ಪುರಿ : ವಿಶ್ವಪ್ರಸಿದ್ಧ ಪುರಿಯ ಜಗನ್ನಾಥ ರಥಯಾತ್ರೆ ಇಂದು ಪ್ರಾರಂಭವಾಗಿದೆ. ರಥಯಾತ್ರೆಯಲ್ಲಿ ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರ ವಿಗ್ರಹಗಳನ್ನು ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲದವರೆಗೆ ರಥದಲ್ಲಿ ಕರೆದೊಯ್ಯಲಾಗುತ್ತದೆ. ಈ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಉತ್ಸವವನ್ನು ವೀಕ್ಷಿಸಲು ಈಗಾಗಲೇ ಲಕ್ಷಾಂತರ ಭಕ್ತರು ಪುರಿಯನ್ನು ತಲುಪಿದ್ದಾರೆ. ರಥಯಾತ್ರೆ 9 ದಿನಗಳವರೆಗೆ ಇರಲಿದೆ.
ರಥಯಾತ್ರೆಯ ಮಹತ್ವ
ಪುರಿಯ ರಥಯಾತ್ರೆಯನ್ನು ಧರ್ಮ, ಸಂಸ್ಕೃತಿ ಮತ್ತು ಸಾಮರಸ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು, ಶ್ರೀಕೃಷ್ಣ (ಜಗನ್ನಾಥ), ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾ ತಮ್ಮ ಚಿಕ್ಕಮ್ಮನ ಮನೆಯಾದ ಗುಂಡಿಚಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಗವಂತನ ರಥದ ಹಗ್ಗವನ್ನು ಎಳೆಯುವ ಅಥವಾ ಅದನ್ನು ಮುಟ್ಟುವ ಯಾವುದೇ ಭಕ್ತನು ಪುಣ್ಯ ಮತ್ತು ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.
ಮೂರು ಬೃಹತ್ ರಥಗಳು
ನಂದಿಘೋಷ (ಭಗವಾನ್ ಜಗನ್ನಾಥನ ರಥ) 18 ಚಕ್ರಗಳನ್ನು ಹೊಂದಿದ್ದು, 45 ಅಡಿ ಎತ್ತರವಿದೆ.
ತಾಲಧ್ವಜ (ಬಲಭದ್ರ ರಥ) 16 ಚಕ್ರಗಳನ್ನು ಹೊಂದಿದೆ ಮತ್ತು 44 ಅಡಿ ಎತ್ತರವಿದೆ.
ದರ್ಪದಾಳನ (ಸುಭದ್ರಾ ರಥ) 14 ಚಕ್ರಗಳನ್ನು ಹೊಂದಿದ್ದು, 43 ಅಡಿ ಎತ್ತರವಿದೆ.

ರಥಗಳ ನಿರ್ಮಾಣ ಮತ್ತು ಅಲಂಕಾರ
ಜಗನ್ನಾಥ ದೇವರ ನಂದಿಘೋಷ, ಬಲಭದ್ರನ ತಾಳಧ್ವಜ ಮತ್ತು ದೇವಿ ಸುಭದ್ರೆಯ ದರ್ಪದಾಳನ ರಥವು ಸಂಪೂರ್ಣವಾಗಿ ಸಿದ್ಧವಾಗಿದ್ದು ಭವ್ಯವಾಗಿ ಅಲಂಕರಿಸಲ್ಪಟ್ಟಿದೆ. ಈ ಬೃಹತ್ ರಥಗಳನ್ನು ನಿರ್ಮಿಸಲು ಸಾಂಪ್ರದಾಯಿಕ ಕುಶಲಕರ್ಮಿಗಳು ತಿಂಗಳುಗಟ್ಟಲೆ ಶ್ರಮವಹಿಸಿದ್ದಾರೆ. ಈ ರಥಗಳ ಭವ್ಯತೆ ಮತ್ತು ಸಾಂಪ್ರದಾಯಿಕ ಕಲಾ ಶೈಲಿಯು ಅವುಗಳನ್ನು ಅನನ್ಯವಾಗಿಸುತ್ತದೆ.
ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಓಡಿದ ಆನೆ
ಮೆರವಣಿಗೆ ವೇಳೆ ಆನೆಯೊಂದು ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡಿದ್ದು, ಈ ವೇಳೆ ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ರಥಯಾತ್ರೆಯಲ್ಲಿ ಎರಡರಿಂದ ಮೂರು ಆನೆಗಳು ಭಾಗಿಯಾಗಿದ್ದವು. ಖಾಡಿಯಾ ಪ್ರದೇಶದಲ್ಲಿ ಆನೆ ನಿಯಂತ್ರಣ ಕಳೆದುಕೊಂಡು ಭಯಭೀತವಾಗಿ ಅಡ್ಡಾದಿಟ್ಟಿ ಓಡಿದೆ. ಈ ವೇಳೆ ಮಾವುತರೂ ಕೂಡ ಆನೆ ಹಿಂದೆ ಓಡಿದ್ದು, ಆನೆಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಆದರೆ, ನಿಯಂತ್ರಣಕ್ಕೆ ಸಿಕ್ಕಿಲ್ಲ. ಬಳಿಕ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರದೇಶವನ್ನು ತೆರವುಗೊಳಿಸಿದ್ದಾರೆ. ಹೀಗಾಗಿ. ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಅಹಮದಾಬಾದ್ ನಗರದ ಪ್ರಸಿದ್ಧ ರಥೋತ್ಸವದಲ್ಲಿ, ಆನೆಗಳು ಯಾವಾಗಲೂ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತವೆ. ಈ ಬಾರಿ ರಥೋತ್ಸವಕ್ಕಾಗಿ ಒಟ್ಟು 16 ಆನೆಗಳು ಆಗಮಿಸಿದ್ದವು. ಅದರಲ್ಲಿ ಒಂದು ಗಂಡು ಆನೆ ಮಾನಸಿಕ ಅಸಮತೋಲನದಿಂದಾಗಿ ಇದ್ದಕ್ಕಿದ್ದಂತೆ ಓಡಲು ಪ್ರಾರಂಭಿಸಿದೆ. ಇದು ಸುತ್ತಮುತ್ತಲಿನ ಜನಸಮೂಹದಲ್ಲಿ ಭಯಭೀತತೆಯನ್ನು ಉಂಟುಮಾಡಿದೆ. ಸದ್ಯ ಭಯಭೀತಗೊಂಡಿದ್ದ ಆನೆ ಅರಣ್ಯ ಇಲಾಖೆ ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿದೆ ಎಂದು ತಿಳಿದು ಬಂದಿದೆ.




























































