ಕಾರ್ಕಳ : ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಸೇವೆಗಳನ್ನು ಗ್ರಾಮೀಣ ಪ್ರದೇಶದ ಜನತೆಗೆ ತಲುಪಿಸುವಲ್ಲಿ ಅಂಚೆ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಶುಭಶಂಸನೆಗೈದರು.
ಅವರು ಯುವ ಉತ್ಸಾಹಿ ಬಳಗ (ರಿ.) ಕೇಮಾರು ಹಾಗೂ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಇದರ ಜಂಟಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಭಾಗಿತ್ವದಲ್ಲಿ ನ. 10ರಂದು ಕೇಮಾರು ಸ. ಕಿ. ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಮಾರ್ಕೆಟಿಂಗ್ ಪ್ರತಿನಿಧಿ ಗುರುಪ್ರಸಾದ್ ಅಂಚೆ ಇಲಾಖೆ ಸೇವೆಗಳ ಬಗ್ಗೆ ಮಾಹಿತಿ ನೀಡಿ ಅತೀ ಕಡಿಮೆ ಮೊತ್ತದಲ್ಲಿ ದೊಡ್ಡ ಪ್ರಮಾಣದ ಅಪಘಾತ ವಿಮೆಯನ್ನು ನೊಂದಾಯಿಸುವಂತೆ ವಿನಂತಿಸಿದರು.
ಅಭಿಯಾನದಲ್ಲಿ ಆಧಾರ್ ನೊಂದಾವಣೆ & ತಿದ್ದುಪಡಿ ಹಾಗೂ ಸಮಗ್ರ ರಕ್ಷಣಾ ಯೋಜನೆ (ಅಪಘಾತ ವಿಮೆ ₹ 549 / ₹749) ಸೇರಿದಂತೆ ಅಂಚೆ ಇಲಾಖೆಯ ಇನ್ನಿತರ ಸೇವೆಗಳನ್ನು ನೀಡಲಾಯಿತು.
ಈ ಸಂದರ್ಭ ಅಖಿಲ ಭಾರತ ತುಳು ಕೂಟದ ಪ್ರಧಾನ ಕಾರ್ಯದರ್ಶಿ ರೋಟರಿ ಕ್ಲಬ್ ಪ್ರತಿನಿಧಿ ಚಂದ್ರಹಾಸ ದೇವಾಡಿಗ ಮೂಡುಬಿದಿರೆ, ಕೇಮಾರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ರೇಣುಕಾ ಅಮೀನ್, ಆನಂದ ಪೂಜಾರಿ, ಯುವ ಉತ್ಸಾಹಿ ಬಳಗದ ಅಧ್ಯಕ್ಷ ಚಂದ್ರಹಾಸ ಜೈನ್ ಹಕ್ಕೇರಿ ಹಾಗೂ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು. ಸುಕೇಶ್ ಕೋಟ್ಯಾನ್ ಕಾಂತಾವರ ಕಾರ್ಯಕ್ರಮ ನಿರ್ವಹಿಸಿದರು.



































