬ್ಯಾಟಿಕ್ಸ್, ಜಿಮ್ನಾಸ್ಟಿಕ್ ಗ್ರೆಗ್ ಕಲಿತದ್ದು ಹೊಟ್ಟೆಪಾಡಿಗಾಗಿ. ತೀವ್ರ ಬಡತನ, ಹಸಿವು, ಅಸ್ತಮಾ ಮತ್ತು ಅಲರ್ಜಿಗಳು ಆತನಿಗೆ ದೊರೆತ ದೊಡ್ಡ ಬಳುವಳಿಗಳು. ಇದನ್ನೆಲ್ಲವನ್ನು ಗೆದ್ದು ಗ್ರೆಗ್ ಲುಗ್ವಾನಿಸ್ ವಿಶ್ವಚಾಂಪಿಯನ್ ಹೇಗಾದನು ಎಂಬುದನ್ನು ತಿಳಿಯಲು ನೀವು ಆತನ ಆತ್ಮಚರಿತ್ರೆಯ ಪುಸ್ತಕವಾದ ‘ಬ್ರೇಕಿಂಗ್ ದ ಸರ್ಫೆಸ್’ ಒಮ್ಮೆಯಾದರೂ ಓದಬೇಕು! ಹಾಗೆಯೇ ಅದು ಸಿನೆಮಾ ಕೂಡ ಆಗಿ ಜನಪ್ರಿಯ ಆಗಿದೆ.































































































error: Content is protected !!
Scroll to Top