ಮಕ್ಕಾ : ಮೃತಪಟ್ಟವರಲ್ಲಿ 90 ಭಾರತೀಯ ಹಜ್‌ ಯಾತ್ರಿಕರು

ಮಕ್ಕಾ: ಇಸ್ಲಾಂ ಧರ್ಮದ ಪವಿತ್ರ ಹಜ್‌ ಯಾತ್ರೆ ವೇಳೆ ಮಕ್ಕಾದಲ್ಲಿ ದಾಖಲಾದ 51.8 ಡಿಗ್ರಿ ಸೆಲ್ಶಿಯಸ್‌ ತಾಪಮಾನದಿಂದ ಭಾರಿ ಪ್ರಮಾಣದ ಸಾವು ಸಂಭವಿಸಿದೆ. ಮೃತಪಟ್ಟವರ ಸಂಖ್ಯೆ 645ಕ್ಕೆ ಏರಿಕೆಯಾಗಿದ್ದು, ಈ ಪೈಕಿ 90 ಮಂದಿ ಭಾರತೀಯರೂ ಇದ್ದಾರೆ ಎಂದು ಅರಬ್‌ ರಾಜತಾಂತ್ರಿಕರು ತಿಳಿಸಿದ್ದಾರೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಹಜ್ ಯಾತ್ರೆಗೆ ತೆರಳಿದ್ದರು.
ಪ್ರತಿ ವರ್ಷದಂತೆ ವಿವಿಧ ದೇಶಗಳಿಂದ ಸುಮಾರು 16 ಲಕ್ಷ ಯಾತ್ರಿಕರು ಹಜ್‌ ಯಾತ್ರೆ ಕೈಗೊಂಡಿದ್ದರು. ಈ ವೇಳೆ ಮಿತಿಮೀರಿದ ತಾಪಮಾನ ಏರಿಕೆಯಿಂದ 645 ಮಂದಿ ಯಾತ್ರಿಕರು ಮೃತಪಟ್ಟಿದ್ದು, 2700ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನೋಂದಣಿ ಮಾಡಿಕೊಳ್ಳದೆ ಕಳ್ಳದಾರಿಯಿಂದ ಹಜ್‌ ಯಾತ್ರೆ ಮಾಡುವವರಿಗೆ ಸೂಕ್ತ ಎಸಿ ಸೌಲಭ್ಯ ಇರುವುದಿಲ್ಲ, ಸೂರು ಸಿಗುವುದಿಲ್ಲ. ಈ ಕಾರಣದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಮೃತ ದೇಹಗಳನ್ನು ಮಕ್ಕಾದ ಅಲ್-ಮುಯಿಸೆಮ್ ನೆರೆಹೊರೆಯಲ್ಲಿರುವ ಆಸ್ಪತ್ರೆಗಳ ಶವಾಗಾರಕ್ಕೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. 2023ರ ಹಜ್ ಯಾತ್ರೆ ಸಂದರ್ಭದಲ್ಲಿ ವಿವಿಧ ದೇಶಗಳ ಕನಿಷ್ಠ 240 ಯಾತ್ರಿಕರು ಸಾವನ್ನಪ್ಪಿದ್ದರು ಎಂದು ಅರಬ್ ರಾಜತಾಂತ್ರಿಕರು ತಿಳಿಸಿದ್ದಾರೆ.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸೌದಿ ಅರೇಬಿಯಾದ ಮಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಬಕ್ರೀದ್ ಮುನ್ನಾದಿನ ಅಥವಾ ‘ದುಲ್ ಹಜ್’ ತಿಂಗಳ ಒಂಬತ್ತರಂದು ಹಜ್ ಯಾತ್ರಿಕರು ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ.































































error: Content is protected !!
Scroll to Top