ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆಗೊಂಡು 2 ವರ್ಷ ಪೂರ್ಣ

ಕಾರ್ಕಳ : ಕಾರ್ಕಳದ ಕನಸಿನ ಯೋಜನೆಯಾಗಿದ್ದ ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆಗೊಂಡು ಇಂದಿಗೆ ಎರಡು ವರ್ಷ ಸಂದಿದೆ. ಪ್ರವಾಸೋದ್ಯಮ ತಾಣವಾಗಿ, ಜನಾಕರ್ಷಣೆ ಕೇಂದ್ರವಾಗಿ ದೇಶ-ವಿದೇಶಗಳ ಪ್ರವಾಸಿಗರನ್ನು ಕೈ ಬೀಸಿ ಕರೆಯಬೇಕಿದ್ದ ಈ ಥೀಮ್‌ ಪಾರ್ಕ್‌ ರಾಜಕೀಯ ಕಾರಣಕ್ಕಾಗಿ ಪಾಳು ಬೀಳುವಂತಾಗಿದೆ. ಕೋಟ್ಯಾಂತರ ರೂ. ಯೋಜನೆಗೆ ಕೊಡಲಿ ಏಟು ನೀಡಲಾಗಿದೆ. ಪರಶುರಾಮನಿಗೆ ರಾಜಕೀಯ ಅಂಟಿಕೊಳ್ಳದೆ ಇರುತ್ತಿದ್ದರೆ ಇಡೀ ಬೈಲೂರಿನ ಚಿತ್ರಣವಿಂದು ಬದಲಾಗುತ್ತಿತ್ತು. ಉದ್ಯೋಗ ಸೃಷ್ಟಿ, ವ್ಯಾಪಾರ, ವ್ಯವಹಾರ ಚೇತರಿಕೆ ಕಂಡು ಕಾರ್ಕಳದ ಆರ್ಥಿಕತೆಯ ಪ್ರಗತಿಗೂ ಕಾರಣವಾಗುತ್ತಿತ್ತು.

ಏಕಶಿಲಾ ಗೊಮ್ಮಟೇಶ್ವರ ವಿಗ್ರಹ, ಚತುರ್ಮುಖ ಬಸದಿ, ಆನೆಕೆರೆ, ವರಂಗ ಕೆರೆ ಬಸದಿ, ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನ, ಅನಂತಶಯನ ದೇವಸ್ಥಾನ, ಅತ್ತೂರು ಬಸಿಲಿಕಾ ಚರ್ಚ್ ಹೀಗೆ ಪ್ರಸಿದ್ಧ ಧಾರ್ಮಿಕ, ಐತಿಹಾಸಿಕ ಕ್ಷೇತ್ರಗಳು, ಶೈಕ್ಷಣಿಕ ಸಂಸ್ಥೆಗಳು, ಶಿಲ್ಪಕಲಾ ವೈಭವ, ಪರಂಪರೆ ಸಾರುವ ಹತ್ತು ಹಲವು ಆಕರ್ಷಣೀಯ ತಾಣಗಳಿಗಾಗಿ ಕಾರ್ಕಳ ಪ್ರಸಿದ್ಧಿ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಶಾಸಕ ವಿ. ಸುನಿಲ್‌ ಕುಮಾರ್‌ ಅವರ ದೂರದೃಷ್ಟಿಯ ಯೋಜನೆ, ಕಾರ್ಕಳ-ಉಡುಪಿ ರಾಜ್ಯ ಹೆದ್ದಾರಿಯ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣ ಮಾಡಲಾದ ಪರಶುರಾಮ ಥೀಮ್ ಪಾರ್ಕ್.

ಪರಶುರಾಮನ ಇತಿಹಾಸ, ಕಥನ ತಿಳಿಸುವ ಉಬ್ಬುಶಿಲ್ಪಗಳ ಗ್ಯಾಲರಿ ಮತ್ತು 500 ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸುವ ಆಂಪಿ ಥಿಯೇಟರ್‌, ಬೆಟ್ಟದ ಮೇಲೆ ಪರಶುರಾಮ ಮೂರ್ತಿಯನ್ನು ನಿರ್ಮಿತಿ ಕೇಂದ್ರದ ಮೂಲಕ ಅತ್ಯಾಕರ್ಷಣೀಯವಾಗಿ ಸ್ಥಾಪಿಸಲಾಯಿತು. 2023 ಜ.27ರಿಂದ 29ರವರೆಗೆ ಅದ್ದೂರಿ ಕಾರ್ಯಕ್ರಮದೊಂದಿಗೆ ಲೋಕಾರ್ಪಣೆಗೊಂಡಿತು. ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರದಲ್ಲಿ ಊರಿಗೆ ಊರೇ ಸಂಭ್ರಮಪಟ್ಟಿತು. ಆ ಬಳಿಕ ರಾಜ್ಯದ ವಿವಿಧೆಡೆಯಿಂದ ದಿನಂಪ್ರತಿ ಸಾವಿರಾರು ಪ್ರವಾಸಿಗರು ಇಲ್ಲಿಗಾಗಮಿಸಿ ಇಲ್ಲಿನ ಪ್ರಕೃತಿ ಸೌಂದರ್ಯ, ಥೀಮ್‌ ಪಾರ್ಕ್‌ ಕಂಡು ಬೆರಗಾಗಿದ್ದರು. ಬೈಲೂರಿನ ಹೆಸರು ಎಲ್ಲೆಡೆ ಪ್ರಸಿದ್ಧಿ ಪಡೆಯಲಾರಂಭಿಸಿತು. ಹೋಟೆಲ್, ಟ್ಯಾಕ್ಸಿ, ಆಟೋ, ರಿಯಲ್ ಎಸ್ಟೇಟ್ ವ್ಯವಹಾರಗಳು ಹೆಚ್ಚಾಯಿತು. ಜನರಲ್ಲಿ ಒಂದು ರೀತಿಯ ಉತ್ಸಾಹ ಜೊತೆಗೆ ಥೀಮ್ ಪಾರ್ಕ್ ಬಗ್ಗೆ, ಶಾಸಕರ ಯೋಜನೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವಂತಾಯಿತು.

ಪರಶುರಾಮ ಥೀಮ್‌ ಪಾರ್ಕ್‌ 11.05 ಕೋಟಿ ರೂ. ಮೊತ್ತದ ಯೋಜನೆಯಾಗಿತ್ತು. ಅದರಲ್ಲಿ ಸರಕಾರದಿಂದ 6.72 ಕೋಟಿ ರೂ. ಬಿಡುಗಡೆಯಾಗಿದ್ದು 4.33 ಕೋಟಿ ರೂ. ಬಿಡುಗಡೆಯಾಗದೆ ಬಾಕಿಯುಳಿದಿದೆ ಎಂದು ತಿಳಿದುಬಂದಿದೆ.

ಚುನಾವಣೆ ಬಳಿಕ ಮೂರ್ತಿ ವಿವಾದ
2023ರ ವಿಧಾನಸಭೆ ಚುನಾವಣೆಯ ಅನಂತರ ಸರಕಾರ ಬದಲಾಯಿತು. ರಾಜಕೀಯ ಟಾರ್ಗೆಟ್‌ಗೆ ಸೊರಗಿದ್ದು ಮಾತ್ರ ಪರಶುರಾಮ ಥೀಮ್‌ ಪಾರ್ಕ್‌. ಪ್ರಶಾಂತ ಪರಿಸರ, ಸುಂದರ, ಆಹ್ಲಾದಕರ ವಾತಾವರಣವಿರುವ ಬೈಲೂರು ಬೆಟ್ಟಕ್ಕೆ ಬಂದು ಪ್ರವಾಸಿಗರು ವಿಶ್ರಾಂತಿ ಪಡೆಯುವಂತಾಬೇಕು. ಕೇರಳದ ಜಟಾಯು ಥೀಮ್‌ ಪಾರ್ಕ್‌ ನಂತೆಯೇ ಅಭಿವೃದ್ದಿಗೊಳ್ಳಬೇಕಾಗಿದ್ದ ಥೀಮ್‌ ಪಾರ್ಕ್‌ ಇದೀಗ ಬಳಲುತ್ತಿದೆ. ಕಳೆದ ಒಂದೂವರೆ ವರ್ಷಗಳ ಕಾಲ ಆರೋಪ-ಪ್ರತ್ಯಾರೋಪ, ರಾಜಕೀಯ ಕೆಸರೆರಚಾಟಕ್ಕೆ ಸೊರಗಿತು ಮೂರ್ತಿ ವಿವಾದ. ಇದರ ಪರಿಣಾಮ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಅಮಾನತಾದರು. ಶಿಲ್ಪಿ ಜೈಲು ಪಾಲಾದರು. ಅಮಾಯಕರು ಕ್ಷುಲ್ಲಕವಾಗಿ ಬೆಲೆ ತೆರುವಂತಾಯಿತು. ಅವರ ಮನೋಸ್ಥೈರ್ಯ ಕುಗ್ಗಿಸುವ ಕಾರ್ಯವಾಯಿತೇ ಹೊರತು ಬೇರೆನೂ ಸಾಧನೆಯಿಲ್ಲ.

ಕಲ್ಲು ಹೃದಯವೂ ಮರುಗದಿರದು
ಪರಶುರಾಮ ಥೀಮ್ ಪಾರ್ಕ್‌ಗೆ ಪ್ರವೇಶ ನಿರ್ಬಂಧಿಸಿ ಒಂದೂವರೆ ವರ್ಷವಾಗಿದೆ. ಮುಂದಿನ ಹಂತದ ಕಾಮಗಾರಿಗಳನ್ನು ನಿಲ್ಲಿಸಿ, ಕೋಟ್ಯಾಂತರ ರೂಪಾಯಿ ಯೋಜನೆ ಹಳ್ಳ ಹಿಡಿಯುವಂತಾಯಿತು. ಪ್ರವಾಸೋದ್ಯಮಕ್ಕೆ ಧಕ್ಕೆಯುಂಟು ಮಾಡಿ, ಈಗ ಬೆಟ್ಟಕ್ಕೆ ಹೋಗುವ ರಸ್ತೆ, ಅಳವಡಿಸಿದ ಆಸನಗಳು, ವಿದ್ಯುತ್ ದೀಪಗಳು , ಗ್ಯಾಲರಿ, ಆಡಿಟೋರಿಯಂ, ಕೊಠಡಿಗಳು ಧೂಳು ಹಿಡಿದಿದೆ. ಇದನ್ನು ಕಣ್ಣಾರೆ ಕಂಡಾಗ ಎಂಥವನನಾದರೂ ಮರುಗಲೇ ಬೇಕು. ಕಲ್ಲು ಹೃದಯವೂ ಕರಗಲೇಬೇಕು.

ರಾಜಕೀಯ ಚುನಾವಣೆ ಸಂದರ್ಭದಲ್ಲಷ್ಟೇ ಇರಲಿ
ನಾನು ಬೈಲೂರಿನವನಾಗಿ ನನಗೂ ಒಂದಷ್ಟು ಬೇಸರವಿದೆ. ಕೇವಲ ರಾಜಕೀಯಕ್ಕಾಗಿ ಸುಂದರವಾದ ಯೋಜನೆ ಮಣ್ಣುಪಾಲು ಆಗದಿರಲಿ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬಿಟ್ಟು, ಪರಶುರಾಮ ಥೀಮ್ ಪಾರ್ಕ್ ಮತ್ತೆ ಪ್ರವಾಸಿ ಕೇಂದ್ರವಾಗಿ ಬೆಳೆಯುವುದೇ ಮುಖ್ಯ. ಚುನಾವಣೆ ಸಂದರ್ಭ ಮಾತ್ರವೇ ಕಾರ್ಕಳದಲ್ಲಿ ರಾಜಕೀಯ ನಡೆಯಲಿ. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವುದು ಊರಿಗೆ ಮಾರಕ. ಪರಶುರಾಮ ಮೂರ್ತಿ ಮರು ಸ್ಥಾಪನೆಯಾಗಲಿ. ಬಾಕಿಯಿರುವ ಕಾಮಗಾರಿ ಪೂರ್ಣಗೊಳ್ಳಲಿ. ಜನರು ಮತ್ತೆ ಬರುವಂತಾಗಲಿ. ಈ ಪರಿಸರದಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯುವಂತಾಗಿ, ಮತ್ತೆ ಥೀಮ್ ಪಾರ್ಕ್ ಜಗಮಗಿಸಲಿ ಎಂಬುದೇ ನನ್ನ ಆಶಯ.

ಸಾರ್ವಜನಿಕರಿಗೆ ಮುಕ್ತವಾಗಲಿ
ಮೂರ್ತಿಯ ವಿವಾದ ಮಾತ್ರವೇ ಕೋರ್ಟ್‌ನಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಥೀಮ್‌ ಪಾರ್ಕ್‌ ಅಲ್ಲ. ಹಾಗಾಗಿ ಥೀಮ್‌ ಪಾರ್ಕ್‌ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕಾರ್ಯವಾಗಲಿ. ಈ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ಕಾರ್ಯವಾಗಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೆ ಪಕ್ಷ ಭೇದವಿಲ್ಲದೆ ಎಲ್ಲರ ಸಹಕಾರವಿರಲಿ. ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್ ಒಂದು ಒಳ್ಳೆಯ ಪ್ರವಾಸಿ ತಾಣವಾಗಿ ವಿಶ್ವ ಪ್ರಸಿದ್ಧಿಯಾದರೆ ನಮಗೆಲ್ಲರಿಗೂ ಹೆಮ್ಮೆಯಲ್ಲವೇ ?



















































































error: Content is protected !!
Scroll to Top