ಹೊಸ ಕಾನೂನು ರಚನೆಗೆ ಮುಂದಾದ ರಾಜ್ಯ ಸರಕಾರ
ಬೆಂಗಳೂರು : ಆನ್ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಹೊಸ ಮಸೂದೆ ರೂಪಿಸಿದೆ. ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ದಪಡಿಸಿರುವ ರಾಜ್ಯ ಸರಕಾರ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ.
ಹೊಸ ಮಸೂದೆ ಪ್ರಕಾರ ರಾಜ್ಯ ಸರಕಾರ ಕರ್ನಾಟಕ ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ರಾಧಿಕಾರ ರಚನೆ ಮಾಡಲು ತೀರ್ಮಾನಿಸಿದೆ. ಈ ಪ್ರಾಧಿಕಾರ ಹೊಸ ಕಾನೂನಿನಂತೆ ನಿಯಮಗಳ ಜಾರಿ, ಅನುಪಾಲನೆ, ಆನ್ಲೈನ್ ಗೇಮಿಂಗ್ ಹಾಗೂ ಗ್ಯಾಂಬ್ಲಿಂಗ್ ನಿಯಂತ್ರಣ, ನಿಗಾ ಇಡಲಿದೆ. ಪ್ರಾಧಿಕಾರ ದೃಢೀಕರಿಸಿದ ಕೇವಲ ಕೌಶಲ್ಯ ಆಟಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.

ಈ ಪ್ರಸ್ತಾವಿತ ಕಾನೂನು ಪ್ರಕಾರ ಅದೃಷ್ಟದ ಆಟ (ಲಕ್ ಗೇಮ್) ಅಂದರೆ ಯಾವುದೇ ಆಟ, ಸ್ಪರ್ಧೆ ಅಥವಾ ಕ್ರಿಯೆಯ ಫಲಿತಾಂಶಗಳು ಅದೃಷ್ಟದಿಂದ ಅವಲಂಬಿತವಾಗಿರುವ ಆನ್ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಚಟುವಟಿಕೆಗಳಿಗೆ ನಿಷೇಧವಿದೆ. ಇನ್ನು, ಗೇಮ್ ಆಫ್ ಸ್ಕಿಲ್ ಹೊಂದಿರುವ ಆನ್ಲೈನ್ ಗೇಮಿಂಗ್ಗೆ ವಿನಾಯತಿ ನೀಡಲಾಗಿದೆ.
ಹೊಸ ಕಾಯ್ದೆಯಡಿ ಬೆಟ್ಟಿಂಗ್ ನಡೆಸುವವರಿಗೆ ಮೂರು ವರ್ಷ ಜೈಲುಶಿಕ್ಷೆ ಜೊತೆಗೆ 1 ಲಕ್ಷ ರೂ. ದಂಡ ಹಾಗೂ ಬೆಟ್ಟಿಂಗ್ ಪ್ರೋತ್ಸಾಹಿಸುವವರಿಗೆ 6 ತಿಂಗಳ ಕಾಲ ಜೈಲುಶಿಕ್ಷೆ ಜೊತೆಗೆ 10 ಸಾವಿರ ರೂ. ವಿಧಿಸಲಾಗುತ್ತದೆ.







































