ಸ್ತ್ರೀ ಕುಲದ ಮೇಲೆ ದಾಳಿ ಮಾಡುವವರಿಗೆ ಕಠೋರ ಶಿಕ್ಷೆಯಾಗಲಿ : ಸಿದ್ದರಾಮೇಶ್ವರ ಸ್ವಾಮೀಜಿ
ಕಾರ್ಕಳ : ಬೆಳೆ ಫಸಲು ಕೊಡುವ ಮೊದಲು ಬರುವ ಕಸವನ್ನು ಕಿತ್ತು ಬಿಸಾಕುವಂತೆ ಭಾರತೀಯ ಸಂಸ್ಕೃತಿ ಹಾಗೂ ಪೂಜ್ಯನೀಯ ಸ್ತ್ರೀ ಕುಲದ ಮೇಲೆ ದಾಳಿ ಮಾಡುವವರನ್ನು ಕಿತ್ತು ಎಸೆಯುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ ಎಂದು ಭೋವಿ ಸಮುದಾಯದ ಚಿತ್ರದುರ್ಗ ಭೋವಿ ಮಠದ ಇಮ್ಮಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಕಾರ್ಕಳದಲ್ಲಿ ಭೋವಿ ಸಮುದಾಯದ ಯುವತಿಯ ಮೇಲೆ ಅನ್ಯಕೋಮಿನ ದುರುಳರು ನಡೆಸಿದ ಅತ್ಯಾಚಾರ ಖಂಡಿಸಿ, ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ನಡೆದ ಖಂಡನಾ ಮೆರವಣಿಗೆಯ ಬಳಿಕ ಮಂಜುನಾಥ್ ಪೈ ಸಭಾಂಗಣದಲ್ಲಿ ನಡೆದ ಬೃಹತ್ ಸಭೆ ಉದ್ದೇಶಿಸಿ ಸ್ವಾಮೀಜಿ ಮಾತನಾಡಿದರು.

ಭಾರತ ಜಗತ್ತಿನ ಸಂಸ್ಕಾರ, ಸಂಸ್ಕೃತಿಯ ರಾಯಭಾರಿ. ಇಂತಹ ಪರಂಪರೆ ಇರುವ ದೇಶದಲ್ಲಿ ಅತ್ಯಾಚಾರದ ಘಟನೆಗಳು ನಡೆಯುತ್ತಿರುವುದು ಮುಜುಗರಕ್ಕೀಡು ಮಾಡುತ್ತವೆ. ಮನೆಯಲ್ಲಿ ಸಂಸ್ಕಾರದ ಕೊರತೆಯಿಂದಾಗಿ ಈ ರೀತಿಯ ದುಷ್ಕೃತ್ಯಗಳು ನಡೆಯುತ್ತಿವೆ. ಆಧುನಿಕ ಕಾಲದಲ್ಲಿ ಭಯ ಮಾಯೆಯಾಗಿ ಭಕ್ತಿ ಯಾಂತ್ರಿಕವಾಗಿದೆ. ಹೀಗಾಗಿ ಸಮಾಜ ದಾರಿ ತಪ್ಪುತ್ತಿದೆ. ಇಂತಹ ದುಷ್ಕೃತ್ಯಗಳ ವಿರುದ್ಧ ಸರಕಾರ ಅತ್ಯಂತ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಾತಿ, ಧರ್ಮ ನೋಡದೆ ಮಾನವೀಯ ನೆಲೆಯಲ್ಲಿ ಹೆಣ್ಣು ಮಗಳ ಮೇಲಾದ ಅತ್ಯಾಚಾರದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

ಶಾಸಕ ಸುನಿಲ್ ಕುಮಾರ್ ಮಾತನಾಡಿ, ದೆಹಲಿಯಲ್ಲಾದ ನಿರ್ಭಯ ಹತ್ಯೆ, ಕೇರಳದ ಲವ್ ಜಿಹಾದ್, ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ, ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ ಘಟನೆಯ ವಿರುದ್ಧ ಕಾರ್ಕಳದಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಿತ್ತು. ಆದರೆ, ಈಗ ಕಾರ್ಕಳದಲ್ಲೇ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ ಕೃತ್ಯ ನಡೆದಿದೆ. ಡ್ರಗ್ಸ್, ಲವ್ ಜಿಹಾದ್ ಕುರಿತಂತೆ ಸರಕಾರ ಮೃದು ಧೋರಣೆ ಅನುಸರಿಸುವವರೆಗೆ ಇಂತಹ ಪ್ರಕರಣ ನಡೆಯುತ್ತಲೇ ಇರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಷರೀಯತ್ ಪ್ರಕಾರ ಶಿಕ್ಷೆ ನೀಡಿ- ಸುನಿಲ್ ಸವಾಲು
ಲವ್ ಜಿಹಾದ್‌ಗೆ ಬಲಿಯಾದವರೆಲ್ಲ ಹಿಂದೂ ಹೆಣ್ಣುಮಕ್ಕಳು. ಅವರಂತೆ ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಟಾರ್ಗೆಟ್ ಮಾಡಿದಲ್ಲಿ ಫ್ರಿಜ್ ಸಾಲದು ಎಂದ ಅವರು ಹಿಜಾಬ್ ಬೇಕು ಎಂದು ಮುಸ್ಲಿಂ ಹುಡುಗಿಯರು ಕೋರ್ಟ್‌ಗೆ ಹೋಗಬೇಕಾದರೆ ಅದರ ವೆಚ್ಚ ಭರಿಸಿದವರು ಯಾರು ? ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಆಕೆಗೆ ಅಮಲು ಪದಾರ್ಥ ನೀಡಿರುವುದು ದೃಢವಾಗಿದೆ. ಹಾಗಾದರೆ ಆರೋಪಿಗೆ ಅಮಲು ಪದಾರ್ಥ ತಂದು ಕೊಟ್ಟವರು ಯಾರು ? ಎಲ್ಲಿಂದ ದೊರಕಿತು ? ಹಿಂದಿರುವ ಷಡ್ಯಂತ್ರ ಯಾವುದು ಎಂಬುದು ತನಿಖೆಯಿಂದ ಹೊರಬೇಕು. ಹಿಜಾಬ್, ತಲಾಕ್ ವಿಷಯ ಬಂದಾಗ ಸಂವಿಧಾನ ಬೇಡ ಷರೀಯತ್ ಬೇಕು ಎನ್ನುವ ಮುಸಲ್ಮಾನರು ಇದೀಗ ಕಾರ್ಕಳದಲ್ಲಿ ಅವರದ್ದೇ ಸಮುದಾಯವರು ಹಿಂದು ಯುವತಿಯ ಮೇಲೆ ಅತ್ಯಾಚಾರ ಮಾಡಿದಾಗ ಆತ ನಮ್ಮ ಒಕ್ಕೂಟದಲ್ಲಿ ಇಲ್ಲ ಎನ್ನುತ್ತಾರೆ. ನೀವು ನಿಜವಾಗಿಯೂ ನೀವು ಷರೀಯತ್ ನಿಯಮ ಪಾಲಿಸುವರಾದರೆ ಅದರ ಕಾನೂನಿನಂತೆ ಅತ್ಯಾಚಾರ ಎಸಗಿದವರಿಗೆ ಬಂಗ್ಲೆಗುಡ್ಡೆ ಸರ್ಕಲ್‌ನಲ್ಲಿ ಕಲ್ಲು ಹೊಡೆಯಿರಿ ಎಂದು ಸುನಿಲ್ ಸವಾಲು ಹಾಕಿದರು.
ಖಾಕಿ ಕೈಕಟ್ಟುವ ಕಾರ್ಯ ಮಾಡಬಾರದು
ಡ್ರಗ್ಸ್, ಲವ್ ಜಿಹಾದ್ ವಿರುದ್ಧ ಜಾಗೃತಿ ಮತ್ತು ಹೋರಾಟ ಒಟ್ಟಾಗಿ ನಡೆಯಲಿ. ರಾಮ ಮಂದಿರಕ್ಕೆ ಬರುವುದಿಲ್ಲ, ಕುಂಕುಮ ಹಚ್ಚುವುದಿಲ್ಲ ಎಂಬ ಜಿಹಾದಿ ಮಾನಸಿಕತೆ ಉಳ್ಳವರ ಬಳಿ ಯಾವ ರೀತಿಯ ನ್ಯಾಯ ಪಡೆಯಲು ಸಾಧ್ಯ ? ಇಂತಹ ಮಾನಸಿಕತೆಯ ನಡುವೆ ನಾವು ಹೋರಾಡಬೇಕು. ಖಾಕಿ ಖಾಕಿಯಾಗೇ ಕೆಲಸ ಮಾಡಬೇಕು. ಖಾಕಿಯನ್ನು ಕೈ ಕಟ್ಟುವ ಕೆಲಸವನ್ನು ಸರಕಾರ ಮಾಡಬಾರದು ಎಂದರು.

ಇನ್ನೊಮ್ಮೆ ನಡೆದರೆ ನಿಮ್ಮ ಮನೆಗೆ ನುಗ್ಗುತ್ತೇವೆ – ಮಹೇಶ್ ಶೆಟ್ಟಿ ಕುಡುಪುಲಾಜೆ
ಹಿಂದೂ ಸಂಘಟನೆ ಮುಖಂಡ, ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ ಮಾತನಾಡಿ, ಹಿಂದೂ ಸಮುದಾಯದ ಹೆಣ್ಣುಮಗಳ ಮೇಲೆ ನಡೆದ ದೌರ್ಜನ್ಯ ವಿರುದ್ಧ ಇಂದು ಖಂಡನಾ ಮೆರವಣಿಗೆಯಷ್ಟೇ ನಡೆದಿದೆ. ಮತ್ತೊಮ್ಮೆ ಇಂಥ ಘಟನೆ ಮರುಕಳಿಸಿದರೆ ನಿಮ್ಮ ಮನೆಗೆ ನುಗ್ಗುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಸಂಕಲ್ಪ ಮಾಡೋಣ-ಸುನಿಲ್ ಕೆ.ಆರ್.
ಪ್ರಾಸ್ತಾವಿಕ ಮಾತುಗಳನ್ನಾಡಿದ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ಪ್ರಮುಖರಾದ ಸುನಿಲ್ ಕೆ. ಆರ್, ಹೆಣ್ಣಿಗೆ ವಿಶೇಷ ಗೌರವ ಕೊಡುವ ಸಂಸ್ಕೃತಿ ನಮ್ಮದು. ಅಂತಹ ಹೆಣ್ಣುಮಗಳ ಮೇಲಾದ ಅತ್ಯಾಚಾರ ಸಹಿಸಲು ಅಸಾಧ್ಯ. ಎಲ್ಲೋ ಆಗುವ ಅತ್ಯಾಚಾರ ಘಟನೆಗಳಿಗೆ ನಾವಿಲ್ಲಿ ಪ್ರತಿಭಟನೆ ಮಾಡುತ್ತಿದ್ದೆವು. ಈಗ ಇಲ್ಲಿಯೇ ನಮ್ಮ ಸಮಾಜದ ಹೆಣ್ಣುಮಗಳಿಗಾದ ಅತ್ಯಾಚಾರದ ವಿರುದ್ಧ ಸಮಸ್ತ ಹಿಂದೂ ಸಮುದಾಯ ಎದ್ದು ನಿಲ್ಲಬೇಕಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತೆ ಮಿತ್ರಪ್ರಭಾ ಹೆಗ್ಡೆ, ಎಸ್‌ಸಿ-ಎಸ್‌ಟಿ ಸಮುದಾಯ ಪ್ರಮುಖರಾದ ಮುನಿಯಪ್ಪ ದೊಡ್ಡಮಣಿ, ಶಂಕರ ಕೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಜರಂಗದಳ ತಾಲೂಕು ಸಂಚಾಲಕ ಮನೀಷ್ ನಿಟ್ಟೆ ಸ್ವಾಗತಿಸಿದರು. ಶೈಲೇಶ್ ಸಾಣೂರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಚಿತ್ರಕೃಪೆ : ಅನಿಲ್ ಕ್ಲಾಸಿಕ್ ಸ್ಟುಡಿಯೋ


























