ಧೋನಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ

ದೆಹಲಿ : ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಏಳು ಮಂದಿ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ. ಧೋನಿ ಅವರ ನಾಯಕತ್ವದ ಗುಣಗಳು ಹಾಗೂ ಕ್ರಿಕೆಟ್​ಗೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಅವರನ್ನು ಹಾಲ್ ಆಫ್ ಫೇಮ್​ ಪಟ್ಟಿಗೆ ಸೇರಿಸಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ ಐಸಿಸಿ ಹಾಲ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದ 11ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

ಲಂಡನ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳಾ ಕ್ರಿಕೆಟಿಗರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಐಸಿಸಿ 2025ರ ಹಾಲ್ ಆಫ್ ಫೇಮ್ ಗೆ ಸೇರಿಸಿದೆ.

ಈ ಗೌರವಕ್ಕೆ ಪಾತ್ರರಾದ ಟೀಮ್ ಇಂಡಿಯಾ ಕ್ರಿಕೆಟಿಗರು
ಬಿಷನ್ ಬೇಡಿ (2009), ಕಪಿಲ್ ದೇವ್‌ (2009), ಸುನಿಲ್ ಗವಾಸ್ಕರ್ (2009), ಅನಿಲ್ ಕುಂಬ್ಳೆ (2015), ರಾಹುಲ್ ದ್ರಾವಿಡ್ (2018), ಸಚಿನ್ ತೆಂಡೂಲ್ಕರ್ (2019), ವಿನೂ ಮಂಕಡ್ (2021), ಡಯಾನಾ ಎಡುಲ್ಜಿ (2023), ವೀರೇಂದ್ರ ಸೆಹ್ವಾಗ್ (2023) ನೀತು ಡೇವಿಡ್ (2023) ಮತ್ತು ಎಂಎಸ್ ಧೋನಿ (2025)

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಅದರಲ್ಲೂ ಐಸಿಸಿ ಟೂರ್ನಿಯ ಮೂರು ಪ್ರಶಸ್ತಿಗಳನ್ನು ಪಡೆದ ಏಕೈಕ ಕ್ಯಾಪ್ಟನ್ ಧೋನಿ. 2007 ರಲ್ಲಿ ಧೋನಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಅಲ್ಲದೆ 2011 ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಧೋನಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ 538 ಪಂದ್ಯಗಳನ್ನಾಡಿರುವ ಧೋನಿ ಒಟ್ಟು 17266 ರನ್ ಕಲೆಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ 26ನೇ ಸ್ಥಾನ ಅಲಂಕರಿಸಿದ್ದಾರೆ. ಈ ಎಲ್ಲಾ ಸಾಧನೆಗಾಗಿ ಮಹೇಂದ್ರ ಸಿಂಗ್ ಧೋನಿಗೆ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ.

ICC ಹಾಲ್ ಆಫ್ ಫೇಮ್ ‘ ಗೌರವ ಕುರಿತು ಪ್ರತಿಕ್ರಿಯಿಸಿರುವ ಮಹೇಂದ್ರ ಸಿಂಗ್ ಧೋನಿ, ಪ್ರಪಂಚದಾದ್ಯಂತದ ಕ್ರಿಕೆಟಿಗರ ಕೊಡುಗೆಗಳನ್ನು ಗುರುತಿಸುವ ಐಸಿಸಿ ಹಾಲ್ ಆಫ್ ಫೇಮ್‌ನಲ್ಲಿ ಹೆಸರಿಸಿರುವುದು ಗೌರವವಾಗಿದೆ. ಅಂತಹ ಸಾರ್ವಕಾಲಿಕ ಶ್ರೇಷ್ಠರ ಜೊತೆಗೆ ನನ್ನ ಹೆಸರನ್ನು ನೆನಪಿಸಿಕೊಳ್ಳುವುದು ಅದ್ಭುತ ಅನುಭವವಾಗುತ್ತಿದೆ. ಇದು ನನಗೆ ಎಂದೆಂದಿಗೂ ಒಂದು ವಿಶೇಷ ಎಂದು ಹೇಳಿದ್ದಾರೆ.



































































































error: Content is protected !!
Scroll to Top