ವಿಶ್ವಕರ್ಮ ‌ಜಯಂತಿ‌ ಆಚರಣೆ

ಕಾರ್ಕಳ : ವಿಶ್ವಕರ್ಮ‌ ಎಂಬ ಪದ ಒಂದು ಸಮುದಾಯಕ್ಕೆ ಸೀಮಿತವಲ್ಲ. ವಿಶ್ವಕರ್ಮ ಜನಾಂಗದ ದೇವತೆಯಲ್ಲ ಬದಲಾಗಿ ಜಗತ್ತಿನ‌ ದೇವತೆ ಎಂದು ದಾಮೋದರ ಶರ್ಮ ಬಾರ್ಕೂರು ಅಭಿಪ್ರಾಯಪಟ್ಟರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರ್ಕಳ ತಾಲೂಕು ಆಡಳಿತ ಆಶ್ರಯದಲ್ಲಿ ಸೆ. 17 ರಂದು‌ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ವಿಶ್ವಕರ್ಮನ 5 ಮುಖಗಳು ಪಂಚಭೂತಗಳನ್ನು ಸೂಚಿಸುತ್ತದೆ. ಆ ಮುಖದಿಂದ ಸೃಷ್ಟಿಯಾದವರು ಪಂಚ ಋಷಿಗಳು. ಆ ಪರಂಪರೆಯಿಂದ ರಕ್ತಗತವಾಗಿ ಬಂದವರು ವಿಶ್ವಕರ್ಮ ಸಮುದಾಯದವರು. ಸಮುದಾಯದ ಪರಂಪರೆಯ ಬಗ್ಗೆ ತಿಳಿದಾಗ ಮಾತ್ರ ಆಚರಣೆಗೆ ಮಹತ್ವ ದೊರೆಯುವುದು ಎಂದು ದಾಮೋದರ ಶರ್ಮ ಹೇಳಿದರು.

ವಿಶ್ವಕರ್ಮ ಸಮುದಾಯದ ಹೊರತಾಗಿ ಬೇರೆ ಯಾವ ಸಮುದಾಯ ಬದುಕಲು ಸಾಧ್ಯವಿಲ್ಲ. ಪ್ರತಿಯೊಂದು ಸಮುದಾಯದ ವೃತ್ತಿಗೆ ಬೇಕಾದ ಪರಿಕರಗಳ‌ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಉಲ್ಲೇಖನೀಯ. ವಿಶ್ವಕರ್ಮ ಸಮಯದಾಯದ ಹೆಗ್ಗಳಿಕೆಯನ್ನು ಹೇಳದೆ ಎಲ್ಲಾ ಸಮುದಾಯದ ಹೆಗ್ಗಳಿಕಯೊಂದಿಗೆ ನಾವು ಹೇಗೆ ಬೆರೆತಿದ್ದೇವೆ ಎಂಬುದನ್ನು ಹೇಳಿದಾಗ ಮಾತ್ರ ವಿಶ್ವಕರ್ಮ ಜಯಂತಿ ಆಚರಣೆ‌ಯ ಉದ್ದೇಶ ಸಾರ್ಥಕವಾಗುವುದು ಎಂದರು.

ವಿಶ್ವಕರ್ಮ ಸಮುದಾಯವರಿಗೆ ಕಲೆ ರಕ್ತಗತ ಬಂದಿದೆ. ಅದನ್ನು ಸಮಾಜ ಒಪ್ಪಿಕೊಳ್ಳುತ್ತದೆ. ಕಾರ್ಕಳ ಬಾಹುಬಲಿ ವಿಶ್ವಕರ್ಮ‌ ಸಮುದಾಯದ ಕಲೆಯ ದ್ಯೋತಕವಾಗಿ ನಿಂತಿದೆ. ಮಾರ್ಯಾದೆಗಾಗಿ‌ ಪ್ರಾಣ ತೆತ್ತ ಅದರ ಶಿಲ್ಪಿ ಇಂದು ಕರಾವಳಿಯಾದ್ಯಂತ ದೈವಿಕ ಶಕ್ತಿಯಾಗಿ ಪರಂಪರೆ  ಪಡೆಯುತ್ತಿರುವುದು ನಮ್ಮ ಸಮುದಾಯದ ಪರಂಪರೆ. ಮಠ, ಮಂದಿರ, ಗುಡಿ‌ ಗೋಪುರಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯವರ ಕೊಡುಗೆ ಅಪಾರ‌ ಎಂದು ದಾಮೋದರ್‌ ಶರ್ಮ ಹೇಳಿದರು.

ವಿಬಿಎಸ್ ಸಭಾದ‌‌ ಅಧ್ಯಕ್ಷ ಪ್ರಕಾಶ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮಯದಾಯದ ಅಭಿವೃದ್ಧಿಗಾಗಿ ಸರಕಾರ ವಿವಿಧ ಯೋಜನೆ, ಸೌಲಭ್ಯಗಳನ್ನು ರೂಪಿಸಿದೆ. ಆದರೆ ಈ ಬಗ್ಗೆ ಸಮುದಾಯದವರಲ್ಲಿ ಮಾಹಿತಿಯ ಕೊರತೆಯಿದೆ. ಹೀಗಾಗಿ ಆಡಳಿತ ವ್ಯವಸ್ಥೆ ಸರಕಾರಿ ಯೋಜನೆಗಳ‌ ಮಾಹಿತಿ ಸಮುದಾಯಕ್ಕೆ ತಲುಪುಸುವತ್ತ ಗಮನ‌ಹರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪ್ರತಿಭಾ ಆರ್. ‌ಮಾತನಾಡಿ, ವಿಶ್ವಕರ್ಮ ಒಂದು ಸಮುದಾಯವಾಗದೆ ಶಕ್ತಿಯಾಗಿ ಬೆಳೆಯಬೇಕು. ಸಮಾಜದ‌ ಎಲ್ಲಾ ಸ್ತರಗಳಲ್ಲಿ ವಿಶ್ವಕರ್ಮ ಸಮುದಾಯದವರ‌ ಕೊಡುಗೆ ಮಹತ್ವವಾದುದು.‌ ಈ ನಿಟ್ಟಿನಲ್ಲಿ ವಿಶ್ವಕರ್ಮನನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೆ ಸಮಸ್ತ ಸಮಾಜದ ದೇವರಾಗಿ ಸ್ವೀಕರಿಸೋಣ ಎಂದರು.

ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ತಾಲೂಕು ಪಂಚಾಯತ್ ಇಓ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಕಾಶ್ ಪ್ರಾರ್ಥಿಸಿದರು. ಕಂದಾಯ ನಿರೀಕ್ಷಕ ರಿಯಾಜ್ ಕಾರ್ಯಕ್ರಮ ನಿರೂಪಿಸಿದರು. ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಟಿ. ಆಚಾರ್ಯ ವಂದಿಸಿದರು.

































































































error: Content is protected !!
Scroll to Top