ಹೊರರಾಜ್ಯಗಳಿಂದ ಆಗಮಿಸುವ ಕಾರ್ಮಿಕರ ಸ್ಕ್ರೀನಿಂಗ್ ಕಡ್ಡಾಯ – ಡಾ. ಪ್ರಶಾಂತ್ ಭಟ್

ಉಡುಪಿ : ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಆಗಮಿಸುವ ಹೊರರಾಜ್ಯಗಳ ಪ್ರತಿಯೊಬ್ಬ ಕಾರ್ಮಿಕರುಗಳಿಗೆ ಮಲೇರಿಯಾ, ಫೈಲೇರಿಯಾ ಸ್ಕ್ರೀನಿಂಗ್ ಅನ್ನು ಕಾರ್ಮಿಕರು ಬಂದ 4 ರಿಂದ 5 ದಿನದೊಳಗೆ ಮಾಡುವುದು ಕಡ್ಡಾಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ಹೇಳಿದರು.
ಮಳೆಗಾಲದಲ್ಲಿ ಹರಡುವ ಮಲೇರಿಯಾ, ಫೈಲೇರಿಯಾ, ಡೆಂಗ್ಯೂ ಸಾಂಕ್ರಮಿಕ ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಉಡುಪಿ ನಗರಸಭೆ ವತಿಯಿಂದ ಬಿಲ್ಡರ್ಸ್ ಅಸೋಸಿಯೇಶನ್‌ ಜೊತೆಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಸಾಂಕ್ರಮಿಕ ರೋಗ ಹರಡುವುದನ್ನು ತಡೆಗಟ್ಟಲು ಹಾಗೂ ಯಾವುದೇ ರೋಗ ಲಕ್ಷಣ ಕಂಡು ಬಂದಲ್ಲಿ ಪ್ರಾಥಮಿಕ ಹಂತದಲ್ಲಿ ಗುಣಪಡಿಸಲು ಸ್ಕ್ರಿನಿಂಗ್‌ ಮಾಡುವುದರಿಂದ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುವುದು. ಕಾರ್ಮಿಕರನ್ನು ಒಂದೇ ಕಡೆ ಕೆಲಸಕ್ಕೆ ನಿಯೋಜಿಸದೇ ಅವರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರ ಮಾಡುವುದರಿಂದ ರೋಗಗಳ ಹರಡುವಿಕೆಯ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬಿಲ್ಡರ್ಸ್‌ಗಳು ತಮ್ಮ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದು ಅತ್ಯವಶ್ಯ ಎಂದರು.

ಕಾರ್ಮಿಕರಿದ್ದ ಸ್ಥಳಕ್ಕೆ ತೆರಳಿ ಆರೋಗ್ಯ ಇಲಾಖೆ ವತಿಯಿಂದ ಸಂಪೂರ್ಣ ಉಚಿತವಾಗಿ ಸ್ಕ್ರೀನಿಂಗ್‌ ಮಾಡಲಾಗುತ್ತಿದ್ದು, ಕಾರ್ಮಿಕರ ಆರೋಗ್ಯ ಕಾಪಾಡುವಲ್ಲಿ ಬಿಲ್ಡರ್ಸ್ಗಳು ಸಹಕಾರ ನೀಡಬೇಕು. ಮಲೇರಿಯಾ ಬಂದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ಡೆಂಗ್ಯೂ ಕಾಯಿಲೆಗೆ ಯಾವುದೇ ರೀತಿಯ ಸರಿಯಾದ ಚಿಕಿತ್ಸೆ ಇಲ್ಲದಿರುವುದರಿಂದ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದರು.

ಸ್ವಚ್ಛತೆ ಅವಶ್ಯ
ಡೆಂಗ್ಯೂ ಕಾಯಿಲೆ ಹರಡುವ ಸೊಳ್ಳೆಗಳು ಹಗಲು ಹೊತ್ತಿನಲ್ಲಿಯೇ ಕಚ್ಚುವುದರಿಂದ ಸೂಕ್ತ ರಕ್ಷಣೆ ಕೈಗೊಳ್ಳುವುದರೊಂದಿಗೆ ಮನೆಗಳ ಸುತ್ತಮುತ್ತ, ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ, ಮನೆಗಳ ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.

ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪೌರಾಯುಕ್ತ ಜೆ. ಮಹೇಶ್, ಪರಿಸರ ಅಭಿಯಂತರಾದ ಸ್ನೇಹ ಕೆ. ಎಸ್., ಕಚೇರಿ ವ್ಯವಸ್ಥಾಪಕ ನಾರಾಯಣ ಎಸ್.ಎಸ್., ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು, ನಗರಸಭೆ ಕಚೇರಿ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.



































































































error: Content is protected !!
Scroll to Top