ಸಂಪತ್ತಿನಲ್ಲಿ ಶಾರೂಕ್‌ ಈಗಲೂ ಕಿಂಗ್‌

ಮುಂಬಯಿ: ಭಾರತೀಯ ನಟರ ಪೈಕಿ ಅತಿ ಶ್ರೀಮಂತ ಎಂದರೆ ಬಾಲಿವುಡ್‌ನಲ್ಲಿ ಕಿಂಗ್‌ ಖಾನ್‌ ಎಂದೇ ಅರಿಯಲ್ಪಡುವ ಶಾರೂಕ್‌ ಖಾನ್‌. ಹುರುನ್‌ ಇಂಡಿಯಾ ರಿಚ್‌ ಲಿಸ್ಟ್‌ ನಿನ್ನೆ ಬಿಡುಗಡೆಗೊಳಿಸಿರುವ ಭಾರತದ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರೂಕ್‌ ಖಾನ್‌ ಅಗ್ರಸ್ಥಾನದಲ್ಲಿದ್ದಾರೆ. ಅವರ ಸಂಪತ್ತಿನ ಒಟ್ಟು ಮೌಲ್ಯ 7,300 ಕೋ. ರೂ. ಎನ್ನಲಾಗಿದೆ. ಇದು ಬಾಲಿವುಡ್‌ನಲ್ಲಿ ಶಾರೂಕ್‌ ಖಾನ್‌ ಎಷ್ಟು ಪ್ರಭಾವಶಾಲಿ ಎನ್ನುವುದಕ್ಕೆ ಸಾಕ್ಷಿ. ಹಾಗೆಂದು ಬರೀ ನಟನೆಯೊಂದರಿಂದಲೇ ಅವರು ಇಷ್ಟು ಕೋಟಿಗಳನ್ನು ಸಂಪಾದಿಸಿಲ್ಲ.

ಐಪಿಎಲ್‌ನ ಕೋಲ್ಕತ ತಂಡದಿಂದ ಬಂದ ಗಳಿಕೆ, ಸಿನಿಮಾ ನಿರ್ಮಾಣ, ಹೋಟೆಲ್‌ ಮತ್ತಿತರ ಅನೇಕ ವ್ಯಾಪಾರ ವಹಿವಾಟುಗಳನ್ನು ಅವರು ಹೊಂದಿದ್ದಾರೆ. ರೆಡ್‌ ಚಿಲ್ಲೀಸ್‌ ಎಂಟರ್‌ಟೈನ್‌ಮೆಂಟ್‌ ಎಂಬ ಸಿನಿಮಾ ನಿರ್ಮಾಣ ಕಂಪನಿಯಲ್ಲಿ ಅವರ ಜೊತೆ ನಟಿ ಜೂಹಿ ಚಾವ್ಲಾ ಪಾಲುದಾರರಾಗಿದ್ದಾರೆ.

ಶ್ರೀಮಂತಿಕೆಯಲ್ಲಿ ಶಾರೂಕ್‌ ನಂತರದ ಸ್ಥಾನದಲ್ಲಿ ನಟಿ ಜೂಹಿ ಚಾವ್ಲಾ ಇದ್ದಾರೆ. ಅವರು ಸಂಪತ್ತಿನ ಒಟ್ಟು ಮೌಲ್ಯ 4600 ಕೋ. ರೂ. ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲೂ ಶಾರೂಕ್‌ ಜೊತೆ ಜೂಹಿ ಪಾಲುದಾರರಾಗಿದ್ದಾರೆ. ನಂತರದ ಸ್ಥಾನದಲ್ಲಿ 2,000 ಕೋ. ರೂ. ಸಂಪತ್ತಿನ ಒಡೆಯ ಹೃತಿಕ್‌ ರೋಶನ್‌ ಮತ್ತು 1,600 ಕೋ.ರೂ. ಹೊಂದಿರುವ ಅಮಿತಾಭ್‌ ಬಚ್ಚನ್‌ ಇದ್ದಾರೆ.

ಅಂದಹಾಗೇ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಕೂಡ ಶಾರೂಕ್‌ ಖಾನ್‌. ಅವರು ಒಂದು ಸಿನಿಮಾಕ್ಕೆ 150ರಿಂದ 250 ಕೋ. ರೂ. ತನಕ ಸಂಭಾವನೆ ಪಡೆದುಕೊಳ್ಳುತ್ತಾರೆ. ರಜನೀಕಾಂತ್‌ 115ರಿಂದ 270 ಕೋ. ರೂ., ದಳಪತಿ ವಿಜಯ್‌ 130ರಿಂದ 250 ಕೋ ರೂ. ತನಕ ಸಂಭಾವನೆ ಪಡೆಯುತ್ತಾರೆ. ಶಾರೂಕ್‌ ಖಾನ್‌ ನಟಿಸಿದ ಬಹುತೇಕ ಸಿನಿಮಾಗಳು ಜಾಗತಿಕವಾಗಿ 1000 ಕೋ.ಟಿಗೂ ಅಧಿಕ ಗಳಿಕೆ ಮಾಡುತ್ತವೆ.































































































error: Content is protected !!
Scroll to Top