ಪೊಲೀಸ್ ಕಸ್ಟಡಿಯಿಂದ ಲಾರೆನ್ಸ್ ಬಿಷ್ಣೋಯ್ ಟಿವಿ ಸಂದರ್ಶನ : ಇಬ್ಬರು ಡಿಎಸ್ಪಿ ಸೇರಿ ಏಳು ಪೊಲೀಸ್ ಅಧಿಕಾರಿಗಳ ಅಮಾನತು

ಚಂಡೀಗಢ : ರಾಜ್ಯ ಪೊಲೀಸರ ವಶದಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ನ ಅನಧಿಕೃತವಾಗಿ ಟಿವಿ ಸಂದರ್ಶನ ಮಾಡಲು ಅವಕಾಶ ನೀಡಿದ ಆರೋಪದ ಮೇಲೆ ಇಬ್ಬರು ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಗಳು (ಡಿಎಸ್‌ಪಿಗಳು) ಸೇರಿದಂತೆ ಏಳು ಪೊಲೀಸ್ ಅಧಿಕಾರಿಗಳನ್ನು ಪಂಜಾಬ್ ಸರ್ಕಾರ ಅಮಾನತುಗೊಳಿಸಿದೆ.

ಅ. 25 ರಂದು ಪಂಜಾಬ್ ಗೃಹ ಕಾರ್ಯದರ್ಶಿ ಗುರುಕಿರತ್ ಕಿರ್ಪಾಲ್ ಸಿಂಗ್ ಅವರು ಹೊರಡಿಸಿದ ಆದೇಶದ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಸೆಪ್ಟೆಂಬರ್ 3 ಮತ್ತು 4, 2022 ರಂದು ಖರಾರ್ CIA ವಶದಲ್ಲಿದ್ದಾಗ ವೀಡಿಯೊ ಕಾನ್ಫರೆನ್ಸ್ ಸಂದರ್ಶನವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರ ಮಾಡಿರುವುದನ್ನು ವಿಶೇಷ ತನಿಖಾ ತಂಡ (SIT) ಪತ್ತೆ ಹಚ್ಚಿದ ನಂತರ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಡಿಜಿಪಿ (ಮಾನವ ಹಕ್ಕುಗಳು) ಪ್ರಬೋಧ್ ಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ಇದ್ದು, ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಮತ್ತು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಡಿಎಸ್‌ಪಿಗಳಾದ ಗುರ್ಶರ್ ಸಿಂಗ್ ಸಂಧು ಮತ್ತು ಸಮ್ಮರ್ ವನೀತ್ ಅವರಲ್ಲದೆ ಸಬ್ ಇನ್‌ಸ್ಪೆಕ್ಟರ್‌ಗಳಾದ ರೀನಾ, ಜಗತ್ಪಾಲ್ ಜಂಗು, ಶಗಂಜಿತ್ ಸಿಂಗ್ ಮತ್ತು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮುಖ್ತಿಯಾರ್ ಸಿಂಗ್ ಮತ್ತು ಹೆಡ್ ಕಾನ್‌ಸ್ಟೆಬಲ್ ಓಂ ಪ್ರಕಾಶ್ ಅವರನ್ನು ಅಮಾನತುಗೊಳಿಸಲಾಗಿದೆ.

ಬಿಷ್ಣೋಯ್ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಮತ್ತು ಇತ್ತೀಚೆಗೆ ಮುಂಬೈನಲ್ಲಿ ನಡೆದ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದ ಸಂಚುಕೋರ ಎಂದು ಶಂಕಿಸಲಾಗಿದೆ. ಈತನ ವಿರುದ್ಧ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಮೂರು ಡಜನ್‌ಗೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಇತ್ತೀಚೆಗೆ ಕೆನಡಾ ಸರ್ಕಾರವು ಕಳೆದ ವರ್ಷ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟ್ ಎಂದು ಆರೋಪಿಸಿತ್ತು.













error: Content is protected !!
Scroll to Top